ಕೊಪ್ಪಳ: ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಿದೆ. ಇದು ರೈತರಲ್ಲಿ ಮಂದಹಾಸ ಮೂಡಿಸಿದೆ.
ಕೊಪ್ಪಳ, ಮುನಿರಾಬಾದ್, ಅಳವಂಡಿ, ಕುಕನೂರು, ಯಲಬುರ್ಗಾ, ಕುಷ್ಟಗಿ, ಕನಕಗಿರಿ, ಕಾರಟಗಿ ಮತ್ತು ತಾವರಗೇರಾ ಭಾಗದಲ್ಲಿ ಸುರಿದ ಸಾಧಾರಣ ಮಳೆಯಿಂದಾಗಿ ಜನರ ನಿತ್ಯದ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ. ಕೊಪ್ಪಳ ತಾಲ್ಲೂಕಿನಲ್ಲಿ 1, ಕುಕನೂರು ತಾಲ್ಲೂಕು 5 ಹಾಗೂ ಕಾರಟಗಿ ತಾಲ್ಲೂಕಿನಲ್ಲಿ 4 ಸೇರಿ ಒಟ್ಟು ಹತ್ತು ಮನೆಗಳು ಭಾಗಶಃ ಕುಸಿದಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮುಂಗಾರು ಪ್ರವೇಶದ ಆರಂಭದ ದಿನಗಳಲ್ಲಿ ನಿಗದಿತ ಸಮಯಕ್ಕೆ ಮಳೆಯಾಗದ ಕಾರಣ ರೈತರು ಅತಂಕಗೊಂಡಿದ್ದರು. ಮತ್ತೆ ಬರವೇ ಗತಿ ಎನ್ನುವ ನಿರಾಶೆ ಭಾವನೆ ಹೊಂದಿದ್ದರು. ಆದರೆ, ಈಗ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆಗಳಿಗೆ ಹೊಸ ಉತ್ಸಾಹ ಬಂದಿದೆ. ಕೃಷಿ ಚಟುವಟಿಕೆ ಇನ್ನಷ್ಟು ಚುರುಕುಗೊಳಿಸಲು ಅನುಕೂಲವಾಗಿದೆ.
ಜಿಲ್ಲೆಯಲ್ಲಿ ಒಟ್ಟು 3.08 ಲಕ್ಷ ಹೆಕ್ಟೇರ್ ಭೂಮಿ ಬಿತ್ತನೆ ಪ್ರದೇಶವಿದ್ದು ಜೂನ್ ಅಂತ್ಯದ ವೇಳೆಗೆ 91,932 ಹೆಕ್ಟೇರ್ ಭೂಮಿ ಮಾತ್ರ ಬಿತ್ತನೆಯಾಗಿತ್ತು. ಬಳಿಕ ಮಳೆಯಾಗಿದ್ದರಿಂದ ಈಗ 1.60 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ಭಾಗದಲ್ಲಿ 60 ಸಾವಿರ ಹೆಕ್ಟೇರ್ ಭತ್ತ ಬಿತ್ತನೆ ಪ್ರದೇಶವಿದ್ದು, ಆಗಸ್ಟ್ 15ರ ಬಳಿಕ ಅಲ್ಲಿ ಬಿತ್ತನೆ ಆರಂಭವಾಗಲಿದೆ. ಈ ಪ್ರದೇಶಗಳಿಗೆ ತುಂಗಭದ್ರಾ ಜಲಾಶಯದಿಂದ ಕಾಲುವೆಗಳ ಮೂಲಕ ಬರುವ ನೀರೇ ಆಧಾರವಾಗಿದೆ.
ಮಳೆ ವಿವರ: ಗುರುವಾರದ ಬೆಳಿಗ್ಗೆ ಎಂಟು ಗಂಟೆಅಂತ್ಯಕ್ಕೆ ಕೊಪ್ಪಳ (5.4 ಮೀ.ಮೀ. ಗಳಲ್ಲಿ), ಇರಕಲ್ಲಗಡ 8, ಹಿಟ್ನಾಳ 3.1, ಅಳವಂಡಿ 2.8, ಮುನಿರಾಬಾದ್ 4.4, ಹಿರೇಸಿಂಧೋಗಿ 10, ಕಿನ್ನಾಳ 5.8, ಗುಳದಳ್ಳಿ 5.8, ಕುಷ್ಟಗಿ, 6.4, ಹನುಮಸಾಗರ, 5.1, ಹನುಮನಾಳ 9.4, ದೋಟಿಹಾಳ 3.1, ಕಿಲ್ಲಾರಹಟ್ಟಿ 0.8, ಕನಕಗಿರಿ 4.2, ಹುಲಿಹೈದರ 3.2, ನವಲಿ 1.0, ಗಂಗಾವತಿ 2.5, ಮರಳಿ 10.2, ವಡ್ಡರಹಟ್ಟಿ 5.0 ಮೀ.ಮಿ. ನಷ್ಟು ಮಳೆ ಸುರಿದಿದೆ.
Highlights - ಮಳೆಯ ನಡುವೆಯೂ ಬದುಕಿನ ಬಂಡಿ ಸಾಗಿಸಿದ ಜನ ನಿತ್ಯದ ಜನಜೀವನದ ಮೇಲೆ ಮಳೆಯ ಪರಿಣಾಮ ಮುಂಗಾರು ಹಂಗಾಮಿನ ಬಿತ್ತನೆ 1.60 ಲಕ್ಷ ಹೆಕ್ಟೇರ್
Cut-off box - ಬೆಳೆ ಕಟಾವು ಪ್ರಯೋಗಕ್ಕೆ ಚಾಲನೆ ಕೊಪ್ಪಳ: ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಗ್ರಾಮ ಪಂಚಾಯಿತಿ ಮತ್ತು ಹೋಬಳಿವಾರು ಬೆಳೆ ಕಟಾವು ಪ್ರಯೋಗ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಗುರುವಾರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಟಾವು ಪ್ರಯೋಗಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಮುಖ್ಯ ಬೆಳೆಗಳು ಹಾಗೂ ಇತರೆ ಬೆಳೆಗಳನ್ನು ತಾಲ್ಲೂಕುವಾರು ಪರಿಗಣಿಸಬೇಕು. ಕಂದಾಯ ಗ್ರಾಮೀಣಾಭಿವೃದ್ಧಿ ಸೇರಿದಂತೆ ಸ್ಥಳೀಯ ತಾಲ್ಲೂಕು ಹೋಬಳಿ ಮಟ್ಟದ ಕೃಷಿ ತೋಟಗಾರಿಕಾ ಸೇರಿದಂತೆ ಇನ್ನಿತರ ಇಲಾಖೆಗಳ ಮೂಲಕ ಅಧಿಕಾರಿಗಳು ಕಡ್ಡಾಯವಾಗಿ ಬೆಳೆ ಅಂದಾಜು ಸಮೀಕ್ಷೆಯಲ್ಲಿ ಭಾಗಿಯಾಗಬೇಕು’ ಎಂದರು. ‘ಜಿಲ್ಲೆಯ ಹೋಬಳಿ ಮಟ್ಟಕ್ಕೆ ಅಧಿಸೂಚಿಸಿದ ನೀರಾವರಿ ಮಳೆ ಆಶ್ರಿತ ಭತ್ತ ನೀರಾವರಿ ಆಶ್ರಿತ ಮೆಕ್ಕೆಜೋಳ ನೀರಾವರಿ ಹಾಗೂ ಮಳೆ ಆಶ್ರಿತ ಜೋಳ ನೀರಾವರಿ ಹಾಗೂ ಮಳೆ ಆಶ್ರಿತ ಸಜ್ಜೆ ನೀರಾವರಿ ಮತ್ತು ಮಳೆ ಆಶ್ರಿತ ತೊಗರಿ ಮಳೆ ಆಶ್ರಿತ ಹುರಳಿ ನೀರಾವರಿ ಆಶ್ರಿತ ಸೂರ್ಯಕಾಂತಿ ಬೆಳೆಗಳಿಗೆ ಜುಲೈ 31ರವರೆಗೆ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಮಾನೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಪಿ.ಎಂ.ಮಲ್ಲಯ್ಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಎಂಜಿನಿಯರ್ ಹರ್ಷವರ್ದನ್ ಎಸ್. ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಸಹಾಯಕ ಸಾಂಖ್ಯಿಕ ಅಧಿಕಾರಿ ಮಂಜುಳಾ ರೇಷ್ಮೆ ಇಲಾಖೆಯ ಅಕ್ಕಮಹಾದೇವಿ ಬಡಿಗೇರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.