ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ತಾಲೂಕಿನ ಆಗೋಲಿ ಗ್ರಾಮದ ದಲಿತ ಯುವತಿ, ವಿಠಲಾಪುರ ಗ್ರಾಮದ ಯುವಕ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆಯಿಂದ ಕಳೆದ ವರ್ಷ ಮದುವೆಯಾಗಿದ್ದರು. ಯುವತಿ ದಲಿತ ಸಮುದಾಯಕ್ಕೆ ಸೇರಿದ್ದಾಳೆ ಎಂಬ ಕಾರಣಕ್ಕೆ ಯುವಕನ ಕುಟುಂಬದವರು ಪದೇ ಪದೇ ಕಿರುಕುಳ ನೀಡುತ್ತಿದ್ದರು. ಈಚೆಗೆ ಯುವಕನ ಕುಟುಂಬದ ಸದಸ್ಯರು ಯುವತಿಗೆ ವರದಕ್ಷಿಣೆ ಕಿರುಕುಳ ಜತೆಗೆ ಮಾನಸಿಕವಾಗಿ ಹಿಂಸಿಸಿ, ದೈಹಿಕ ಹಲ್ಲೆ ನಡೆಸಿ, ಊಟದಲ್ಲಿ ವಿಷ ಬೆರೆಸಿ ಉಣಬಡಿಸಿ ಹತ್ಯೆ ಮಾಡಲಾಗಿದೆ ಎಂದು ಯುವತಿಯ ತಂದೆ ದೂರಿನ್ವಯ ಪ್ರಕರಣ ದಾಖಲಿಸಲಾಗಿದೆ. ದಲಿತರ ಮೇಲೆ ಹಲ್ಲೆ, ಅತ್ಯಾಚಾರ, ಹತ್ಯೆಯಂತಹ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟು ಜರುಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕಿದೆ. ದಲಿತರು ಬಡಜನರು ಆಗಿರುವುದರಿಂದ ಜೀವಗಳ ಹಾನಿಯಿಂದ ಬದುಕು ಮೂರಾಬಟ್ಟೆಯಾಗುತ್ತಿದ್ದು, ಸರ್ಕಾರವು ಹತ್ಯೆಯಾದ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.