ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ | ಆರಂಭವಾಗದ ಬಸ್‌ ನಿಲ್ದಾಣದ ಕ್ಯಾಂಟೀನ್

Published 6 ಜನವರಿ 2024, 5:18 IST
Last Updated 6 ಜನವರಿ 2024, 5:18 IST
ಅಕ್ಷರ ಗಾತ್ರ

ಕುಷ್ಟಗಿ: ಪಟ್ಟಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಉಪಾಹಾರ ಗೃಹ ಕಾರ್ಯಾರಂಭ ಮಾಡಿಲ್ಲ. ಇದರಿಂದ ಪಟ್ಟಣಕ್ಕೆ ಬರುವ ಪ್ರಯಾಣಿಕರು, ಸಂಸ್ಥೆಯ ನೌಕರರು ಹೊರಗಿನ ಉಪಹಾರ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ.

ಸುಸಜ್ಜಿತ ಕಟ್ಟಡ ಇದ್ದರೂ ಉಪಾಹಾರಗೃಹವನ್ನು ಮಾತ್ರ ಆರಂಭಿಸಲು ಈಶಾನ್ಯ ಸಾರಿಗೆ ಸಂಸ್ಥೆ ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಕೊಪ್ಪಳ ಹೊರತುಪಡಿಸಿದರೆ ನಿತ್ಯ ಹೆಚ್ಚು ಬಸ್‌ಗಳು ಮತ್ತು ಸಾವಿರಾರು ಪ್ರಯಾಣಿಕರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.ಸಂಸ್ಥೆಯ ನೂರಾರು ಚಾಲಕರು, ನಿರ್ವಾಹಕರು ಚಹಾ, ಊಟ, ಉಪಹಾರಕ್ಕೆ ಎಲ್ಲೆಂದರಲ್ಲಿ ಅಲೆದಾಡುವ ಸ್ಥಿತಿ ಇದೆ.

‘ಅನಿವಾರ್ಯ ಕಾರಣಕ್ಕೆ ಸಂಸ್ಥೆಯ ಸಿಬ್ಬಂದಿ, ವೃದ್ಧರು, ಮಹಿಳೆಯರು, ಮಕ್ಕಳು ಸೇರಿ ಪ್ರಯಾಣಿಕರು ನಿಲ್ದಾಣ ಬಿಟ್ಟು ರಸ್ತೆ ಬದಿಯಲ್ಲಿನ ಸೈಕಲ್‌ ಬಂಡಿ ಹೋಟೆಲ್‌ಗಳ ಉಪಾಹಾರ ಸೇವಿಸುವಂತಾಗಿದೆ. ನಿಲ್ದಾಣದಲ್ಲಿ ಉಪಾಹಾರಗೃಹ ಕಾರ್ಯಾರಂಭ ಮಾಡಿದ್ದರೆ ಈ ಎಲ್ಲ ಜನರಿಗೂ ಬಹಳಷ್ಟು ಅನುಕೂಲವಾಗುತ್ತದೆ’ ಎಂದು ಪ್ರಯಾಣಿಕರಾದ ರಾಘವೇಂದ್ರ ಅಗಸಿಮುಂದಿನ, ವೀರಭದ್ರಯ್ಯ ಮಠಪತಿ ಅಸಮಾಧಾನ ಹೊರಹಾಕಿದರು.

ನಿಲ್ದಾಣದಲ್ಲೇ ಅನಧಿಕೃತ ಹೋಟೆಲ್: ಉಪಹಾರಗೃಹಕ್ಕೆ ಬೀಗ ಜಡಿದಿರುವ ಸಾರಿಗೆ ಸಂಸ್ಥೆ ನಿಲ್ದಾಣದ ಒಳಗೇ ಅನಧಿಕೃತ ಹೋಟೆಲ್‌ಗಳನ್ನು ನಡೆಸುವುದಕ್ಕೆ ಸಮ್ಮತಿ ನೀಡಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ. ಬೇರೆ ಉದ್ದೇಶಕ್ಕೆ ಮಳಿಗೆ ಬಾಡಿಗೆ ಪಡೆದ ವ್ಯಕ್ತಿಗಳು ನಿಲ್ದಾಣದ ಜಾಗವನ್ನು ಅತಿಕ್ರಮಿಸಿ ಅನಧಿಕೃತವಾಗಿ ಹೋಟೆಲ್‌ ನಡೆಸುತ್ತಿದ್ದಾರೆ. ಅದೇ ಜಾಗದಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳವೂ ಇದ್ದು ದಾರಿ ಇಕ್ಕಟ್ಟಾಗಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ.

ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಘಟಕ ವ್ಯವಸ್ಥಾಪಕ ಸುಂದರಗೌಡ ಪಾಟೀಲ, ಇಬ್ಬರು ವ್ಯಕ್ತಿಗಳು ಅನಧಿಕೃತ ಹೋಟೆಲ್‌ ನಡೆಸಲು ಪೈಪೋಟಿಗಿಳಿದಿದ್ದಾರೆ, ಇಬ್ಬರಿಗೂ ಮಳಿಗೆ ಬೀಗ ಹಾಕುತ್ತೇವೆಂಬ ಎಚ್ಚರಿಕೆ ನೀಡಲಾಗಿದೆ. ದಂಡವನ್ನೂ ವಿಧಿಸಲಾಗಿದೆ. ಇಬ್ಬರ ಪರವಾನಗಿಯನ್ನೂ ರದ್ದುಪಡಿಸುವಂತೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಕಟ್ಟಡ ಕೆಡಹುವ ಹುನ್ನಾರ?

ಉಪಹಾರಗೃಹ ಕಟ್ಟಡ ಸುಸಜ್ಜಿತವಾಗಿದೆ. ಆದರೆ ಹೊಸ ನಿಲ್ದಾಣಕ್ಕೆ ಹೊಸ ಉಪಾಹಾರಗೃಹ ಕಟ್ಟಡ ಅಗತ್ಯ ಎಂಬ ನೆಪ ಒಡ್ಡಿ ಗಟ್ಟಿಮುಟ್ಟಾಗಿರುವ ಕಟ್ಟಡವನ್ನು ನೆಲಸಮಗೊಳಿಸಿ ಮತ್ತೆ ಲಕ್ಷಾಂತರ ಹಣದಲ್ಲಿ ಹೊಸ ಕಟ್ಟಡ ನಿರ್ಮಿಸುವ ಹುನ್ನಾರ ನಡೆಯುತ್ತಿದೆ. ಈಗಾಗಲೇ ಈಶಾನ್ಯ ಸಾರಿಗೆ ಸಂಸ್ಥೆ ನಷ್ಟ ಅನುಭವಿಸುತ್ತಿದೆ. ಆದರೆ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಇದ್ದ ಕಟ್ಟಡವನ್ನು ಬಳಕೆ ಮಾಡದೆ ತೆರವುಗೊಳಿಸಲು ಮುಂದಾಗಿದ್ದಾರೆ ಎಂದು ಹೆಸರು ಬಹಿರಂಗಪಡಿಸದ ವಿಭಾಗೀಯ ಕಚೇರಿಯ ಸಿಬ್ಬಂದಿ ದೂರಿದರು.

ಉಪಹಾರಗೃಹ ಆರಂಭಿಸದಿರುವುದಕ್ಕೆ ಏನು ಕಾರಣ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ವೆಂಕಟೇಶ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೊಪ್ಪಳ
ಕುಷ್ಟಗಿ ಬಸ್‌ ನಿಲ್ದಾಣದ ಒಳಗೆ ಅನಧಿಕೃತ ಹೋಟೆಲ್‌ ವಾಹನಗಳಿಂದಾಗಿ ಜನ ಸಂಚಾರಕ್ಕೆ ಅಡ್ಡಿಯಾಗಿರುವುದು
ಕುಷ್ಟಗಿ ಬಸ್‌ ನಿಲ್ದಾಣದ ಒಳಗೆ ಅನಧಿಕೃತ ಹೋಟೆಲ್‌ ವಾಹನಗಳಿಂದಾಗಿ ಜನ ಸಂಚಾರಕ್ಕೆ ಅಡ್ಡಿಯಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT