ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ಬರ ಅಧ್ಯಯನ ತಂಡ ಭೇಟಿ, ಬರ ಸ್ಥಿತಿ ಮನವರಿಕೆಗೆ ಜಿಲ್ಲಾಡಳಿತ ಪ್ರಯತ್ನ

Published 6 ಅಕ್ಟೋಬರ್ 2023, 16:06 IST
Last Updated 6 ಅಕ್ಟೋಬರ್ 2023, 16:06 IST
ಅಕ್ಷರ ಗಾತ್ರ

ಕುಷ್ಟಗಿ: ಬರ ಪರಿಸ್ಥಿತಿ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ತಾಲ್ಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಆದರೆ, ಒಣಗಿ ನಿಂತ ಬೆಳೆಗಳಿರುವ ಹೊಲಗಳ ಬದಲು ಜಿಲ್ಲೆಯ ಅಧಿಕಾರಿಗಳು ಅಧ್ಯಯನ ತಂಡವನ್ನು ಹಸಿರು ಹೊಲಗಳಿಗೆ ಕರೆದೊಯ್ದ ಬರ ಪರಿಸ್ಥಿತಿಯ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಲ್ಲಿ ಪರದಾಡಿದ್ದು ಕಂಡುಬಂದಿತು.

ತಾಲ್ಲೂಕಿನ ದೊಣ್ಣೆಗುಡ್ಡ, ಬೆನಕನಾಳ, ಬಾದಿಮನಾಳ, ಯರಗೇರಾ, ಚಳಗೇರಾ ಗ್ರಾಮಗಳ ಸೀಮಾಂತರದಲ್ಲಿ ಸಂಚರಿಸಿ ಕೃಷಿ, ತೋಟಗಾರಿಕೆ ಬೆಳೆಗಳು ಹಾಳಾಗಿರುವುದನ್ನು ವೀಕ್ಷಿಸಿದ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ.ರಾಜಶೇಖರ್ ನೇತೃತ್ವದ ತಂಡ ಜಿಲ್ಲೆಯ ಅಧಿಕಾರಿಗಳಿಂದ ಪೂರಕ ಮಾಹಿತಿ ಪಡೆದು ನಂತರ ರೈತರ ಸಮಸ್ಯೆಗಳನ್ನು ಆಲಿಸಿತು.

ಮೆಕ್ಕೆಜೋಳ, ಸಜ್ಜೆ, ಹತ್ತಿ ಇತರೆ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿವೆ. ಮಸಾರಿ ಜಮೀನಿನಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಇತ್ತೀಚೆಗೆ ಮಳೆಯಾದರೂ ಪ್ರಯೋಜನವಿಲ್ಲದಂತಾಗಿದೆ. ಬದುಕು ಸವೆಸುವುದು ಕಷ್ಟದ ಕೆಲಸವಾಗಿದೆ ಎಂದು ಅನೇಕ ರೈತರು ತಂಡದ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು. ಅಷ್ಟೇ ಅಲ್ಲದೆ ‘ರೈತರೊಬ್ಬರು ಹಾನಿಯಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಾವೇ ಗತಿ’ ಎಂದೂ ಹೇಳಿದ್ದು ಕೇಳಿಬಂದಿತು.

ಕಳೆದ ತಿಂಗಳು ಮಳೆಯಾಗಿದ್ದರಿಂದ ತಂಡ ಭೇಟಿ ನೀಡಿದ ಕೆಲ ಪ್ರದೇಶಗಳಲ್ಲಿ ಹಸಿರುಹೊದ್ದ ಬೆಳೆಗಳು ಕಂಡುಬಂದವು. ಮಳೆಯಾದರೂ ಇಳುವರಿಗೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ ಎನ್ನುವ ಮೂಲಕ ಹಿಂದೆ ಒಣ ಬರ ಈಗ ಹಸಿ ಬರ ಉಂಟಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಡುವುದಕ್ಕೆ ಜಿಲ್ಲಾಧಿಕಾರಿ ಹಾಗೂ ಹಲವು ಇಲಾಖೆಗಳ ಅಧಿಕಾರಿಗಳು ತಂಡದ ಮುಂದೆ ಪ್ರಯಾಸ ಪಡುತ್ತಿದ್ದುದು ಕಂಡುಬಂದಿತು.

ಅಧ್ಯಯನ ತಂಡದೊಂದಿಗೆ ಭೇಟಿ ನೀಡಿದ ಸಂಸದ ಸಂಗಣ್ಣ ಕರಡಿ ‘ಮಳೆಯಿಲ್ಲದೆ ಬೆಳೆಗಳು ಈ ಹಿಂದೆ ಒಣಗಿಹೋಗಿದ್ದವು, ಈಗ ಮಳೆಯಾಗಿದ್ದರಿಂದ ಮೇಲ್ನೋಟಕ್ಕೆ ಹಸಿರು ಚಿಗುರಿದ್ದರೂ ಅದರಿಂದ ಜನ ಜಾನುವಾರುಗಳಿಗೆ ಯಾವುದೇ ಉಪಯೋಗವಿಲ್ಲ, ಈ ಎಲ್ಲ ಅಂಶಗಳನ್ನು ಗಮನಿಸಿ ವರದಿಯಲ್ಲಿ ಪ್ರಸ್ತಾಪಿಸಬೇಕು’ ಎಂದು ಕೋರಿದರು.

ಕೇಂದ್ರ ಸರ್ಕಾರದ ಪಶುಸಂಗೋಪನೆ ಇಲಾಖೆ ನಿರ್ದೇಶಕ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ ಮೋತಿರಾಂ, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ, ಉಪ ವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕುಷ್ಟಗಿ ತಹಶೀಲ್ದಾರ್ ಶೃತಿ ಮಳ್ಳಪ್ಪಗೌಡ, ಜಂಟಿ ಕೃಷಿ ನಿರ್ದೇಶಕ ರುದ್ದೇಶಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಆಧಾರ್‌, ರೇಷನ್‌ ಕಾರ್ಡ್ ಇಲ್ರೀ ಎಂದ ಅಜ್ಜಿ....

ಕೇಂದ್ರ ಬರ ಅಧ್ಯಯನ ತಂಡದವರು ಪರಿಶೀಲನೆ ನಡೆಸುವಾಗ ಕುಷ್ಟಗಿ ತಾಲ್ಲೂಕಿನ ದೊಣ್ಣೆಗುಡ್ಡ ಗ್ರಾಮದಲ್ಲಿ ಅಜ್ಜಿಯೊಬ್ಬರಿಗೆ ಆಧಾರ್‌ ಹಾಗೂ ರೇಷನ್‌ ಇಲ್ಲ ಎನ್ನುವ ಮಾಹಿತಿ ಬಹಿರಂಗವಾಯಿತು.

ತಂಡದಲ್ಲಿದ್ದ ಸದಸ್ಯ ಕರೀಗೌಡ ಅವರು ಬಸಮ್ಮ ಎಂಬುವವರಿಂದ ಬೆಳೆ ಹಾನಿ ಬಗ್ಗೆ ಮಾಹಿತಿ ಪಡೆದರು. ಬೆಳೆಯಿಲ್ಲದೇ ಜೀವನ ಹೇಗೆ ನಡೆಯುತ್ತಿದೆ ಎಂದು ಕೇಳಿದರು. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮಾಸಿಕ ₹2,000 ಬರುತ್ತಿದೆಯೇ? ಎಂದು ಪ್ರಶ್ನಿಸಿದರು. ’ಬೆಳೆ ಇಲ್ಲ. ಆಧಾರ್‌ ಕಾರ್ಡ್‌, ಪಡಿತರ ಕಾರ್ಡ್‌ ಕೂಡ ಇಲ್ಲ’ ಎಂದು ಅಜ್ಜಿ ಬೇಸರ ತೋಡಿಕೊಂಡರು. ಸ್ಥಳದಲ್ಲಿಯೇ ಇದ್ದ ಸಹಾಯಕ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್‌ ’ಆದ್ಯತೆ ಮೇರೆಗೆ ಅಜ್ಜಿಗೆ ದಾಖಲೆಗಳನ್ನು ಮಾಡಿಸಿ ಕೊಡಿ’ ಎಂದು ಸೂಚಿಸಿದರು.

ಕೇಂದ್ರ ತಂಡಕ್ಕೆ ಸಮರ್ಪಕ ಮಾಹಿತಿ: ಅತುಲ್‌

ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಮಾತನಾಡಿ ‘ಜಿಲ್ಲೆಯ ಬರ ಪರಿಸ್ಥಿತಿಯನ್ನು ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಒಟ್ಟು ₹1,430 ಕೋಟಿ ಬೆಳೆ ಹಾನಿಯಾಗಿದ್ದು, ನಿಯಮಗಳ ಪ್ರಕಾರ ಹಾನಿಯ ಮೌಲ್ಯ ₹840 ಕೋಟಿ ಆಗಬಹುದು. ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಪೂರೈಕೆಗೆ ಬೇಕಾಗುವ ಆರ್ಥಿಕ ನೆರವಿನ ಬಗ್ಗೆ ಕೇಂದ್ರ ತಂಡಕ್ಕೆ ವಿವರಿಸಿದ್ದೇವೆ’ ಎಂದು ತಿಳಿಸಿದರು.

‘ಮಳೆಯಾಗಿರುವ ಕಡೆ ತಂಡವನ್ನು ಕರೆದೊಯ್ದಿದ್ದರೂ ಅಲ್ಲಿ ಹಸಿರು ಬರವಿದೆ. ಕೊಳವೆಬಾವಿಯ ನೀರಿನಲ್ಲಿ ಬೆಳೆ ಬೆಳೆದರೂ ಇಳುವರಿಯಲ್ಲಿ ಬಹಳಷ್ಟು ನಷ್ಟ ಉಂಟಾಗಿರುವುದನ್ನು ತಂಡಕ್ಕೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT