ಗುರುವಾರ , ಆಗಸ್ಟ್ 18, 2022
24 °C
ಅಗತ್ಯ ವಸ್ತು: ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ

ಬೆಲೆ ಏರಿಕೆ: ಸಿಹಿ ಹಂಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಅಗತ್ಯ ವಸ್ತುಗಳು ಮತ್ತು ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ನಗರದ ಕಿಶೋರಿ ಪೆಟ್ರೋಲ್‌ ಪಂಪ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಹಕರಿಗೆ ಹೂ, ಸಿಹಿ ನೀಡಿ ‘100 ನಾಟ್‌ಔಟ್’ ಎಂದು ವ್ಯಂಗ್ಯವಾಗಿ ಹೇಳಿ ಬೆಲೆ ಏರಿಸುವ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಬಾರದು ಎಂದು ಹೇಳಿ ಜನರಿಗೆ ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ,‘ಸುಳ್ಳು ಹೇಳುತ್ತಲೇ ಬಿಜೆಪಿ ನಾಯಕರು ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ. ಅಚ್ಛೆ ದಿನ್ ಎಂದು ಹೇಳುತ್ತಾ, ಅಗತ್ಯ ವಸ್ತುಗಳ ಬೆಲೆ ಏರಿಸುತ್ತಿದ್ದಾರೆ. ಇಂಧನ ಬೆಲೆ ಏರಿಕೆ ಖಂಡಿಸಿ ಇದೇ ಬಿಜೆಪಿ ನಾಯಕರು ಸೈಕಲ್ ಯಾತ್ರೆ ಮಾಡಿದ್ದರು. ಇವರ ಜನ್ಮಕ್ಕೆ ನಾಚಿಕೆಯಾಗಬೇಕು’ ಎಂದು ಜರಿದರು.

ಮೊದಲೇ ಜನರು ಕೊರೊನಾ, ಲಾಕ್‌ಡೌನ್‌ನಿಂದ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಅಂಥದರಲ್ಲಿ ಅಗತ್ಯ ವಸ್ತುಗಳ ಬೆಲೆ ದಿನ ಕಳೆದಂತೆ ಗಗನಕ್ಕೇರುತ್ತಿದೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100ಕ್ಕೆ ಏರಿಕೆಯಾಗಿದೆ. ಇದೇ ಪ್ರಧಾನಿ ನರೇಂದ್ರ ಮೋದಿ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ಶಾಸಕ ಅಮರೇಗೌಡ ಬಯ್ಯಾಪುರ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿರುವುದರಿಂದಲೇ ರಾಜ್ಯ ಬಡವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿ, ರಾಜ್ಯ, ದೇಶದಲ್ಲಿ ಬಿಜೆಪಿ ಆಡಳಿತ ಸಂಪೂರ್ಣ ವಿಫಲವಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಬಡವರು ಒಪ್ಪೊತ್ತಿನ ಊಟಕ್ಕೂ ಪರದಾಡಬೇಕಾಗುತ್ತದೆ. ಕೊರೊನಾದಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ ಎಂದರು. ಮುಖಂಡರಾದ ಕಿಶೋರಿ ಬೂದನೂರು, ಮಾನ್ವಿ ಪಾಷಾ, ಅಕ್ಬರ್‌ಪಲ್ಟನ್, ರವಿ ಕುರುಗೋಡ, ಮುತ್ತುರಾಜ ಕುಷ್ಟಗಿ ಮುಂತಾದವರು ಇದ್ದರು.

‘ಜನರಿಗೆ ಸಂಕಷ್ಟ’

ಕುಷ್ಟಗಿ: ಪೆಟ್ರೋಲ್‌ ದರ ಹೆಚ್ಚಳ ಖಂಡಿಸಿ ಇಲ್ಲಿಯ ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಪರಿಶಿಷ್ಟ ವಿಭಾಗದ ಕಾರ್ಯಕರ್ತರು ಶುಕ್ರವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಿಕೋಟಿಕರ್‌ ಪೆಟ್ರೋಲ್‌ ಬಂಕ್‌ನಲ್ಲಿ ಪ್ರತಿ ಲೀಟರ್‌ಗೆ ₹100 ದರ ಇತ್ತು. ಕಾಂಗ್ರೆಸ್‌ ಪಕ್ಷದ ಸೂಚನೆಯಂತೆ ಬಂಕ್‌ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮುಖಂಡರು ವಾಹನಗಳಿಗೆ ಇಂಧನ ಭರ್ತಿ ಮಾಡಿಕೊಳ್ಳಲು ಬರುವ ಗ್ರಾಹಕರಿಗೆ ಸಿಹಿ ಹಂಚುವ ಮೂಲಕ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅಧ್ಯಕ್ಷ ಮಂಜುನಾಥ ಕಟ್ಟಿಮನಿ, ಇತರೆ ಪ್ರಮುಖರು,‘ಪೆಟ್ರೋಲ್‌, ಡಿಸೇಲ್‌ ಬೆಲೆ ನಿತ್ಯವೂ ಹೆಚ್ಚುತ್ತಿದ್ದು, ಇದು ಸರಕು ಸಾಗಣೆ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಉಂಟುಮಾಡಿದೆ. ಇದರಿಂದ ಅಗತ್ಯವಸ್ತುಗಳ ಬೆಲೆ ಹೆಚ್ಚುತ್ತಿದೆ’ ಎಂದು ಹೇಳಿದರು.

‘ಅಂತಿಮವಾಗಿ ಇದರ ಹೊರೆ ಜನಸಾಮಾನ್ಯರೇ ಹೊರುವಂತಾಗಿದೆ. ಜನರ ಬದುಕು ದುರ್ಬರವಾಗುತ್ತಿದೆ. ಸರ್ಕಾರವೇ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ ಎಂದರು. ತಾಜುದ್ದೀನ್ ದಳಪತಿ, ಮಂಜುನಾಥ ಟೆಂಗುಂಟಿ, ಮುರುಳಿ ಹಿರೇಮನಿ, ಎಂ.ಡಿ. ಯೂಸೂಫ್, ಅಮರೇಶ ಕಾಮನೂರ, ತೊಂಡೆಪ್ಪ ಚೂರಿ, ಪ್ರಮೋದ ಬಡಿಗೇರ, ಸದ್ದಾಂ ಹಾಗೂ ಮಹಿಬೂಬುಸಾಬ್ ದಾದಿಬಾಯಿ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು