ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ತಾಯಿ, ಮಕ್ಕಳ ಆರೋಗ್ಯಕ್ಕೆ ಒತ್ತು ಕೊಡಿ: ಜಿಲ್ಲಾಧಿಕಾರಿ ಸೂಚನೆ

Published 3 ಸೆಪ್ಟೆಂಬರ್ 2023, 14:05 IST
Last Updated 3 ಸೆಪ್ಟೆಂಬರ್ 2023, 14:05 IST
ಅಕ್ಷರ ಗಾತ್ರ

ಕೊಪ್ಪಳ: ‘ಜಿಲ್ಲೆಯಲ್ಲಿನ ತಾಯಂದಿರ ಮತ್ತು ಮಕ್ಕಳ ಆರೋಗ್ಯ ಸ್ಥಿತಿಗತಿಯ ನಿಗಾ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿನ ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ, ಜಿಲ್ಲೆಯಲ್ಲಿ ಐದು ವರ್ಷದೊಳಗಿನ ತೀವ್ರ ಅಪೌಷ್ಟಿಕ ಮಕ್ಕಳ ವಿವರ, ಫ್ಲೂರೋಸಿಸ್ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು.

‘ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಜುಲೈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 10,710 ಗರ್ಭಿಣಿಯರು 4 ಅಥವಾ ಹೆಚ್ಚಿನ ಎಎನ್‌ಸಿ ತಪಾಸಣೆಗೆ ಹೆಸರು ನೋಂದಾಯಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ 10, ಗಂಗಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಕುಷ್ಟಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ತಲಾ 6 ಪೌಷ್ಟಿಕ ಪುನಃಶ್ಚೇತನ ಕೇಂದ್ರಗಳಿವೆ. ಜಿಲ್ಲೆಯಲ್ಲಿ ಶಾಲೆ ಮತ್ತು ಸಮುದಾಯ ಸಮೀಕ್ಷೆ ಪ್ರಕಾರ 254 ದಂತ ಫ್ಲೂರೋಸಿಸ್ ಪ್ರಕರಣಗಳು, 91 ಮೂಳೆ ಫ್ಲೋರೋಸಿಸ್ ಪ್ರಕರಣಗಳು, 24 ಮೂಳೆಯೇತರ ಫ್ಲೂರೋಸಿಸ್ ಪ್ರಕರಣಗಳು ದಾಖಲಾಗಿವೆ’ ಎಂದು ಅಧಿಕಾರಿಗಳ ಸಭೆಗೆ ಮಾಹಿತಿ ನೀಡಿದರು.

ಬಳಿಕ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ವಿಶೇಷವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ತಾಯಿ ಮರಣಕ್ಕೆ ಕಾರಣಗಳೇನು ಎಂಬುದನ್ನು ಅರಿತು ಕ್ರಮ ಕೈಗೊಳ್ಳಬೇಕು. ತಾಯಿ ಮರಣ ದರ ಮತ್ತು ಸಿಸೇರಿಯನ್ ಹೆರಿಗೆ ಪ್ರಮಾಣ ಕಡಿಮೆ ಮಾಡಬೇಕು.  ತೀವ್ರ ರಕ್ತ ಹೀನತೆ ಪ್ರಮಾಣವನ್ನು ಶೂನ್ಯಕ್ಕಿಳಿಸಲು ಆದ್ಯತೆ ನೀಡಬೇಕು’ ಎಂದರು.

‘ಕಡಿಮೆ ತೂಕದ ಮಕ್ಕಳನ್ನು ಗುರುತಿಸಿ ಅವರನ್ನು ಮೇಲ್ದರ್ಜೆ ಆಸ್ಪತ್ರೆಗೆ ಕಳುಹಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಜಿಲ್ಲೆಯಲ್ಲಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿಗೆ ವ್ಯವಸ್ಥೆ ಮಾಡಬೇಕು. ಗೃಹ ಆಧಾರಿತ ನವಜಾತ ಶಿಶು ಆರೈಕೆಗೆ ಹೆಚ್ಚಿನ ಒತ್ತು ಕೊಡಬೇಕು’ ಎಂದರು.

ಸಿಡಿಪಿಒಗಳಾದ ಸಿಂಧು ಯಲಿಗಾರ, ಜಯಶ್ರೀ ರಾಜಪುರೋಹಿತ, ವಿರೂಪಾಕ್ಷಿ, ಯಲ್ಲಮ್ಮ ಹಂಡಿ, ರೋಹಿಣಿ ಕೊಟಗಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT