ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ | ಕ್ರೀಡಾಕೂಟ: ಮೈದಾನದತ್ತ ಸುಳಿಯದ ಜನ

ಆನೆಗೊಂದಿ ಉತ್ಸವ: ಬಿಸಿಲಿನ ತಾಪ, ಕ್ರೀಡಾಪಟುಗಳಿಗಿಲ್ಲ ಪ್ರೋತ್ಸಾಹದ ಚಪ್ಪಾಳೆ
Published 10 ಮಾರ್ಚ್ 2024, 4:55 IST
Last Updated 10 ಮಾರ್ಚ್ 2024, 4:55 IST
ಅಕ್ಷರ ಗಾತ್ರ

ಗಂಗಾವತಿ: ಆನೆಗೊಂದಿ ಉತ್ಸವದ ಅಂಗವಾಗಿ ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಎರಡನೇ ದಿನದ ಬಾಲ್ ಬ್ಯಾಡ್ಮಿಂಟನ್, ಹಗ್ಗ-ಜಗ್ಗಾಟ ಕ್ರೀಡಾಕೂಟ ವೀಕ್ಷಕರಿಲ್ಲದೆ ಕ್ರೀಡಾಪಟುಗಳಿಗೆ ಸೀಮಿತವಾಯಿತು.

ಶುಕ್ರವಾರ ಸಂಜೆ ಆರಂಭವಾದ ಹೊನಲು ಬೆಳಕಿನ ಮಹಿಳಾ ಮತ್ತು ಪುರುಷರ ವಾಲಿಬಾಲ್ ಪಂದ್ಯಗಳು ಶನಿವಾರ ಬೆಳಗಿನ ಜಾವದವರೆಗೆ ನಡೆದವು. ಕ್ರೀಡಾಕೂಟ ನಡೆಸುವ ಅಧಿಕಾರಿಗಳು ರಾತ್ರಿ ನಿದ್ದೆಗೆಟ್ಟ ಕಾರಣ ಬೆಳಿಗ್ಗೆ 10ಕ್ಕೆ ನಡೆಯಬೇಕಾದ ಬಾಲ್ ಬ್ಯಾಡ್ಮಿಂಟನ್ ಮಧ್ಯಾಹ್ನ 12ಕ್ಕೆ ಹಾಗೂ ಹಗ್ಗ-ಜಗ್ಗಾಟ ಸ್ಪರ್ಧೆ ಮಧ್ಯಾಹ್ನ 12.30ಕ್ಕೆ ಆರಂಭವಾಯಿತು.

ಕ್ರೀಡೆಗಳ ವೀಕ್ಷಣೆಗೆ ಜನರು ಬರಲಿಲ್ಲ. ಉತ್ಸವದ ಕ್ರೀಡಾಕೂಟ ಮತ್ತು ಕಾರ್ಯಕ್ರಮಗಳ ಪಟ್ಟಿ, ಆಮಂತ್ರಣ ಪತ್ರಿಕೆ ಸರಿಯಾಗಿ ತಲುಪದ ಕಾರಣ ಕ್ರೀಡಾಕೂಟಕ್ಕೆ ಕಡಿಮೆ ಸಂಖ್ಯೆಯ ತಂಡಗಳು ನೋಂದಣಿ ಮಾಡಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಿವೆ. ಸಂಭ್ರಮಕ್ಕೆ ಸಾಕ್ಷಿಯಾಗಬೇಕಿದ್ದ ಆನೆಗೊಂದಿ ಉತ್ಸವ ನೆಪ ಮಾತ್ರಕ್ಕೆ ನಡೆಯುತ್ತಿರುವಂತೆ ಭಾಸವಾಗುತ್ತಿದೆ.

ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳ 8 ತಂಡಗಳು ಭಾಗವಹಿಸಿವೆ. ಪಂದ್ಯಗಳು ಸಂಜೆವರೆಗೆ ನಡೆದವು. ತೃತೀಯ ಸ್ಥಾನಕ್ಕೆ ಬಳ್ಳಾರಿ ಇವೆಂಟ್ಸ್ ಮತ್ತು ಹನುಮಸಾಗರ ತಂಡದ ನಡುವೆ ಸ್ಪರ್ಧೆ ಏರ್ಪಟ್ಟ ಕಾರಣ ಟಾಸ್ ಹಾಕಲಾಯಿತು. ಟಾಸ್‌ನಲ್ಲಿ ಗೆದ್ದ ಬಳ್ಳಾರಿ ಇವೆಂಟ್ಸ್ ತಂಡ ತೃತೀಯ ಸ್ಥಾನ ‍ಪಡೆಯಿತು. ಭಾನುವಾರ ಬೆಳಿಗ್ಗೆ ಗಂಗಾವತಿಯ ಬಿಬಿಸಿಎ ಮತ್ತು ಕೊಪ್ಪಳದ ಬ್ಲೂ ಸ್ಟಾರ್ ತಂಡದ ನಡುವೆ ಫೈನಲ್ ಪಂದ್ಯ ಜರುಗಲಿದೆ.

ಮಧ್ಯಾಹ್ನ ತಾಪಮಾನ ಹೆಚ್ಚಿದ ಕಾರಣ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಕೇವಲ 8 ತಂಡಗಳು ಭಾಗಹಿಸಿದ್ದವು. ಹೊಸಕೇರಾ ಮತ್ತು ಕೆಸರಹಟ್ಟಿ ಗ್ರಾಮದ ಕ್ರೀಡಾಪಟುಗಳ ನಡುವೆ ಫೈನಲ್‌ ಪಂದ್ಯ ನಡೆದಿದ್ದು, ಎರಡೂ ಸುತ್ತಿನಲ್ಲಿ ಹೊಸಕೇರಾ ತಂಡ ಮೇಲುಗೈ ಸಾಧಿಸಿ ಪ್ರಥಮ ಸ್ಥಾನ ಪಡೆಯಿತು. ಕೆಸರಹಟ್ಟಿ ನಾಗರಾಜ ತಂಡ ದ್ವೀತಿಯ ಹಾಗೂ ಹನುಮನಾಳದ ಮಾರುತಿ ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮುಖ್ಯ ವೇದಿಕೆ ಸಿದ್ಧತೆ ಪರಿಶೀಲಿಸಿದ ಶಾಸಕ:

ಶನಿವಾರ ಮಧ್ಯಾಹ್ನ ಶಾಸಕ ಜಿ.ಜನಾರ್ದನರೆಡ್ಡಿ ಆನೆಗೊಂದಿ ಉತ್ಸವದ ಮುಖ್ಯ ವೇದಿಕೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯ ವೀಕ್ಷಿಸಿದರು. ನಂತರ ಮಾತನಾಡಿ,‘ಆನೆಗೊಂದಿಯ ವಿಹಂಗಮ ನೋಟ ಕಣ್ತುಂಬಿಕೊಳ್ಳಲು ಈ ಬಾರಿ ಬೈಸ್ಕೈ ಆಯೋಜನೆ ಮಾಡಿದ್ದು, ₹4 ಸಾವಿರದ ಒಳಗೆ ಆನೆಗೊಂದಿ ಸುತ್ತಲಿನ ಪ್ರದೇಶಗಳನ್ನ ವೀಕ್ಷಣೆ ಮಾಡಬಹುದು. ಮಾ.11, 12ರಂದು ಆನೆಗೊಂದಿ ಉತ್ಸವಕ್ಕೆ ಜನರು ಬರಲು ಗಂಗಾವತಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗೆ ಎರಡು ಬಸ್ ಗಳನ್ನು ಬಿಡಲಾಗಿದೆ’ ಎಂದರು.

ತಹಶೀಲ್ದಾರ್ ಯು.ನಾಗರಾಜ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪೊಲೀಸ್ ಪಾಟೀಲ, ಗ್ರಾಮೀಣ ಪೊಲೀಸ್ ಠಾಣೆ ಪಿಐ ಸೋಮಶೇಖರ ಜುತ್ತಲ್ ಸೇರಿ ಇತರ ಅಧಿಕಾರಿಗಳು ಹಾಜರಿದ್ದರು.

ಮಹಿಳೆಯರ, ಪುರುಷರ ವಾಲಿಬಾಲ್

ಶುಕ್ರವಾರ ಸಂಜೆ ಹೊನಲು ಬೆಳಕಿನ ಮಹಿಳೆಯರ ವಾಲಿಬಾಲ್ ಫೈನಲ್ ಪಂದ್ಯ ಹುಲಗಿ ಮತ್ತು ಕೊಪ್ಪಳದ ಡಿವೈಇಎಸ್ಎಸ್‌ಎ ನಡುವೆ ನಡೆಯಿತು. ಹುಲಗಿ ತಂಡ 25-24, 25-21 ಅಂಕಗಳಿಸಿ ಡಿವೈಇಎಸ್ಎಸ್ಎ ತಂಡದ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದಿದೆ. ಡಿವೈಇಎಸ್ಎಸ್‌ಎ ಕೊಪ್ಪಳ ದ್ವಿತೀಯ, ಜಾಲವಾಡಗಿ ಮುಂಡರಗಿ ತಂಡ ತೃತೀಯ, ಡಿವೈಇಎಸ್ಎಸ್‌ಎ ತಂಡ ನಾಲ್ಕನೇ ಸ್ಥಾನ ಪಡೆದಿದೆ.

ಪುರುಷರ ವಾಲಿಬಾಲ್:

ಹೊನಲು ಬೆಳಕಿನ ಪುರುಷರ ವಾಲಿಬಾಲ್ ಕ್ರೀಡಾಕೂಟದಲ್ಲಿ ಒಟ್ಟು 24 ತಂಡಗಳು ಭಾಗವಹಿಸಿದ್ದು, ಈ ಪಂದ್ಯಗಳು ತಡರಾತ್ರಿ 12 ಗಂಟೆಗೆ ಆರಂಭವಾಗಿ ಬೆಳಗಿನ ಜಾವ 6 ಗಂಟೆವರೆಗೆ ನಡೆದವು. ಮಂಗಳೂರಿನ ಪರಂ ಮತ್ತು ಗಂಗಾವತಿಯ ಎಂ.ಎಸ್.ಧೋನಿ (ಎ) ತಂಡದ ನಡುವೆ ಫೈನಲ್ ಪಂದ್ಯ ನಡೆದಿದ್ದು, ಮಂಗಳೂರಿನ ಪರಂ ತಂಡ 25-23, 24-25, 15-13 ಅಂಕಗಳಿಸಿ ಪ್ರಥಮಸ್ಥಾನ ಪಡೆದಿದೆ.

ಗಂಗಾವತಿಯ ಎಂ.ಎಸ್.ಧೋನಿ (ಎ) ತಂಡ ದ್ವಿತೀಯ, ಕಮಲಾಪುರ ತಂಡ ತೃತೀಯ, ಗಂಗಾವತಿಯ ಎಂ.ಎಸ್.ಧೋನಿ (ಎ) ತಂಡ ನಾಲ್ಕನೇ ಸ್ಥಾನ ಪಡೆದಿದೆ. ವಾಲಿಬಾಲ್ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹30 ಸಾವಿರ, ದ್ವಿತೀಯ  ₹25 ಸಾವಿರ, ತೃತೀಯ ₹20 ಸಾವಿರ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ₹15 ಸಾವಿರ ಬಹುಮಾನ ವಿತರಿಸಲಾಗುತ್ತಿದೆ.

ಗಮನಸೆಳೆದ ಅಂಗವಿಕಲರ ಕಬಡ್ಡಿ ಪಂದ್ಯ

ಆನೆಗೊಂದಿ ಉತ್ಸವದ ಅಂಗವಾಗಿ ಶನಿವಾರ ಸಂಜೆ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹೊನಲು ಬೆಳಕಿನ ಅಂಗವಿಕಲರ ಕಬಡ್ಡಿ ಪಂದ್ಯಗಳು ಪ್ರೇಕ್ಷಕರ ಸಿಳ್ಳೆ–ಕೇಕೆಯ ನಡುವೆ ರೋಮಾಂಚನವಾಗಿ ಜರುಗಿದವು.

ಹರಪನಳ್ಳಿ ಮತ್ತು ಕೊಪ್ಪಳ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಎರಡು ಸುತ್ತಿನಲ್ಲಿ ಕೊಪ್ಪಳ ಹರಪನಹಳ್ಳಿ ತಂಡದ ವಿರುದ್ಧ 9 ಪಾಯಿಂಟ್‌ ಗಳಿಸಿ, ಜಯ ಸಾಧಿಸಿತು.

ಒಟ್ಟು ಮೂರು ಅಂಗವಿಕಲರ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಇದರಲ್ಲಿ ಕಿಷ್ಕಿಂದಾ ಕಿಂಗ್ ಗಂಗಾವತಿ ಮತ್ತು ಕೊಪ್ಪಳ ತಂಡದ ನಡುವೆ ಫೈನಲ್ ಪಂದ್ಯ ನಡೆಯಿತು. ಕಿಷ್ಕಿಂದಾ ಕಿಂಗ್ ತಂಡ ಕೊಪ್ಪಳದ ವಿರುದ್ಧ 13-03 ಅಂಕ ಗಳಿಂದ ಜಯಗಳಿಸಿದೆ. ಇದರಿಂದ ಕೊಪ್ಪಳ ದ್ವಿತೀಯ, ಹರಪನಹಳ್ಳಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ಇಂದಿನ ಪಂದ್ಯಗಳು

ಮಾ.10ರ ಬೆಳಿಗ್ಗೆ 10ಕ್ಕೆ ಕಡೆಬಾಗಿಲು ಗ್ರಾಮದಿಂದ ಪಂಪಾಸರೋವರದವರೆಗೆ ಮುಕ್ತ ಮ್ಯಾರಥಾನ್, ಆನೆಗೊಂದಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ, ಹ್ಯಾಂಡ್ ಬಾಲ್ ಕ್ರೀಡೆಗಳು ಇರಲಿವೆ.

ಅಧಿಕಾರಿಗಳ ಜೊತೆ ವಾಗ್ವಾದ

ಆನೆಗೊಂದಿ ಉತ್ಸವದ ಕುರಿತು ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರಿಗೆ ಮಾಹಿತಿ ನೀಡಿಲ್ಲ. ಆನೆಗೊಂದಿ ಗ್ರಾಮದಲ್ಲಿ ಮನಸ್ಸಿಗೆ ಬಂದಂತೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಆನೆಗೊಂದಿ ಗ್ರಾ.ಪಂ ಸದಸ್ಯ ತಿಮ್ಮಪ್ಪ ಬಾಳೆಕಾಯಿ ಅವರು ಉಪವಿಭಾಗಾಧಿಕಾರಿ ಜೊತೆ ವಾಗ್ವಾದ ನಡೆಸಿದರು.

ಈ ವೇಳೆ ಶಾಸಕ ಜಿ.ಜನಾರ್ದನರೆಡ್ಡಿ ಮಧ್ಯ ಪ್ರವೇಶಿಸಿ ಎಲ್ಲರಿಗೂ ಮಾಹಿತಿ ನೀಡಲಾಗಿದೆ. ಅಧಿಕೃತವಾಗಿ ನಾಳೆಯಿಂದ ಎಲ್ಲರಿಗೂ ಅಮಂತ್ರಣ ಪತ್ರಿಕೆ ನೀಡಿ ಉತ್ಸವಕ್ಕೆ ಆಹ್ವಾನಿಸಲಾಗುತ್ತದೆ. ಕಬಡ್ಡಿ ಪಂದ್ಯಕ್ಕೆ ಅಡ್ಡಿಪಡಿಸಲು ಬಂದಿದ್ದೀರಾ ಎಂದು ಪ್ರಶ್ನಿಸಿದರು.

ಈ ವೇಳೆ ಗ್ರಾ.ಪಂ ಸದಸ್ಯರು, ಅಧಿಕಾರಿಗಳು, ಶಾಸಕರು, ಕೆಆರ್‌ಪಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು‌.

ಉತ್ಸವ ಸಮಿತಿ ಸದಸ್ಯರಿಗೆ ಕಳಪೆ ಆಹಾರ!

ಆನೆಗೊಂದಿ ಉತ್ಸವದ ಅಂಗವಾಗಿ ಆನೆಗೊಂದಿಯಲ್ಲಿ ಕ್ರೀಡಾಕೂಟ ನಡೆಯುತ್ತಿದೆ. ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು, ಕ್ರೀಡಾಪಟುಗಳಿಗೆ ಮಧ್ಯಾಹ್ನ, ರಾತ್ರಿ ಕಳಪೆ ಆಹಾರ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಕಳಪೆ ಆಹಾರ ಸಿದ್ಧಪಡಿಸಿ ಉತ್ಸವ ಸಮಿತಿಗಳ ಸದಸ್ಯರಿಗೆ ನೀಡಲಾಗುತ್ತಿದೆ. ಊಟ ಸೇವಿಸಲು ಆಗದೆ, ಹೊರಗಡೆ ಹಣ ನೀಡಿ ಊಟ ಮಾಡುವ ಪರಿಸ್ಥಿತಿ ಇದೆ. ಒತ್ತಡದ ನಡುವೆ ಆಹಾರ ಸಮಿತಿಯವರು ಗುಣಮಟ್ಟದ ಆಹಾರ ನೀಡಲ್ಲವೆಂದರೆ ಏನು ಮಾಡಬೇಕು ಎಂದು ಶನಿವಾರ ಕೆಲ ಪೊಲೀಸರು, ಕ್ರೀಡಾ ಅಧಿಕಾರಿಗಳು, ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT