ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಿಟ್‌ ಅಂಡ್‌ ರನ್‌’ಗೆ ಪಾದಯಾತ್ರಿ ಬಲಿ: ಆರೋಪಿ ಬಂಧನ

Published 24 ಮೇ 2024, 3:11 IST
Last Updated 24 ಮೇ 2024, 3:11 IST
ಅಕ್ಷರ ಗಾತ್ರ

ಕೊಪ್ಪಳ: ಆಗಿ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಹೆಸರಾಂತ ಧಾರ್ಮಿಕ ಕ್ಷೇತ್ರ ಹುಲಿಗಿಗೆ ಪಾದಯಾತ್ರೆ ಹೊರಟಿದ್ದಾಗ ‘ಹಿಟ್‌ ಅಂಡ್‌ ರನ್‌’ಗೆ ಭಕ್ತರೊಬ್ಬರು ಬಲಿಯಾಗಿದ್ದಾರೆ. ಇಲ್ಲಿನ ಜವಾಹರ ರಸ್ತೆಯ ಸಮಗಾರ ಓಣಿಯ ಗುರುರಾಜ ಪರಶುರಾಮ ಅರಕೇರಿ (25) ಮೃತಪಟ್ಟವರು.

ಪ್ರತಿ ಹುಣ್ಣಿಮೆ, ಮಂಗಳವಾರ, ಶುಕ್ರವಾರ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಜನ ಹುಲಿಗೆಗೆ ಪಾದಯಾತ್ರೆ ಹೋಗುವುದು ಸಾಮಾನ್ಯ. ಗುರುವಾರ ಬೆಳಗಿನ ಜಾವ 4.50ರ ಸುಮಾರಿಗೆ ಗುರುರಾಜ ಹಾಗೂ ಅವರ ದೊಡ್ಡಪ್ಪನ ಮಗ ಗಣೇಶ ಅರಕೇರಿ ಪಾದಯಾತ್ರೆಗೆ ಹೊರಟಿದ್ದರು. ತಾಲ್ಲೂಕಿನ ಬಸಾಪುರ ದಿಬ್ಬದ ಹತ್ತಿರ ಹುಬ್ಬಳ್ಳಿ ಮಾರ್ಗದ ರಸ್ತೆಯಿಂದ ಮಿನಿ ಬಸ್‌ ಚಾಲಕ ವೇಗವಾಗಿ ಬಂದು ’ಹಿಟ್‌ ಅಂಡ್ ರನ್‌’ ಮಾಡಿದ್ದಾನೆ. ಕುತ್ತಿಗೆಯ ಎಡಭಾಗದಿಂದ ಭುಜದ ತನಕ ಗಂಭೀರ ಗಾಯಗಳಾಗಿದ್ದ ಗುರುರಾಜ ಅವರನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಬೆಳಿಗ್ಗೆ 6.20ರ ಸುಮಾರಿಗೆ ಮೃತಪಟ್ಟಿದ್ದಾರೆ.

ಆರೋಪಿ ಬಂಧನ: ಈ ಬಗ್ಗೆ ಕೊಪ್ಪಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿ ಎರಡು ತಾಸಿನಲ್ಲಿಯೇ ಆರೋಪಿಯನ್ನು ಬಂಧಿಸಲಾಗಿದೆ.

ಮೊದಲು ಮಿನಿ ಬಸ್‌ ಸಾಗಿ ಬಂದ ಮಾರ್ಗದಲ್ಲಿರುವ ಟೋಲ್‌ ಗೇಟ್‌ ಬಳಿ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಹಳ್ಳಿಗುಡಿ ಮತ್ತು ಹಿಟ್ನಾಳ ಟೋಲ್‌ ಬಳಿ ಕಾಣಿಸಿಕೊಂಡ ವಾಹನ ಎರಡೂ ಒಂದೇ ಆಗಿದ್ದ ಜಾಡು ಹಿಡಿದು ಇದೇ ಸಂಶಯದ ಮೇಲೆ ಪೊಲೀಸರು ಆರೋಪಿಯನ್ನು ಹುಡುಕಾಡಿದ್ದು ಹುಲಿಗಿಯಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆರೋಪಿ ಪತ್ತೆಯಾಗಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಹೊಸೂರು ಗ್ರಾಮದ ಶೌಕತ್ ತಂದೆ ಕಬೀರ್‌ ಸಾಬ್‌ ಆರೋಪಿ ಎಂದು ಗೊತ್ತಾಗಿದೆ.

ಈ ಚುರುಕಿನ ಕಾರ್ಯಾಚರಣೆಯಲ್ಲಿ ಅಳವಂಡಿ ಪೊಲೀಸ್‌ ಠಾಣೆಯ ಎಎಸ್‌ಐ ನೀಲಕಂಠ, ಕೊಪ್ಳಳ ಗ್ರಾಮೀಣ ಠಾಣೆಯ ಸಿಬ್ಬಂದಿ ಉಮೇಶ ನಾಯಕ, ಗಂಗಾಧರಪ್ಪ ನಾಯಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

ಶಿಕ್ಷೆ: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ತಾವರಗೇರಾ ಪಟ್ಟಣದ ವೀರೇಶ ಬಿಸ್ತಿ ಎಂಬ ವ್ಯಕ್ತಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳದ ಫೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ. ಅವರು ಅಪರಾಧಿಗೆ 2 ವರ್ಷ ಜೈಲು ಹಾಗೂ ₹14 ಸಾವಿರ ದಂಡ ವಿಧಿಸಿ ಶಿಕ್ಷೆ ವಿಧಿಸಿ ಮೇ 20ರಂದು ತೀರ್ಪು ನೀಡಿದ್ದಾರೆ.

2019ರ ಜೂನ್‌ನಲ್ಲಿ ಬಾಲಕಿಗೆ ವೀರೇಶ ಎಂಬ ವ್ಯಕ್ತಿ ಆಗಾಗ್ಗೆ ತನ್ನ ಎರಡು ಮೊಬೈಲ್ ಫೋನ್‌ಗಳಿಂದ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಫೋನ್‌ಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಲೈಂಗಿಕ ಚಟುವಟಿಕೆಗಳಿಗೆ ಪ್ರಚೋದನೆ ನೀಡಿ ಅಶ್ಲೀಲವಾಗಿ ಸನ್ನೆ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪವಿತ್ತು. ಈ ಕುರಿತು ದೂರು ದಾಖಲಾಗಿತ್ತು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ವಾದ ಮಂಡಿಸಿದ್ದರು.

ಗುರುರಾಜ ಅರಕೇರಿ
ಗುರುರಾಜ ಅರಕೇರಿ
ಮೃತ ವ್ಯಕ್ತಿಯ ಜೊತೆಯಲ್ಲಿದ್ದ ಗಣೇಶನಿಂದ ದೂರು ದಾಖಲು ಟೋಲ್‌ನಲ್ಲಿ ವಿಡಿಯೊ ಪರಿಶೀಲಿಸಿ ಆರೋಪಿ ಪತ್ತೆ ಹಿಟ್‌ ಅಂಡ್‌ ರನ್‌ ಮಾಡಿ ಪರಾರಿಯಾಗಿದ್ದ ಆರೋಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT