ಶುಕ್ರವಾರ, ನವೆಂಬರ್ 27, 2020
25 °C
ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ರಿಂದ ಧ್ವಜಾರೋಹಣ: ವಿವಿಧೆಡೆ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ

ರಾಜ್ಯೋತ್ಸವ ನಿತ್ಯೋತ್ಸವವಾಗಲಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ಕನ್ನಡ ರಾಜ್ಯೋತ್ಸವ ಬರೀ ನವೆಂಬರ್ ಉತ್ಸವವಾಗದೆ, ನಿತ್ಯೋತ್ಸವವಾಗಬೇಕು’ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕನ್ನಡಿಗರು ಅನ್ಯ ರಾಜ್ಯದವರೊಂದಿಗೆ ಅವರದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಇದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಅನ್ಯ ಭಾಷೆಗಳದ್ದೇ ಪ್ರಭಾವ ಹೆಚ್ಚಾಗಿದೆ. ಆದ್ದರಿಂದ ಕನ್ನಡಿಗರು ಕನ್ನಡ ಭಾಷೆಯನ್ನು ನಿತ್ಯ ಬಳಸಬೇಕು. ಬೇರೆ ರಾಜ್ಯದವರೊಂದಿಗೆ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸಬೇಕು. ಬಳಕೆಯಿಂದ ಮಾತ್ರ ಭಾಷೆ ಉಳಿಸಲು, ಬೆಳೆಸಲು ಸಾಧ್ಯ’ ಎಂದರು.

‘ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. 8 ಜ್ಞಾನಪೀಠ ಪ್ರಶಸ್ತಿ ಬಂದಿವೆ. ಕನ್ನಡಿಗರು ವಿಶಾಲ ನೋಭಾವದಿಂದ ಎಲ್ಲ ಭಾಷಿಗರನ್ನು ಸ್ವಾಗತಿಸಿ, ಸ್ವೀಕರಿಸುತ್ತಾರೆ. ಆದರೆ ಭಾಷೆ ಕುರಿತು ನಮ್ಮಲ್ಲಿ ಸ್ವಾಭಿಮಾನದ ಕೊರತೆ ಇದೆ’ ಎಂದು
ವಿಷಾದಿಸಿದರು.

ಕಿನ್ನಾಳ ಕರಕುಶಲ ಕಲೆ, ಜಾನಪದ ಪ್ರದರ್ಶನ ಕಲೆಗಳು, ಶಿಲ್ಪಕಲೆಗಳಿಗೆ ಸಂಬಂಧಿಸಿದ ಕಲಾಪ್ರಕಾರಗಳು ಜಿಲ್ಲೆಯಲ್ಲಿ ಇರುವುದು ಅಭಿಮಾನದ ಸಂಗತಿ. ಜತೆಗೆ ಈ ಕನ್ನಡ ರಾಜ್ಯೋತ್ಸವ ಸುಸಂದರ್ಭದಲ್ಲಿ ಜಾನಪದ, ತೊಗಲು ಗೊಂಬೆ ಆಟದಲ್ಲಿ ಕೇಶಪ್ಪ ಶಿಳ್ಳೆಕ್ಯಾತರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಈ ಜಿಲ್ಲೆಯ ಹೆಮ್ಮೆಯಾಗಿದೆ ಎಂದರು.

ನಗರಸಭೆಯಿಂದ ಭುವನೇಶ್ವರಿ ಭಾವಚಿತ್ರ, ಆರೋಗ್ಯ ಇಲಾಖೆಯಿಂದ ಕೊರೊನಾ ಜಾಗೃತಿ, ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಡಿಜಿಟಲ್ ಅಂಗನವಾಡಿ, ಸ್ನೇಹ ತಂತ್ರಜ್ಞಾನ ಮತ್ತು ಸ್ಮಾರ್ಟ್ ಫೋನ್ ವಿತರಣೆ, ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಮಹತ್ವ, ಸಾರಿಗೆ ಇಲಾಖೆಯಿಂದ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಯಿತು.

ಸಾರಿಗೆ ಇಲಾಖೆಯ ಸ್ತಬ್ಧಚಿತ್ರಕ್ಕೆ ಪ್ರಥಮ, ಆರೋಗ್ಯ ಇಲಾಖೆಯ ಸ್ತಬ್ಧಚಿತ್ರಕ್ಕೆ ದ್ವಿತೀಯ ಮತ್ತು ತೋಟಗಾರಿಕೆ ಹಾಗೂ ಕೃಷಿ ಇಲಾಖೆಯ ಸ್ತಬ್ಧಚಿತ್ರಗಳಿಗೆ ತೃತೀಯ ಬಹುಮಾನ ನೀಡಲಾಯಿತು.

ಇದಕ್ಕೂ ಮೊದಲು ಪೊಲೀಸ್, ಸಶಸ್ತ್ರ ಮೀಸಲು ದಳ, ಅರಣ್ಯ ಇಲಾಖೆ, ಗೃಹ ರಕ್ಷಕದಳ, ಭಾರತ ಸೇವಾದಳ, ಎನ್.ಸಿ.ಸಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡಗಳಿಂದ ಪಥಸಂಚಲನ ನಡೆಸಿ, ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಸಿ.ವಿ.ಜಡಿಯವರ ನಿರೂಪಿಸಿದರು. ಸದಾಶಿವ ಪಾಟೀಲ ಅವರ ತಂಡ ನಾಡಗೀತೆ ಹಾಗೂ ರೈತಗೀತೆ ಪ್ರಸ್ತುತಪಡಿಸಿದರು. 

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಉಪಾಧ್ಯಕ್ಷೆ ಬೀನಾ ಗೌಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಎಸ್. ಪಾಟೀಲ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿ.ಇ.ಒ ರಘುನಂದನ್ ಮೂರ್ತಿ, ಎಸ್‌ಪಿ ಟಿ.ಶ್ರೀಧರ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ತಹಶೀಲ್ದಾರ್ ಜೆ.ಬಿ.ಮಜ್ಗಿ, ಸಹಾಯಕ ಆಯುಕ್ತ ನಾರಾಯಣ ಕನಕರಡ್ಡಿ ಇ ದ್ದರು.

‘ಮಾತೃಭಾಷಾ ಪ್ರೇಮ ಅಗತ್ಯ’

ಕಾರಟಗಿ: ‘ಕನ್ನಡ ನಾಡಿನಲ್ಲಿ ಪ್ರತಿಯೊಬ್ಬರೂ ಮಾತೃಭಾಷೆಗೆ ಆದ್ಯತೆ ನೀಡಬೇಕು. ಭಾಷೆಯ ಕುರಿತು ಆತ್ಮಗೌರವ ಬೆಳೆಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ಶಿವಶರಣಪ್ಪ ಕಟ್ಟೊಳ್ಳಿ ಹೇಳಿದರು.

ಪಟ್ಟಣದ ಸಿದ್ದೇಶ್ವರ ರಂಗಮಂದಿರ ಆವರಣದಲ್ಲಿ ತಾಲ್ಲೂಕು ಆಡಳಿತ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಪದ್ಧತಿ ಬದಲಾಗಬೇಕು. ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸಬೇಕು. ಅಂದಾಗ ಮಾತ್ರ ನಮ್ಮ ನೆಲ, ಜಲ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು
ಹೇಳಿದರು.

ನಾಡು, ನುಡಿಗೆ ಅನೇಕ ಮಹನೀಯರು ಶ್ರಮಿಸಿದ್ಧಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು ಎಂದರು. ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್ ಮಾತನಾಡಿ,‘ಕರುನಾಡಿನಲ್ಲಿ ಪ್ರತಿಯೊಬ್ಬ ಕನ್ನಡಿಗರಿಗೂ ಕನ್ನಡ ಭಾಷೆಯು ಅಕ್ಷರ, ಅನ್ನ, ಆಶ್ರಯ ನೀಡಿದ್ದು, ಭಾಷೆ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡ ವಿಭಿನ್ನವಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ಸುಪ್ರಸಿದ್ದ ಹಾಗೂ ಶ್ರೀಮಂತ ಭಾಷೆಯಾಗಿದೆ. 8 ಜ್ಞಾನಪೀಠ ಪ್ರಶಸ್ತಿಗಳು ಭಾಷೆಯಿಂದಲೇ ಮುಡಿಗೇರಿವೆ. ಯುವ ಸಮುದಾಯವು ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು’ ಎಂದರು.

ಪುರಸಭೆ ಮುಖ್ಯಾಧಿಕಾರಿ ಡಾ. ಎನ್. ಶಿವಲಿಂಗಪ್ಪ, ಎಪಿಎಂಸಿ ಅಧ್ಯಕ್ಷ ಸೋಮಶೇಖರಗೌಡ, ಪಿಎಸ್ಐ ಮಲ್ಲಪ್ಪ ಹಾಗೂ ಉಪ ತಹಶೀಲ್ದಾರ್ ಸುರೇಶ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು