ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್ ಸಮೀಪದ ಕಾಸನಕಂಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ವಲಯದಲ್ಲಿ ಐದಾರು ತಿಂಗಳುಗಳಿಂದ ಆಗಾಗ ಕಾಣಿಸಿಕೊಂಡಿದ್ದ ಚಿರತೆ ಶುಕ್ರವಾರ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಚಿರತೆ ಓಡಾಟದ ಕುರಿತು ಸಾರ್ವಜನಿಕರು ಆಗಾಗ ಫೋಟೊ ಹಾಗೂ ವಿಡಿಯೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಆತಂಕ ವ್ಯಕ್ತಪಡಿಸಿದ್ದರು. ಕಾಸನಕಂಡಿ ಪ್ರದೇಶ ತುಂಗಭದ್ರಾ ಜಲಾಶಯದ ಹಿನ್ನೀರಿನ ಸ್ಥಳವಾಗಿದೆ.
ಚಿರತೆ ಪ್ರತ್ಯಕ್ಷವಾದ ಸ್ಥಳದ ಸಮೀಪ ಎಚ್ಆರ್‌ಜಿ ಕಾರ್ಖಾನೆ, ಬೆಟ್ಟದ ವೀರಾಂಜನೇಯ ದೇವಸ್ಥಾನ, ಪಶ್ಚಿಮಕ್ಕೆ ಕೂಗಳತೆಯ ದೂರದಲ್ಲಿ ಕಾಸನಕಂಡಿ ಗ್ರಾಮ, ಅದಕ್ಕೆ ಹೊಂದಿಕೊಂಡಿರುವ ಉತ್ತರ ದಿಕ್ಕಿನಂಚಿಗೆ ಸಾಲುಮರದ ತಿಮ್ಮಕ್ಕ ಉದ್ಯಾನ ಇರುವುದರಿಂದ ಈ ಪ್ರದೇಶಗಳಿಗೆ ರಸ್ತೆಯ ಮೂಲಕ ಬರುವ ಜನರಲ್ಲಿ ಭಯದ ಆತಂಕ ಮೂಡಿತ್ತು. ಈಗ ಚಿರತೆ ಸೆರೆಹಿಡಿದಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.