ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಷ್ಟಗಿ: ಸರ್ಕಾರದ ಆಸ್ತಿ ಕಬಳಿಸಲು ಹುನ್ನಾರ

ಕುಷ್ಟಗಿ ಪುರಸಭೆ ನಿರ್ಲಕ್ಷ್ಯ, ಕ್ರಮಕೈಗೊಳ್ಳದ ಜಿಲ್ಲಾಡಳಿತ
Published : 28 ಮೇ 2023, 23:30 IST
Last Updated : 28 ಮೇ 2023, 23:30 IST
ಫಾಲೋ ಮಾಡಿ
Comments

ಕುಷ್ಟಗಿ: ಪಟ್ಟಣದ ಕೊಪ್ಪಳ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಬಡಾವಣೆಯಲ್ಲಿರುವ ಪುರಸಭೆಯ ಆಸ್ತಿಯನ್ನು ಕೆಲ ವ್ಯಕ್ತಿಗಳು ಅತಿಕ್ರಮಣ ಮಾಡಿಕೊಂಡಿದ್ದು, ಬೆಲೆ ಬಾಳುವ ಜಾಗವನ್ನು ಲಪಟಾಯಿಸುತ್ತಿದ್ದರೂ ಜಾಗದ ರಕ್ಷಣೆಗೆ ಮುಂದಾಗದೆ ಪುರಸಭೆ ನಿರ್ಲಕ್ಷ್ಯ ವಹಿಸಿದೆ.

ಯಾವುದೇ ಬಡಾವಣೆ ನಿರ್ಮಾಣಗೊಳ್ಳುವ ಸಂದರ್ಭದಲ್ಲಿ ಉದ್ಯಾನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಬಳಕೆಗೆ ಎಂದು ಮೀಸಲಿರಿಸುವುದು ಸರ್ಕಾರದ ನಿಯಮ. ಪಟ್ಟಣದ ಅಮರೇಶ್ವರ ಶೆಟ್ಟರ ಎಂಬುವವರಿಗೆ ಸೇರಿದ್ದ 103/1 ಸರ್ವೇ ಸಂಖ್ಯೆಯ ಜಮೀನು ವ್ಯವಸಾಯೇತರ ಎಂದು ಪರಿವರ್ತನೆಗೊಂಡಿದ್ದು, ಇಂದಿರಾ ನಗರ ಕಾಲೊನಿ ವ್ಯಾಪ್ತಿಯ ಮತ್ತು ಜಿಲ್ಲಾ ಕೇಂದ್ರದ ರಸ್ತೆಗೆ ಹೊಂದಿಕೊಂಡಿರುವ ಜಾಗ ಸರ್ಕಾರದ ಆಸ್ತಿಯಾಗಿದೆ.

ಹಿಂದೆ ಈ ಜಾಗದಲ್ಲಿ ರೇಣುಕಾಚಾರ್ಯ ಮಂಗಲಭವನ ಹಾಗೂ ಬುತ್ತಿಬಸವೇಶ್ವರ ಶಾಲೆ ನಿರ್ಮಾಣಕ್ಕೆ ಪುರಸಭೆ ಅಕ್ರಮವಾಗಿ ನಿವೇಶನ ಒದಗಿಸಿದೆ. ಬುತ್ತಿಬಸವೇಶ್ವರ ಶಾಲೆಯವರು ತಮಗೆ ನೀಡಿದ ನಿವೇಶನಕ್ಕಿಂತಲೂ ಹೆಚ್ಚಿನ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ. ಅದರ ದಕ್ಷಿಣ ಭಾಗದಲ್ಲಿ ಮಾತ್ರ ಉದ್ಯಾನ, ಸಾರ್ವಜನಿಕ ಬಳಕೆ ಜಾಗ ಕನಿಷ್ಠ ಪ್ರಮಾಣದಲ್ಲಿ ಉಳಿದುಕೊಂಡಿದೆ.

ಪಟ್ಟಣದಲ್ಲಿರುವ ನಿವೇಶನಗಳ ಬೆಲೆ ಗಗನಮುಖಿಯಾಗಿದ್ದು, ಅದರಲ್ಲೂ ಕೊಪ್ಪಳ ರಸ್ತೆಗೆ ಹೊಂದಿಕೊಂಡಿರುವ ವಾಣಿಜ್ಯ ಪ್ರದೇಶದ ಈ ಜಾಗದ ಬೆಲೆ ಈಗ ಅನೇಕ ಕೋಟಿ ರೂಪಾಯಿಗಳ ಲೆಕ್ಕಾಚಾರದಲ್ಲಿದೆ. ಈ ಕಾರಣಕ್ಕೆ ಈ ಜಾಗದ ಮೇಲೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಣ್ಣು ಬಿದ್ದಿದ್ದು ಹೇಗಾದರೂ ಸರಿ ಜಾಗವನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಆರೋಪಿಸಿದರು.

ನಕಲಿ ದಾಖಲೆ: ಅನೇಕ ವರ್ಷಗಳವರೆಗೆ ಪುರಸಭೆ ದಾಖಲೆ ಮತ್ತು ಮೂಲ ನಕ್ಷೆಯಲ್ಲಿ ಉದ್ಯಾನ ಜಾಗ ಎಂದೇ ನಮೂದಾಗಿತ್ತು. ಕೆಲ ವರ್ಷಗಳ ಹಿಂದೆ ಕೈಚಳಕ ತೋರಿರುವ ಪುರಸಭೆ ಸಿಬ್ಬಂದಿ ಆಸ್ತಿ(ಅಸೆಸ್‌ಮೆಂಟ್) ಸಂಖ್ಯೆ 4563/1 ಎಂದು ನಮೂದಿಸಿ ಸರ್ಕಾರದ ಜಾಗವನ್ನು ಪಟ್ಟಣದ ಐವರು ವ್ಯಕ್ತಿಗಳ ಹೆಸರಿಗೆ ವಸತಿ ನಿವೇಶನ ಎಂದು ಪರಿವರ್ತಿಸುವ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಆಸ್ತಿಯನ್ನು ಖಾಸಗಿಯವರಿಗೆ ವಹಿಸಿದ್ದಾರೆ. ಈ ಅಕ್ರಮಕ್ಕೆ ಪಟ್ಟಣದ ಕೆಲ ವ್ಯಕ್ತಿಗಳು, ಚುನಾಯಿತ ಪ್ರತಿನಿಧಿಗಳು ಕೈಜೋಡಿಸಿರುವುದು ಸ್ಪಷ್ಟವಾಗಿದೆ.

ಸರ್ಕಾರದ ಆಸ್ತಿ ಕಂಡವರ ಪಾಲಾಗುತ್ತಿರುವುದಕ್ಕೆ ಸಂಬಂಧಿಸಿದಂತೆ, ಹಿಂದೆ ಸಾರ್ವಜನಿಕರು ಪುರಸಭೆ ಮತ್ತು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿ ಆಸ್ತಿಯನ್ನು ಉಳಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೆ ಉದ್ಯಾನ ಮತ್ತು ಸಾರ್ವಜನಿಕ ಬಳಕೆ ಜಾಗದ ಸುತ್ತಲೂ ತಂತಿ ಬೇಲಿ ಅಳವಡಿಸುವಂತೆ ಮನವಿ ಮಾಡಿದ್ದರು. ಆದರೆ, ಪುರಸಭೆ ಈ ವಿಚಾರದಲ್ಲಿ ಉದಾಸೀನ ತೋರುವ ಮೂಲಕ ಪರೋಕ್ಷವಾಗಿ ಒತ್ತುವರಿದಾರರಿಗೆ ಅನುಕೂಲಕ ಕಲ್ಪಿಸುತ್ತಿದೆ ಎಂಬ ಅಸಮಾಧಾನ ಸಾರ್ವಜನಿಕರದ್ದಾಗಿದೆ.

ತಮ್ಮದೇ ಸ್ವಂತ ಜಾಗ ಎಂಬಂತೆ ವರ್ತಿಸುತ್ತಿರುವ ಕೆಲ ವ್ಯಕ್ತಿಗಳು ಈಗಾಗಲೇ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಮುಖ್ಯರಸ್ತೆಯಿಂದ ತಮಗೆ ಬರಲು, ಹೋಗಲು ಅಕ್ರಮವಾಗಿ ರಸ್ತೆ, ಸೇತುವೆಯನ್ನೂ ನಿರ್ಮಿಸಿಕೊಂಡಿರುವುದು ಕಂಡುಬಂದಿದೆ. ಸಾರ್ವಜನಿಕ ಆಸ್ತಿಗೆ ಕಾವಲುಗಾರರಾಗಬೇಕಿರುವ ಪುರಸಭೆ ಪ್ರತಿನಿಧಿಗಳು ಅಕ್ರಮದ ವಿರುದ್ಧ ಚಕಾರ್ ಎತ್ತದಿರುವುದು ಅಚ್ಚರಿ ಮೂಡಿಸಿದೆ.

ಕೊಪ್ಪಳ ರಸ್ತೆಯಲ್ಲಿನ ಉದ್ಯಾನ ಜಾಗ ಒತ್ತುವರಿ ಮತ್ತು ನಕಲಿ ದಾಖಲೆ ಸೃಷ್ಟಿಯಾಗಿರುವುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಆಸ್ತಿ ಪುರಸಭೆ ವಶಕ್ಕೆ ಪಡೆಯಲು ಕ್ರಮಕೈಗೊಳ್ಳುತ್ತೇನೆ ಧರಣೇಂದ್ರಕುಮಾರ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT