ಬುಧವಾರ, ಸೆಪ್ಟೆಂಬರ್ 22, 2021
21 °C
ವಂತಿಗೆ ಸಂಗ್ರಹಿಸಿ ₹8 ಲಕ್ಷ ವೆಚ್ಚದಲ್ಲಿ ದರ್ಗಾ ನಿರ್ಮಿಸಿದ ಗಡಚಿಂತಿ ಗ್ರಾಮಸ್ಥರು

ಮುಸ್ಲಿಮರಿಲ್ಲದ ಊರಲ್ಲಿ ಪೀರಾದೇವರ ಪ್ರತಿಷ್ಠಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಸಮೀಪದ ಗಡಚಿಂತಿ ಗ್ರಾಮದಲ್ಲಿ ಮುಸ್ಲಿಂ ಧರ್ಮದವರಿಲ್ಲ. ಆದರೂ, ಪ್ರತಿವರ್ಷ ಇಲ್ಲಿ ಮೊಹರಂ ಆಚರಿಸಲಾಗುತ್ತದೆ.

ಐದು ವರ್ಷಗಳ ಹಿಂದೆ ಗ್ರಾಮದಲ್ಲಿನ ಹಳೆ ದರ್ಗಾ ಕೆಡವಿ ಸುಮಾರು ₹8 ಲಕ್ಷ ವೆಚ್ಚದಲ್ಲಿ ಹೊಸದಾಗಿ ಪೀರಾದೇವರ ದರ್ಗಾ ನಿರ್ಮಿಸಲಾಗಿದೆ. ಅಲ್ಲಿಯೇ ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿದೆ.

ಪ್ರತಿವರ್ಷ ಗ್ರಾಮಸ್ಥರೆಲ್ಲರೂ ವಂತಿಗೆ ಸಂಗ್ರಹಿಸಿ ಮೊಹರಂ ಆಚರಿಸುತ್ತಾರೆ. ದರ್ಗಾಕ್ಕೆ ಸುಣ್ಣ–ಬಣ್ಣ ಬಳಿದು ಅಲಂಕರಿಸಿ, ಮೊಹರಂ ಪಂಜಾಗಳನ್ನು ಪ್ರತಿಷ್ಠಾಪಿಸಿದ್ದಾರೆ.

ಆದರೆ ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಹಬ್ಬ ಸಪ್ಪೆಯಾಗಿದೆ ಎಂದು ಜನರು ಹೇಳುತ್ತಾರೆ.

ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೀರಾ ದೇವರ ಮೆರವಣಿಗೆ ನಡೆಯುತ್ತದೆ. ಹರಕೆ ಹೊತ್ತ ಭಕ್ತರು ದೀರ್ಘ ದಂಡ ನಮಸ್ಕಾರ, ಸಕ್ಕರೆ ನೈವೇದ್ಯ ಹಾಗೂ ಛತ್ರಿದಾನದ ಮೂಲಕ ಹರಕೆ ತೀರಿಸುತ್ತಾರೆ. ಗಂಧದ ಮೆರವಣಿಗೆಯನ್ನು ಗ್ರಾಮಸ್ಥರೆಲ್ಲರೂ ಸೇರಿ ಸಂಭ್ರಮದಿಂದ ನಡೆಸುತ್ತಾರೆ.

‘ನಮ್ಮ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಗ್ರಾಮದಲ್ಲಿರುವ ದೇವರುಗಳಿಗೆ ಸಲ್ಲುವಷ್ಟೇ ಭಕ್ತಿ ಮೊಹರಂ ದೇವರಿಗೂ ಸಲ್ಲುತ್ತದೆ’ ಎಂದು ಗ್ರಾಮದ ಮುಖಂಡ ಯಮನೂರಪ್ಪ ಅಬ್ಬಿಗೇರಿ ತಿಳಿಸಿದರು.

‘ಮೊಹರಂ ಸಂದರ್ಭದಲ್ಲಿ ಬೇರೆ ಊರಿನಿಂದ ಖಾಜಿಯವರನ್ನು ಕರೆಸುತ್ತೇವೆ. ಹಬ್ಬದ ಬಳಿಕ ಅವರಿಗೆ ಬಟ್ಟೆ, ದವಸ-ಧಾನ್ಯ ಹಾಗೂ ಹಣ ನೀಡು ಬೀಳ್ಕೊಡುತ್ತೇವೆ’ ಎಂದು ಗ್ರಾಮದ ಶರಣಪ್ಪಜ್ಜ ವಾಲಿಕಾರ ಹೇಳಿದರು. ಮುಖಂಡರಾದ ಫಕೀರಪ್ಪಜ್ಜ, ಶರಣಪ್ಪ ದಂಡಿನ, ಶರಣಪ್ಪಜ್ಜ ವಾಲೀಕಾರ, ಹನಮಪ್ಪ ರೋಣದ, ಹನಮಂತಪ್ಪ ವಾಲಿಕಾರ, ಯಲ್ಲಪ್ಪ ಗರೇಬಾಳು, ಹನಮಂತಪ್ಪ ಮಕಾಲಿ, ಯಮನಪ್ಪ ದಳಪತಿ, ಭೀಮಪ್ಪ ಭೋವಿ, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಪ್ಪ ಭೋವಿ ಹಾಗೂ ಹನಮವ್ವ ರಾಜೂರ ನೇತೃತ್ವದಲ್ಲಿ ಮೊಹರಂ ಆಚರಣೆ ನಡೆಯುತ್ತದೆ.

ಹಿಂದೂಗಳಿಂದ ಮೊಹರಂ ಆಚರಣೆ

ಯಲಬುರ್ಗಾ: ಮುಸ್ಲಿಮರ ಜತೆ ಹಿಂದೂಗಳೂ ಸೇರಿಕೊಂಡು ಮೊಹರಂ ಅನ್ನು ಶ್ರದ್ದಾ ಭಕ್ತಿಯಿಂದ ಆಚರಿಸುತ್ತಾರೆ. ಅನೇಕ ಗ್ರಾಮಗಳಲ್ಲಿ ಮುಸ್ಲಿಮರಿಲ್ಲದಿದ್ದರೂ ಹಿಂದೂಗಳೇ ಹಬ್ಬವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ.

ತಾಲ್ಲೂಕಿನ ಹನುಮಾಪುರ, ಮುಸ್ಲಿಂ ಕುಟುಂಬ ಇಲ್ಲದ ಪುಟ್ಟ ಗ್ರಾಮ. ಇತರ ಗ್ರಾಮದಲ್ಲಿ ಮೊಹರಂ ಆಚರಿಸಿದಂತೆ ಇಲ್ಲಿಯೂ ಶ್ರದ್ಧಾ ಭಕ್ತಿಯಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಗುತ್ತದೆ. ಆದರೆ ಎಲ್ಲ ಕಾರ್ಯಕ್ಕೂ ಹಿಂದೂಗಳದ್ದೇ ಉಸ್ತುವಾರಿ.

ಆದರೆ ಹಬ್ಬ ಮಾತ್ರ ಸುಮಾರು ವರ್ಷಗಳಿಂದಲೂ ನಡೆಯುತ್ತಿದೆ. ಹಿಂದೂಗಳೇ ಕಟ್ಟಿರುವ ಸುಂದರ ದರ್ಗಾ ಇದೆ. ಆದರೆ ಮೊಹರಂ ಸಂದರ್ಭದಲ್ಲಿ ಪಕ್ಕದ ಜರಕುಂಟಿ ಗ್ರಾಮದ ಖಾಜಾಸಾಬ ಎಂಬವರು ಆಗಮಿಸಿ ಆಚರಣೆಗೆ ಚಾಲನೆ ನೀಡುವುದನ್ನು ಹೊರತುಪಡಿಸಿದರೆ ಉಳಿದಂತೆ ಎಲ್ಲವು ಗ್ರಾಮದ ಯುವಕರು ಹಾಗೂ ಗಣ್ಯರು ಸೇರಿ ಸಂಪ್ರದಾಯ ಬದ್ಧವಾಗಿ ಆಚರಣೆಗೆ ಮುಂದಾಗುತ್ತಾರೆ ಎಂದು ಗ್ರಾಮದ ಗಣ್ಯರಾದ ಯಮನೂರಪ್ಪ ಜೂಲಕಟ್ಟಿ ತಿಳಿಸಿದ್ದಾರೆ.

ಕೇವಲ ಮಾತಿಗೆ ಸೀಮಿತವಾಗುತ್ತಿರುವ ಹಿಂದೂ ಮುಸ್ಲಿಮರ ಭಾವೈಕ್ಯತೆ ಈ ಗ್ರಾಮದಲ್ಲಿ ಸಾಕಾರಗೊಂಡಿದೆ.

ಮುಸ್ಲಿಮರು ಕೈಗೊಳ್ಳುವ ಎಲ್ಲ ಪದ್ಧತಿಗಳನ್ನು ಹಿಂದುಗಳೇ ಆಚರಿಸುತ್ತಾರೆ. ವಿಸರ್ಜನೆ ಸಂದರ್ಭದಲ್ಲಿಯೂ ಕೂಡಾ ಹಿಂದೂಗಳೇ ನೇತೃತ್ವವಹಿಸಿಕೊಂಡು ಯಾವುದೇ ಗದ್ದಲವಿಲ್ಲದೇ ಶಾಂತಯುತವಾಗಿ ಆಚರಣೆಗೆ ಮುಂದಾಗುತ್ತದೆ. ಇದು ಇತರರಿಗೆ ಮಾದರಿಯಾದಂತಿದೆ ಎಂದು ಗ್ರಾಮದ ಮುಖಂಡ ಸಿದ್ಧಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.