ಕೊಪ್ಪಳ: ‘ಬೆಲೆ ಏರಿಕೆ ಕಾಣುತ್ತಿಲ್ಲವೇ’

ಕೊಪ್ಪಳ: ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರ ನಿತ್ಯ ಏರಿಕೆಯಾಗು ತ್ತಿರುವುದರಿಂದ ಜನಸಾಮಾನ್ಯರ ಬದುಕು ದುರ್ಬರಗೊಂಡಿದೆ. ಆದರೆ ಸಂಸದರು 'ಅಪ್ಪ ಮಾಡುವ ಸಾಲಕ್ಕೆ ಮಗ ಹೊಣೆ ಹೊರಬೇಕಾಗಿದೆ' ಎಂದು ಉಡಾಫೆ ಮಾತನಾಡಿರುವುದು ಸರಿಯಲ್ಲ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.
ಅವರು ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಸದರೇ ಕಾಂಗ್ರೆಸ್ ಅನ್ನು ಅಪ್ಪ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಅವರ ಹೇಳಿಕೆ ದಾರಿ ತಪ್ಪಿದ ಮಗನಂತೆ ಇದೆ. ಇಂತಹ ಮಕ್ಕಳನ್ನು ಜವಾಬ್ದಾರಿಯಿಲ್ಲದವರು ಎಂದು ಹೇಳಬೇಕಾಗುತ್ತದೆ ಎಂದು ಲೇವಡಿ ಮಾಡಿದರು.
ಸಂಸದರಿಗೆ ಪ್ರಚಲಿತ ವಿದ್ಯಾಮಾನಗಳ ಮಾಹಿತಿ ಕೊರತೆ ಇದೆ. ಕಾಂಗ್ರೆಸ್ 63 ವರ್ಷ ಆಡಳಿತ ನಡೆಸಿದರೂ 53.11 ಲಕ್ಷ ಕೋಟಿ ಸಾಲ ಮಾಡಿದೆ. ಆದರೆ 2014ರಿಂದ ಇಲ್ಲಿಯವರೆಗೆ ಬಿಜೆಪಿ 82.7 ಲಕ್ಷ ಕೋಟಿ ಸಾಲ ಮಾಡಿದೆ. ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿರುವ ದೇಶಗಳಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಈಗ 193 ದೇಶಗಳಲ್ಲಿ ಭಾರತದ ಸ್ಥಾನ 164ಕ್ಕೆ ಜಾರಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನಮ್ಮ ಸರ್ಕಾರ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಿತ್ತು. ಈಗಿನ ಬಿಜೆಪಿ ರಾಜ್ಯ ಸರಕಾರ ಎಷ್ಟು ಮನೆಗಳನ್ನು ನಿರ್ಮಿಸಿದೆ? ಎಂದು ಪ್ರಶ್ನಿಸಿದರು.
ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಮೋದಿಯವರು ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು ಮಾರಾಟ ಮಾಡುತ್ತಿರುವುದು ಯಾರು ಮಾಡಿಟ್ಟ ಆಸ್ತಿಯನ್ನು? ಇದಕ್ಕೆ ಸಂಸದ ಸಂಗಣ್ಣ ಕರಡಿ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ತಾನು ಮಾಡಿರುವ ಅಪಾರ ಸಾಲದ ಜೊತೆಗೆ, ಅದಾನಿ ಮುಂತಾದ ಕಾರ್ಪೊರೇಟ್ ಸಂಸ್ಥೆಗಳ ಅಂದಾಜು 11 ಲಕ್ಷ ಕೋಟಿ ಸಾಲವನ್ನು (ವಸೂಲಾಗದ ಸಾಲ – ಅನುತ್ಪಾದಕ ಸಾಲ) ಎಂದು ಘೋಷಿಸಿದೆ. ಅಂದರೆ, ಕಾರ್ಪೊರೇಟ್ ಸಂಸ್ಥೆಗಳ ನಾಲ್ಕು ವರ್ಷಗಳಲ್ಲಿ 7 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಮನ್ನಾ (ರೈಟ್ ಆಫ್) ಮಾಡಲಾಗಿದೆ ಎಂದು ಅಂಕಿ-ಅಂಶಗಳನ್ನು ಮಂಡಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ 1500 ಕೋಟಿ ಅನುದಾನ ನೀಡಬೇಕು. ಆದರೆ ಕಳೆದ ಮೂರು ವರ್ಷಗಳಲ್ಲಿ ಕೇವಲ 1100 ಕೋಟಿ ಕಾಮಗಾರಿಗೆ ಅನುಮೋದನೆ ನೀಡಿದೆ. ಇದರಿಂದ ಈ ಭಾಗದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೊನಾ ಹಿನ್ನಲೆಯಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ನೀಡಿಲ್ಲ. ಪೈಪ್ ಲೈನ್ ಕಾಮಗಾರಿ ನಡೆದ ಕಾರಣ ಕೊಪ್ಪಳ ಹಾಗೂ ಗಿಣಗೇರಿ ರಸ್ತೆ ಕಾಮಗಾರಿ ಕೈಗೊಂಡಿರಲಿಲ್ಲ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಅಳವಂಡಿ ರಸ್ತೆ ಕಾಮಗಾರಿಗೂ ಲೋಕೋಪಯೋಗಿ ಸಚಿವರ ಬಳಿ ಅನುದಾನ ಕೇಳಲಾಗಿದೆ. ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಎಸ್,ಬಿ.ನಾಗರಳ್ಳಿ, ಜುಲ್ಲು ಖಾದರ್ ಖಾದ್ರಿ, ನಗರಸಭೆ ಅಧ್ಯಕ್ಷೆ ಲತಾ ಚಿನ್ನೂರು, ಪ್ರಸನ್ನ ಗಡಾದ, ವಕ್ತಾರ ರವಿ ಕುರಗೋಡ ಮುಂತಾದವರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.