ದೆಹಲಿ ರಾಜಕಾರಣ ಪರಿಚಯವಿಲ್ಲದವರು ಸಂಸದರಾದರೂ ವ್ಯರ್ಥ: ಬಸವರಾಜ ರಾಯರಡ್ಡಿ

ಗುರುವಾರ , ಏಪ್ರಿಲ್ 25, 2019
31 °C
ಮಾಜಿ ಸಂಸದರ ಸಂದರ್ಶನ

ದೆಹಲಿ ರಾಜಕಾರಣ ಪರಿಚಯವಿಲ್ಲದವರು ಸಂಸದರಾದರೂ ವ್ಯರ್ಥ: ಬಸವರಾಜ ರಾಯರಡ್ಡಿ

Published:
Updated:
Prajavani

ಕೊಪ್ಪಳ: ಜಿಲ್ಲೆಯ ಕ್ರಿಯಾಶೀಲ ಮತ್ತು ಜಾಣ ರಾಜಕಾರಣಿ ಎಂದೇ ಹೆಸರು ಮಾಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ತಮ್ಮದೇ ವಿಶೇಷ ಗತ್ತು, ರಾಜಕೀಯ ನಡೆಗಳಿಂದ ಹೆಸರು ಮಾಡಿದವರು. ಸಣ್ಣ ವಯಸ್ಸಿನಲ್ಲಿಯೇ ರಾಮಕೃಷ್ಣ ಹೆಗಡೆ ಅವರ ಗಮನ ಸೆಳೆದು ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದು ಸಂಸದರಾಗಿ, ಸಚಿವರಾಗಿ, ಶಾಸಕರಾಗಿ ಹೆಸರು ಮಾಡಿದರು.

ಲೋಕಸಭೆಗೆ ನಾಲ್ಕು ಬಾರಿ (1996, 1998, 1999, 2009) ಸ್ಪರ್ಧಿಸಿ, ಮೂರು ಬಾರಿ ಪರಾಭವಗೊಂಡು ಒಮ್ಮೆ ಮಾತ್ರ 1996 ಜನತಾ ದಳದಿಂದ ಗೆಲುವು ಸಾಧಿಸಿದರು. ಹಿಂದಿ, ಇಂಗ್ಲಿಷ್ ಭಾಷಾ ಪ್ರೌಢಿಮೆ, ಕಾನೂನು ಪಾಂಡಿತ್ಯದಿಂದ ಅನೇಕ ಯೋಜನೆಗಳನ್ನು ಜಿಲ್ಲೆಗೆ ತಂದು ಇಂದಿಗೂ ಜನ ನೆನಪಿಸಿಕೊಳ್ಳುವಂತಹ ಕಾರ್ಯ ಮಾಡಿದ ನಾಯಕ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ತೊಡಗಿಸಿಕೊಂಡು, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡರು. ತಾವು ಮಾಡಿದ ಕೆಲಸವನ್ನು ಜನ ಪರಿಗಣಿಸದೇ ಇರುವ ನೋವಿನಲ್ಲಿಯೇ ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿರುವ ರಾಯರಡ್ಡಿ ಜಿಲ್ಲೆಯ ಚಾಣಾಕ್ಷ ರಾಜಕಾರಣಿ ಎಂದೇ ಹೆಸರು ಮಾಡಿದವರು.

ಹಿಂದುಳಿದ ಭಾಗದ ಅಭಿವೃದ್ಧಿಗೆ ತಮ್ಮದೇ ಆದ ಕನಸು ಹೊಂದಿದ್ದರೂ ಇನ್ನೂ ಅಭಿವೃದ್ಧಿಯಾಗಬೇಕಾಗಿದ್ದು, ಸಾಕಷ್ಟಿದೆ ಎಂದು ಒಪ್ಪಿಕೊಳ್ಳುವ ಅವರು ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಅನುಭವವನ್ನು ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

 * ಸಂಸದರಾಗಿ ಆಯ್ಕೆಯಾದ ಮೊದಲ ಅನುಭವ ಹೇಗಿತ್ತು?

** ರಾಜ್ಯದಲ್ಲಿ ವಸತಿ ಸಚಿವನಾಗಿದ್ದಾಗ ಸಂದರ್ಭದಲ್ಲಿ ಜನತಾದಳದಿಂದ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಬಸವರಾಜ ಪಾಟೀಲ ಅನ್ವರಿ ವಿರುದ್ದ ಜಯ ಸಾಧಿಸಿದೆ. ಮೊದಲ ಸ್ಪರ್ಧೆಯಲ್ಲಿಯೇ ಜಯಗಳಿಸಿ ಅತ್ಯಲ್ಪ ಅವಧಿ (ಒಂದೂವರೆ ವರ್ಷ)ದಲ್ಲಿ ಯಾರೂ ಮಾಡದೇ ಇರುವ ಮಹತ್ವದ ಕೆಲಸ ಮಾಡಿದ್ದು ಖುಷಿ ನೀಡಿತ್ತು.

ಬಳ್ಳಾರಿಯಿಂದ ಅಂಕೋಲದವರೆಗೆ ರಾಷ್ಟ್ರೀಯ ಹೆದ್ದಾರಿ (ಎನ್‍ಎಚ್-64) ಮಂಜೂರಾತಿ ಪಡೆದಿದ್ದು, 2 ನವೋದಯ ಶಾಲೆ, 1 ಕೇಂದ್ರೀಯ ವಿದ್ಯಾಲಯವನ್ನು ಜಿಲ್ಲೆಗೆ ತಂದಿದ್ದು, ಬನ್ನಿಕೊಪ್ಪ ಮತ್ತು ಇತರೆ 18 ಗ್ರಾಮಗಳಿಗೆ ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆಯಡಿ ನೀರಿನ ಯೋಜನೆ ಜೊತೆಗೆ ಇನ್ನಿತರ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದು ವೈಯಕ್ತಿಕವಾಗಿ ಹೆಮ್ಮೆ ಎನಿಸುತ್ತಿದೆ.

ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ಗದಗ-ಹರಪನಹಳ್ಳಿ ವಾಯಾ ಮುಂಡರಗಿ ಯೋಜನೆಯನ್ನು ಹೊರತುಪಡಿಸಿ ಉಳಿದಂತೆ ಗದಗ-ವಾಡಿ, ಮುನಿರಾಬಾದ್-ಮಹಿಬೂಬನಗರ ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವುದು ಸಂತೃಪ್ತಿಯಾಗಿದೆ.

* ದೆಹಲಿಯಲ್ಲಿಯೂ ಗುರುತಿಸಿದ ಮುಖಂಡರು

ಯಲಬುರ್ಗಾ ತಾಲ್ಲೂಕಿನ ತಳಕಲ್ಲ ಗ್ರಾಮದ ರೈತಾಪಿ ಕುಟುಂಬದಲ್ಲಿ ಜನಿಸಿ, ಕಾನೂನು ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದೆ.  ಕಾನೂನು ಮತ್ತು ಸಂವಿಧಾನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದು ಅಭಿವೃದ್ಧಿಯ ಪರಿಕಲ್ಪನೆಗೆ ಸಾಕಷ್ಟು ಸಹಕಾರಿಯಾಯಿತು. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿಯೂ ಪ್ರೌಢಿಮೆ ಇತ್ತು. ರಾಜಕಾರಣದತ್ತ ಸೆಳೆತದಿಂದ ಜನತಾದಳ ಸೇರಿ ಮೊದಲ ಬಾರಿಗೆ ಸಂಸದನಾದೆ.

ಅಂದಿನ ರೈಲ್ವೆ ಮಂತ್ರಿಯಾಗಿದ್ದ ರಾಮವಿಲಾಸ ಪಾಸ್ವಾನ್ ಅವರು ಜನತಾ ಪರಿವಾರದಿಂದ ಬಂದವರಾಗಿದ್ದರಿಂದ ನಮ್ಮ ಮೇಲೆ ಬಹಳ ವಿಶ್ವಾಸ ಇಟ್ಟಿದ್ದರು. ಅಲ್ಲದೆ ಸಚಿವಾಲಯದಲ್ಲಿ 'ರಾಯರಡ್ಡಿ ಸಾಬ್' ಯಾವುದೇ ಕೆಲಸ ಹೇಳಿದರೂ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದು, ವೈಯಕ್ತಿಕವಾಗಿ ನನಗೆ ಸಂತಸ ತಂದಿತ್ತು. ರೈಲ್ವೆ ಯೋಜನೆಯ ಸರ್ವೆ ಕಾರ್ಯಕ್ಕೆ ಒಪ್ಪಿಗೆ ಸೂಚಿಸಿದ್ದು ನನ್ನ ಸಾಧನೆ.

1997ರಲ್ಲಿ ಪ್ರಧಾನಿಯಾಗಿದ್ದ ಐ.ಕೆ.ಗುಜ್ರಾಲ್ ಅವರು ಕರೆದು 'ಸರ್ಕಾರ ಯಾವುದೇ ಸಂದರ್ಭದಲ್ಲಿ ವಿಸರ್ಜನೆಯಾಗಬಹುದು. ನಿಮ್ಮ ಕ್ಷೇತ್ರಕ್ಕೆ ಏನು ಬೇಕು ಅದನ್ನ ಮಾಡಿಕೊಳ್ಳಿ' ಎಂದು ಹೇಳಿದ್ದರು. ಆಗ ರಾಷ್ಟ್ರೀಯ ಹೆದ್ದಾರಿ ಬೇಕು ಎಂದು ಹೇಳಿ 'ಗುತ್ತಿ-ಅಂಕೋಲ' ರಾಷ್ಟ್ರೀಯ ಹೆದ್ದಾರಿಗೆ ಮಂಜೂರಾತಿ ಮಾಡಿಸಿದ್ದು ದೇಶದಲ್ಲಿಯೇ ಪ್ರಥಮ ಎಂದೇ ಹೇಳಬಹುದು.

* ಸಂಸದರಾಗುವವರು ಹೇಗಿರಬೇಕು

* ಸಂಸದರಾಗುವವರು ಕ್ಷೇತ್ರದ ಬಗ್ಗೆ ಜ್ಞಾನವಿದ್ದರೆ ಸಾಲದು. ಇಡೀ ರಾಜ್ಯದ ಸಮಗ್ರ ಮಾಹಿತಿ ಹೊಂದಿದವರಿರಬೇಕು. ಕಾನೂನು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು. ಭಾಷಾಜ್ಞಾನದ ಜೊತೆಗೆ ಕೇಂದ್ರದಿಂದ ಯಾವ್ಯಾವ ಯೋಜನೆಗಳನ್ನು ರಾಜ್ಯ ಮತ್ತು ಕ್ಷೇತ್ರಕ್ಕೆ ತರಬೇಕು ಎಂಬ ಚಿಂತನಾಶೀಲ ವ್ಯಕ್ತಿತ್ವ ಹೊಂದಿದ್ದರೆ ಮಾತ್ರ ಏನಾದರೂ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ. ಅಭಿವೃದ್ಧಿಯ ಮೂಲ ಉದ್ದೇಶವಿಲ್ಲದೇ ಸಂಸದನಾದರೆ ಎಲ್ಲ ರೀತಿಯಿಂದಲೂ ನಷ್ಟ. ಕೇವಲ 10 ವರ್ಷ ಸಂಸದನಾಗಿ ಕೆಲಸ ಮಾಡಲು ಅವಕಾಶ ಕ್ಷೇತ್ರದ ಜನರು ಕೊಟ್ಟಿದ್ದರೆ ಈ ಭಾಗದ ಚಿತ್ರಣವೇ ಬೇರೆಯಾಗಿರುತ್ತಿತ್ತು.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !