ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ: ಶಂಭುಲಿಂಗನಗೌಡ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ
Last Updated 2 ಫೆಬ್ರುವರಿ 2021, 1:35 IST
ಅಕ್ಷರ ಗಾತ್ರ

ಕುಷ್ಟಗಿ: ‘ಶಿಕ್ಷಕರ ಬೇಕು ಬೇಡಿಕೆಗಳ ಕುರಿತು ಸರ್ಕಾರದ ಗಮನಸೆಳೆಯುವ ಮೂಲಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ’ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭಲಿಂಗನಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ಸಂಘ ಇದೆ ಹೊರತು ಕೇವಲ ಅಲಂಕಾರಕ್ಕೆ ಅಧ್ಯಕ್ಷರಾಗಿರುವುದಕ್ಕೆ ಅಲ್ಲ. ಶಿಕ್ಷಕರ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆ ಮೆರೆಯುವುದಾಗಿ’ ತಿಳಿಸಿದರು.

‘ರಾಜ್ಯದಲ್ಲಿ ಒಟ್ಟು 72 ಸಾವಿರ ಶಿಕ್ಷಕರು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದು, ವರ್ಗಾವಣೆ ಪ್ರಾರಂಭವಾಗುಷ್ಟರಲ್ಲಿ ಕೆಲವರು ಆಡಳಿತಾತ್ಮಕ ನ್ಯಾಯ ಮಂಡಳಿಗೆ (ಕೆಎಟಿ) ತಕರಾರು ಅರ್ಜಿ ಸಲ್ಲಿಸಿದ್ದರಿಂದ ಪ್ರಕ್ರಿಯೆ ಸ್ಥಗಿತಗೊಂಡಿತು. ರಾಜ್ಯದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಿಕ್ಷಕಿಯರು, ಮಹಿಳಾ ನೌಕರರು ದಶಕಗಳ ಕಾಲ ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ವರ್ಗಾವಣೆ ಇಲ್ಲದೆ ದಂಪತಿ, ಮಕ್ಕಳು ಒಂದೊಂದು ಕಡೆ ಉಳಿದು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವಂತೆ ಶಿಕ್ಷಣ ಸಚಿವ ಎಸ್‌.ಸುರೇಶಕುಮಾರ್ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗಿತ್ತು. ನಂತರ ರಾಜ್ಯ ಸರ್ಕಾರ ರಿಟ್‌ ಅರ್ಜಿ ಸಲ್ಲಿಸಿದ್ದು, ಪುನಃ ವರ್ಗಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಪದವೀಧರರು, ಸ್ನಾತಕೋತ್ತರ ಪದವಿ ಪಡೆದವರು, ಪಿಎಚ್‌.ಡಿ ಆಗಿರುವ ಬಹಳಷ್ಟು ಜನ ಇದ್ದಾರೆ. ಪರಿಣಿತಿಹೊಂದಿದ್ದರೂ ಅಂಥವರಿಗೆ ಪದೋನ್ನತಿ ಇಲ್ಲ. ನೇಮಕಾತಿ ಸಂದರ್ಭದಲ್ಲಿ ಅರ್ಹರನ್ನು ಜಿಪಿಟಿಯಲ್ಲಿ ವಿಲೀನಗೊಳಿಸಿ ಜೇಷ್ಠತೆ ಆಧಾರದ ಮೇಲೆ ಸೌಲಭ್ಯಗಳನ್ನು ನೀಡಬೇಕು. ಅರ್ಹತೆ ವಿಚಾರದಲ್ಲಿ ಶಿಕ್ಷಕರಿಗೆ ಪರೀಕ್ಷೆಗಳನ್ನು ನಡೆಸುವುದು ಸರಿಯಲ್ಲ. ವೇತನ ಶ್ರೇಣಿಯೇ ಇಲ್ಲದ ಮುಖ್ಯಶಿಕ್ಷಕರ ಹುದ್ದೆ ಇದ್ದು ಅನ್ಯಾಯ ಸರಿಪಡಿಸಲು ಸರ್ಕಾರ ಮುಂದಾಗಿಲ್ಲ’ ಎಂದು ಅಸಮಾಧಾನಹೊರಹಾಕಿದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ಪೂಜಾರ, ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ಗುಗ್ಲಿ, ಜಿಲ್ಲಾ ಘಟಕದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣವರ ಇತರರು ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಶರಣಬಸನಗೌಡ ಪಾಟೀಲ, ರಾಜ್ಯ ಸಹಕಾರ್ಯದರ್ಶಿ ಜಿ.ಸುಮತಿ, ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ, ಗುರುಪಾದಮ್ಮ ಭಂಡಾರಿ, ನಾಗನಗೌಡ, ಬಿ.ಮಂಜುನಾಥ್, ಅಹ್ಮದ್ ಹುಸೇನ್, ಗುರಪ್ಪ ಕುರಿ, ಶ್ರೀಕಾಂತ ಮಾಸಕಟ್ಟಿ, ಬಸವರಾಜ ಕೋಮಲಾಪುರ, ಪೂರ್ಣಿಮಾ ತುಪ್ಪದ, ವಿರುಪಾಕ್ಷಪ್ಪ ಅಂಗಡಿ ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಅಧ್ಯಕ್ಷರು ಇದ್ದರು. ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕುರಿತು ದಾವಲಸಾಬ್ ವಾಲಿಕಾರ, ಶರಣಪ್ಪ ತೆಮ್ಮಿನಾಳ ವಿಶೇಷ ಉಪನ್ಯಾಸ ನೀಡಿದರು. ಜೀವನಸಾಬ ವಾಲಿಕಾರ ನಿರೂಪಿಸಿದರು. ಕಳಕಮಲ್ಲೇಶ ಭೋಗಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT