ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಪಕ್ಕದಲ್ಲಿಯೇ ಜಲಮೂಲಗಳಿದ್ದರೂ ಇಲ್ಲಿ ಸಿಗದು ನೀರು!

ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕೊರತೆ: ಅಂತರ್ಜಲ ಮಟ್ಟ ಕುಸಿತ; ಪರ್ಯಾಯ ವ್ಯವಸ್ಥೆಗೆ ಒತ್ತಾಯ
Last Updated 29 ಮಾರ್ಚ್ 2021, 1:57 IST
ಅಕ್ಷರ ಗಾತ್ರ

ಕೊಪ್ಪಳ: ಪಕ್ಕದಲ್ಲಿಯೇ ತುಂಗಭದ್ರಾ ನದಿ ಮತ್ತು ಜಲಾಶಯ ಇದ್ದರೂ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ತತ್ವಾರ ಮಾತ್ರ ತಪ್ಪಿಲ್ಲ. ಕಾಲುವೆ, ಕೆರೆ, ಕಟ್ಟೆಗಳು ಇದ್ದರೂ ನೀರಿನ ದಾಹ ಇಂಗುತ್ತಿಲ್ಲ.

ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡುತ್ತಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದೆ. ಏರಿಕೆ ಆಗುತ್ತಿರುವ ತೀವ್ರ ಬಿಸಿಲು, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಮತ್ತು ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಕೊರತೆ ಕಾರಣ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ.

ಯಲಬುರ್ಗಾ, ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿ, ಕುಷ್ಟಗಿ, ಹನುಮಸಾಗರದ ಹನುಮನಾಳ ಹೋಬಳಿ ಅಲ್ಲದೆ ಗಂಗಾವತಿಯಂಥ ನೀರಾವರಿ ಪ್ರದೇಶದ ಸಣಾಪುರದಂಥ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ. ಕನಕಗಿರಿ ಭಾಗದಲ್ಲಿ ಇನ್ನೂ ಹೆಚ್ಚು ಸಮಸ್ಯೆ ಇದೆ. ಕೆರೆ ತುಂಬಿಸುವ ಯೋಜನೆ, ಜಲ ಜೀವನ್‌ ಮಿಷನ್, ಕೃಷ್ಣಾ ಬಿ ಸ್ಕೀಂ ಸೇರಿದಂತೆ ಅನೇಕ ಯೋಜನೆಗಳು ಇದ್ದರೂ ನಿರಂತರ ನೀರು, ಶುದ್ಧ ಕುಡಿಯುವ ನೀರು ಇನ್ನೂ ಮರೀಚಿಕೆ ಆಗಿದೆ.

ಜಿಲ್ಲೆಯ 7 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 630 ಕಂದಾಯ ಗ್ರಾಮಗಳಿವೆ. 36 ಗ್ರಾಮಗಳಲ್ಲಿ ಜನ ವಸತಿ ಇಲ್ಲ. ಜನಸಂಖ್ಯೆಗೆ ಅನುಗುಣವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳ ಕೊರತೆಯೂ ಇದೆ. ನೀರಾವರಿ ಭಾಗಗಳಾದ ಕಾರಟಗಿ, ಗಂಗಾವತಿ, ಕೊಪ್ಪಳದ ಉತ್ತರ ಭಾಗದ ಪಕ್ಕದಲ್ಲಿ ಕಾಲುವೆಗಳು ಇವೆ. ಇದರಿಂದ ಸುತ್ತಮುತ್ತಲಿನ ಕೊಳವೆಬಾವಿಗಳಿಗೆ ಜೀವಜಲ ಆಧಾರವಾಗಿದೆ.

ಜಿಲ್ಲೆಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಅದನ್ನು ಬಗೆಹರಿಸುವ ಕುರಿತು ಚರ್ಚೆ ನಡೆಸುವುದೇ ಇಲ್ಲ. ಮುಂದಿನ ಸಾಲಿನಲ್ಲಿನ ಕೆಲ ಬೆರಳಣಿಕೆಯಷ್ಟು ಸದಸ್ಯರು ಮಾತನಾಡಿದರೆ ಸಭೆ ಮುಗಿಯಿತು. ಸದಸ್ಯರು ಇಚ್ಛಾಶಕ್ತಿ ಪ್ರದರ್ಶನ ಮಾಡುವ ಮೂಲಕ ಆಗಬೇಕಾದ ಕೆಲಸದ ಕುರಿತು ಸಂಬಂಧಿಸಿದವರ ಗಮನಕ್ಕೆ ತಂದು, ನಿರಂತರ ಗಮನ ಹರಿಸಿದರೆ ಈ ಸಮಸ್ಯೆಗೆ ಮುಕ್ತಿ ಸಿಗುವ ಎಲ್ಲ ಅವಕಾಶವಿದೆ ಎಂದು ಸಾರ್ವಜನಿಕರು ಹೇಳುತ್ತಾರೆ.

ಕೆಲ ಸದಸ್ಯರು ತುಟಿ ಬಿಚ್ಚದೆ ಸಭೆಯಲ್ಲಿ ಪಾಲ್ಗೊಂಡು ಮುಗಿಸಿ ಹೋಗುತ್ತಾರೆ. ಮಹಿಳಾ ಸದಸ್ಯರಂತೂ ಸಭೆಯಲ್ಲಿ ಮಾತನಾಡುವುದೇ ಕಡಿಮೆ. ಬರುವ ಅನುದಾನ. ಅವರ ಪತಿರಾಯರ ಮೂಲಕ ತಿಳಿದುಕೊಂಡು ಮಾಹಿತಿ ಪಡೆದುಕೊಳ್ಳುತ್ತಾರೆ. ಕೆಲವು ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ನಮ್ಮನ್ನು ಕರೆದಿಲ್ಲ. ಆಹ್ವಾನಿಸುವುದಿಲ್ಲ ಎಂಬ ದೂರು ಮಾತ್ರ ಹೇಳುವುದನ್ನು ಮರೆಯುದಿಲ್ಲ.ಕೆಲಸಕ್ಕೆ ಬಾರದ ಸಣ್ಣ ವಿಚಾರಗಳನ್ನು ಬಿಟ್ಟು ಅಭಿವೃದ್ಧಿ ವಿಷಯ ಚರ್ಚೆ ನಡೆಸಬೇಕು ಎಂಬುವುದು ಆಯಾ ಕ್ಷೇತ್ರ ವ್ಯಾಪ್ತಿಯ ಜನರ ಆಗ್ರಹ ಕೂಡಾ ಆಗಿದೆ.

ಬರಗಾಲ, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಶಾಶ್ವತವಾಗಿ ಕಟ್ಟಿಕೊಂಡ ಕೊಪ್ಪಳವನ್ನು ಮುಂದುವರಿದ ಜಿಲ್ಲೆಯನ್ನಾಗಿ ಮಾಡುವ ಇಚ್ಛಾಶಕ್ತಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತೋರಿಸಬೇಕು.

ಗುಡ್ಡಗಾಡು ಪ್ರದೇಶ, ಕಂದಾಯ ಗ್ರಾಮಗಳು, ತೀವ್ರ ಬಿಸಿಲಿನಿಂದ ಕೂಡಿದ ತಾಲ್ಲೂಕು ಮತ್ತು ತಾಂಡಾಗಳಲ್ಲಿ ನೀರಿನ ಸಮಸ್ಯೆ ಬಹಳ ಇದೆ. ಅವರು ಜಿಲ್ಲಾ ಕೇಂದ್ರಕ್ಕೆ ಬಂದು ಪ್ರತಿಭಟನೆ ಮಾಡದಷ್ಟು ಅಸಹಾಯಕರಾಗಿದ್ದಾರೆ. ಅನೇಕರು ಉದ್ಯೋಗ ಅರಿಸಿ ದುಡಿಯಲು ಹೋಗಿದ್ದಾರೆ. ಊರಿನಲ್ಲಿ ಇರುವ ಮಕ್ಕಳು, ವೃದ್ಧರು ನೀರು ಬಂದಾಗ ತುಂಬಿಕೊಂಡು ಕಾಲ ಕಳೆಯುವ ಪರಿಸ್ಥಿತಿ ಇದೆ.

ಮೇ ತಿಂಗಳಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಗ್ರಾಮ ಪಂಚಾಯಿತಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT