ಗುರುವಾರ , ಮೇ 26, 2022
25 °C
ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಸೀಳುದುಟಿ–ವಸಡು ಪ್ಲಾಸ್ಟಿಕ್‌ ಸರ್ಜರಿ ಶಿಬಿರ ಆರಂಭ

ಮಕ್ಕಳ ಮೊಗದಲ್ಲಿ ನಗು ತರಿಸುವ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ‘ಸೀಳುದುಟಿ, ವಸಡು ಸಮಸ್ಯೆಯಿಂದ ಬಳಲುವ ಮಕ್ಕಳ ಮೊಗದಲ್ಲಿ ನಗು ತರಿಸುವ ಉದ್ದೇಶದಿಂದ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 7 ವರ್ಷಗಳಿಂದ ಉಚಿತ ಶಸ್ತ್ರಚಿಕಿತ್ಸೆ ಆಯೋಜಿಸಲಾಗುತ್ತಿದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಸಂಸ್ಥೆಯ ಆವರಣದಲ್ಲಿ ಮಂಗಳವಾರ ಉಚಿತ ಸೀಳುದುಟಿ–ವಸಡು ಪ್ಲಾಸ್ಟಿಕ್‌ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅಮೆರಿಕದ ರೋಟಾಪ್ಲಾಸ್ಟ್‌ ಇಂಟರ್‌ನ್ಯಾಷನಲ್‌, ಬೆಂಗಳೂರು ಉತ್ತರ ರೋಟರಿ ವತಿಯಿಂದ ಈ ಶಸ್ತ್ರಚಿಕಿತ್ಸಾ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಅಮೆರಿಕದ ವೈದ್ಯರ ತಂಡ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಸಂತಸದ ವಿಚಾರ. ರಾಜ್ಯ, ಹೊರರಾಜ್ಯಗಳಿಂದ ಬಂದಿರುವ ಮಕ್ಕಳ ಮೊಗದಲ್ಲಿ ನಗು ಮೂಡಿದರೆ ಅದಕ್ಕಿಂತ ಸಂತೋಷದ ವಿಚಾರ ಇನ್ನೊಂದಿಲ್ಲ’ ಎಂದು ಹೇಳಿದರು.

‘ಸೀಳುದುಟಿ ಸಮಸ್ಯೆ ಇರುವ ಮಗು ಹುಟ್ಟಿದಾಗ ಪೋಷಕರು ಅದನ್ನು ತಿರಸ್ಕಾರ ಮಾಡುವುದನ್ನು ನಾವು ಕಂಡಿದ್ದೇವೆ. ಸೀಳುದುಟಿ ಇರುವ ವ್ಯಕ್ತಿ ವಿವಾಹ ಆಗದ ಸ್ಥಿತಿಯನ್ನೂ ನೋಡಿದ್ದೇವೆ. ಆದರೆ ಇಂದು ವೈದ್ಯಲೋಕದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು ಸೀಳುದುಟಿ ಸಮಸ್ಯೆ ಸರಿಪಡಿಸುವ ಆಧುನಿಕ ಚಿಕಿತ್ಸಾ ಪದ್ಧತಿಗಳಿವೆ’ ಎಂದರು.

‘ವೈದ್ಯೋ ನಾರಾಯಣೋ ಹರಿ ಎನ್ನುವ ಮಾತು ಮೊದಲಿನಿಂದಲೂ ಇದೆ. ಮಾತೃದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ ಎನ್ನುವ ಹಾಗೆ ಅದರ ಜೊತೆಗೆ ವೈದ್ಯ ದೇವೋಭವ ಎನ್ನುಲೂಬಹುದು. ದೇವರ ಮೇಲೆ ವಿಶ್ವಾಸವಿಟ್ಟಂತೆ ವೈದ್ಯರ ಮೇಲೂ ವಿಶ್ವಾಸ ಇಡಬೇಕು. ದೇಹದ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವೈದ್ಯರ ಸೇವೆ ಅನುಪಮವಾದುದು’ ಎಂದು ಹೇಳಿದರು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕಲಪತಿ ಡಾ.ಚಂದ್ರಶೇಖರ ಶೆಟ್ಟಿ ಮಾತನಾಡಿ ‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 0.3ರಷ್ಟು ಜನರು ಸೀಳುದುಟಿ, ಸೀಳು ವಸಡು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜನ್ಮಜಾತವಾಗಿ ಈ ಸಮಸ್ಯೆ ಬಂದಿರುತ್ತದೆ. ಕೆಲವರಿಗೆ ವಂಶಪಾರಂಪರ್ಯವಾಗಿಯೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಚಿಕಿತ್ಸೆ ಇದ್ದು ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಇದು ಸಂಪೂರ್ಣವಾಗಿ ಗುಣಪಡಿಸಬಹುದಾದ ಸಮಸ್ಯೆಯಾಗಿದೆ’ ಎಂದು ಹೇಳಿದರು.

‘ಸೀಳುದುಟಿ ಸಮಸ್ಯೆಯ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕು. ಈ ಸಮಸ್ಯೆಯಿಂದ ಬಳಲುವವರು ಸ್ಪಷ್ಟವಾಗಿ ಮಾತನಾಡಲು ಅನರ್ಹರಾಗಿರುತ್ತಾರೆ. ಸೀಳುದುಟಿಗೆ ಚಿಕಿತ್ಸೆ ನೀಡುವ ಜೊತೆಗೆ ಸ್ಪಷ್ಟವಾಗಿ ಮಾತು ಬರುವಂತೆ ಮಾಡಬೇಕಾದ ಅವಶ್ಯಕತೆ ಇದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆಯಬೇಕು. ಸಮಸ್ಯೆ ಇರುವವರಿಗೆ ಅರಿವು, ಪುನರ್ವಸತಿ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಕೆ.ಸುರೇಶ್‌ಗೌಡ ಮಾತನಾಡಿ ‘ಬಾಲಗಂಗಾಧರನಾಥ ಸ್ವಾಮೀಜಿ ಅವರು ಆರಂಭಿಸಿದ ಈ ಶಿಬಿರವನ್ನು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಸ್ವಸ್ಥ ಸಮಾಜ ನರ್ಮಾಣಕ್ಕೆ ಮಠದ ಕೊಡುಗೆ ಬಲು ದೊಡ್ಡದು‌’ ಎಂದು ಹೇಳಿದರು.

ವೈದ್ಯಕೀಯ ಸಂಸ್ಥೆಯ ಸಲಹೆಗಾರಿ ಡಾ.ಸುನೀಲ್‌ ಮಲ್ಲೇಶ್‌ ಮಾತನಾಡಿ ‘ಹುಟ್ಟಿದಾಗ ಮಗು ನಗುತ್ತಿರಬೇಕು ಎಂದು ಪೋಷಕರು ಬಯಸುತ್ತಾರೆ. ಆದರೆ  ಮಗು ಅಳಬೇಕು ಎಂದು ವೈದ್ಯರು ಹೇಳುತ್ತಾರೆ. ಮಗು ಬಣ್ಣದಲ್ಲೂ ಚೆನ್ನಾಗಿರಬೇಕು, ತಮ್ಮಂತೆಯೇ ಇರಬೇಕು ಎಂದು ಪೋಷಕರು ಬಯಸುತ್ತಾರೆ. ಆದರೆ ನಾನಾ ಕಾರಣಗಳಿಂದ ಸೀಳುದುಟಿಯಾದಾಗ ಪೋಷಕರು ಸಂಕಟಪಡುತ್ತಾರೆ’ ಎಂದರು.

ಕಾರ್ಯಕ್ರಮದಲ್ಲಿ ರೋಟಪ್ಲಾಸ್ಟ್‌ ಇಂಟರ್‌ನ್ಯಾಷನಲ್‌ ಸಂಸ್ಥೆ ನಿರ್ದೇಶಕ ಡಾ.ಟಾಡ್‌ ಫಾನ್‌ವರ್ತ್, ಡಾ.ರಾಂಡಾಲ್‌ ಫ್ಲೈಡ್‌, ರೋಟರಿ ಸಂಸ್ಥೆಯ ಜಿ.ಎಸ್‌.ಲಕ್ಷ್ಮಣ್‌, ಡಾ.ಸಮೀರ್‌ ಹರಿಯಾನಿ, ಬಿ.ಎಸ್‌.ವಿನೋದ್‌ ಕುಮಾರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು