ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೆಪಕ್ಕಷ್ಟೇ ಕೋವಿಡ್‌ ಲಸಿಕೆ ವಿತರಣೆ

ಗ್ರಾಮಾರೋಗ್ಯ: ತಾಲ್ಲೂಕು ಕೇಂದ್ರಗಳಲ್ಲಿ ನೂಕುನುಗ್ಗಲು
Last Updated 29 ಮೇ 2021, 19:27 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಈಗ ದೊಡ್ಡ ನಗರಗಳಿಂದ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಿಗೆ ತನ್ನ ಕಬಂಧಬಾಹುಗಳನ್ನು ಚಾಚಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳ ಕೊರತೆ ಇರುವುದರಿಂದ ಕೋವಿಡ್‌ ಪೀಡಿತರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಈ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳೇನು, ಚಿಕಿತ್ಸೆಗೆ ಇರುವ ಕೊರತೆಗಳೇನು ಎಂಬ ವಸ್ತುಸ್ಥಿತಿಯ ಚಿತ್ರಣ ನೀಡಲು ಪ್ರಜಾವಾಣಿ ಸ್ಥಳಕ್ಕೆ ಭೇಟಿ ನೀಡಿ ಸರಣಿ ವರದಿಗಳನ್ನು ನೀಡುತ್ತಿದೆ.

***

ಮಂಡ್ಯ: ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೆಪಕ್ಕಷ್ಟೇ ಕೋವಿಡ್‌ ಲಸಿಕೆ ಸರಬರಾಜಾಗುತ್ತಿದ್ದು, ತಾಲ್ಲೂಕು ಕೇಂದ್ರದಲ್ಲಿ ಹಳ್ಳಿಯ ಜನರು ನಸುಕಿನ 5 ಗಂಟೆಯಿಂದಲೇ ಸರದಿಯಲ್ಲಿ ನಿಲ್ಲುತ್ತಾರೆ. ನಾಮುಂದು, ತಾಮುಂದು ಎನ್ನುತ್ತಾ ಅಂತರ ಮರೆತು ಜಗಳಕ್ಕಿಳಿಯುತ್ತಾರೆ. ಒಂದೆರಡು ತಾಸಿನಲ್ಲೇ ಲಸಿಕೆ ಮುಗಿಯುತ್ತದೆ. ಬಂದವರಲ್ಲಿ ಹೆಚ್ಚಿನವರು ನಿರಾಸೆಯಿಂದ ಊರಿಗೆ ಮರಳುತ್ತಾರೆ. ಮರುದಿನ ಇದೇ ಪ್ರಕ್ರಿಯೆ ಪುನರಾವರ್ತನೆಯಾಗುತ್ತದೆ.

ಜಿಲ್ಲೆಯಲ್ಲಿ ಕೋವಿಡ್‌ ಲಸಿಕೆಗೆ ಹಾಹಾಕಾರ ಉಂಟಾಗಿದೆ. ಪ್ರತಿ ಲಸಿಕಾ ಕೇಂದ್ರದಲ್ಲಿ ನಿತ್ಯ ತಲಾ 200 ಡೋಸ್‌ ನಿಗದಿಗೊಳಿಸಲಾಗಿದ್ದು ಅದಕ್ಕೆ ಸಾವಿರಾರು ಜನ ಕಾಯುತ್ತಾರೆ. ಕೋವಿಶೀಲ್ಡ್‌ ಲಸಿಕೆಯ ಮೊದಲ ಹಾಗೂ ಎರಡನೇ ಡೋಸ್‌ ನಡುವಿನ ಅಂತರವನ್ನು 12ರಿಂದ 16 ವಾರಕ್ಕೆ ಹೆಚ್ಚಳ ಮಾಡಿರುವ ವಿಚಾರದ ಬಗ್ಗೆ ಗ್ರಾಮೀಣರಿಗೆ ಅರಿವಿಲ್ಲ. ಹೀಗಾಗಿ, ಅವರೂ ಲಸಿಕೆಗೆ ಒತ್ತಾಯ ಮಾಡುತ್ತಿದ್ದು, ಲಸಿಕಾ ಕೇಂದ್ರಗಳು ಗೊಂದಲದ ಗೂಡಾಗಿವೆ.

ಪಾಂಡವಪುರ ಸರ್ಕಾರಿ ಪದವಿಪೂರ್ವ ಕಾಲೇಜಿನ ಲಸಿಕಾ ಕೇಂದ್ರಕ್ಕೆ ಶುಕ್ರವಾರ ‘ಪ್ರಜಾವಾಣಿ’ ಭೇಟಿ ನೀಡಿದ್ದ ಸಂದರ್ಭದಲ್ಲಿ ಲಸಿಕಾ ವಾಹನ ಇನ್ನೂ ಬಂದಿರಲಿಲ್ಲ. ಆದರೂ ಸಾವಿರಕ್ಕೂ ಹೆಚ್ಚು ಜನರು ಸಾಲುಗಟ್ಟಿ ನಿಂತಿದ್ದರು. 10 ಗಂಟೆ ವೇಳೆಗೆ ಲಸಿಕೆ ವಾಹನ ಬರುತ್ತಿದ್ದಂತೆ ಜನರಲ್ಲಿ ಧಾವಂತ ಸೃಷ್ಟಿಯಾಯಿತು. ನೂಕುನುಗ್ಗಲು ಶುರುವಾಯಿತು. ‘200 ಜನರಿಗೆ ಮಾತ್ರ ಲಸಿಕೆ ನೀಡಲು ಸಾಧ್ಯ’ ಎಂದು ಸಿಬ್ಬಂದಿ ತಿಳಿಸಿದಾಗ ಜನರ ಆಕ್ರೋಶ ತಾರಕಕ್ಕೇರಿತು.

‘ಮಧುಮೇಹದಿಂದ ಬಳಲುತ್ತಿರುವ ನಾನು ಬೆಳಿಗ್ಗೆ 5 ಗಂಟೆಯಿಂದಲೂ ಸಾಲಿನಲ್ಲಿ ನಿಂತಿದ್ದೇನೆ. ಆದರೂ ಟೋಕನ್‌ ನೀಡಿಲ್ಲ. ನಿಂತಲ್ಲೇ ನಿಂತಿರುವ ಕಾರಣ ನನ್ನ ಎರಡೂ ಕಾಲುಗಳು ಊದಿಕೊಂಡಿವೆ. ಈಗ, ಮತ್ತೆ ನಾಳೆ ಬರಬೇಕು ಎನ್ನುತ್ತಿದ್ದಾರೆ’ ಎಂದು ಪಾಂಡವಪುರದ ಶಾಹಿನಾ ಬೇಗಂ ಊದಿಕೊಂಡಿದ್ದ ತಮ್ಮ ಕಾಲು ತೋರಿಸಿದರು.

ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ, ಕೆ.ಆರ್‌.ಪೇಟೆ ತಾಲ್ಲೂಕಿನ ತೆಂಡೇಕೆರೆ, ನಾಗಮಂಗಲ ತಾಲ್ಲೂಕಿನ ದೇವಲಾಪುರ, ಮಳವಳ್ಳಿ ತಾಲ್ಲೂಕಿನ ತಳಗವಾದಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲಿ ಲಸಿಕೆಗಾಗಿ ಸಾಲು ಇಲ್ಲ, ಗೊಂದಲವಿಲ್ಲ. ಏಕೆಂದರೆ ಅಲ್ಲಿಗೆ ಬಂದಿದ್ದು ಕೇವಲ 10–20 ಡೋಸ್‌ ಮಾತ್ರ. ಪಿಎಚ್‌ಸಿಗಳಲ್ಲಿ ಹೆಸರಿಗಷ್ಟೇ ಲಸಿಕೆ ಪೂರೈಸುತ್ತಿದ್ದು ಜನರು ತಾಲ್ಲೂಕು ಕೇಂದ್ರಗಳ ಮೇಲೆ ಅವಲಂಬಿತರಾಗಿದ್ದಾರೆ.

‘ಪಿಎಚ್‌ಸಿಗಳಿಗೆ ನಿತ್ಯವೂ ಲಸಿಕೆ ಬರುವುದಿಲ್ಲ, ಐದಾರು ದಿನಕ್ಕೊಮ್ಮೆ ಮಾತ್ರ ಬರುತ್ತದೆ. ಕಡಿಮೆ ಡೋಸ್‌ ಬರುವ ಕಾರಣ ಮುಂಚೂಣಿ ಕಾರ್ಯಕರ್ತರಿಗೆ, ಅಂಗವಿಕಲರಿಗೆ, ಬೀದಿಬದಿ ವ್ಯಾಪಾರಿಗಳಿಗೆ ಕೊಟ್ಟು ಮುಗಿಸುತ್ತೇವೆ’ ಎಂದು ಹೆಸರು ಬಹಿರಂಗ ಪಡಿಸದ ಷರತ್ತಿನಲ್ಲಿ ಪಿಎಚ್‌ಸಿಯೊಂದರ ವೈದ್ಯಾಧಿಕಾರಿ ಹೇಳಿದರು.

ನಾಗಮಂಗಲ, ಮದ್ದೂರು, ಮಳವಳ್ಳಿಯಲ್ಲೂ ಇದೇ ಪರಿಸ್ಥಿತಿ, ಮಧ್ಯಾಹ್ನ 2 ಗಂಟೆ ವೇಳೆಗೆ ಲಸಿಕೆ ಖಾಲಿ. ಜನ ಗಲಾಟೆ ಮಾಡುತ್ತಿರುವ ಕಾರಣ ಪೊಲೀಸ್‌ ಭದ್ರತೆಯೊಂದಿಗೆ ಲಸಿಕೆ ಹಾಕಲಾಗುತ್ತಿದೆ. ಪರೀಕ್ಷಾ ಕೇಂದ್ರ, ಲಸಿಕಾ ಕೇಂದ್ರದಲ್ಲಿ ನೀರು, ನೆರಳಿಲ್ಲದೇ ನಿತ್ರಾಣಗೊಂಡ ಜನರ ಚಿತ್ರಣ ಕಂಡುಬರುತ್ತದೆ.

ಮಳವಳ್ಳಿ ತಾಲ್ಲೂಕು ತಳಗವಾದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನ ಇಲ್ಲದಿರುವುದು
ಮಳವಳ್ಳಿ ತಾಲ್ಲೂಕು ತಳಗವಾದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನ ಇಲ್ಲದಿರುವುದು

ಕೋವಿಡ್‌ ಪರೀಕ್ಷೆಯನ್ನೂ ತಾಲ್ಲೂಕು ಕೇಂದ್ರಗಳಿಗೆ ಸೀಮಿತಗೊಳಿಸಲಾಗಿದೆ. ಪಾಂಡವಪುರ ಟಿಎಪಿಸಿಎಂಎಸ್‌ ಆವರಣದಲ್ಲಿ ವೃದ್ಧೆಯೊಬ್ಬರು ಬಿಸಿಲಿನಿಂದ ನಿತ್ರಾಣಗೊಂಡು ಅಲ್ಲಿ ನಿಂತಿದ್ದ ಲಾರಿಯ ಕೆಳಗಿನ ನೆರಳಲ್ಲಿ ಮಲಗಿದ್ದ ದೃಶ್ಯ ಮನಕಲಕುವಂತಿತ್ತು. ಕೆ.ಆರ್‌.ಪೇಟೆ ಮತ್ತು ನಾಗಮಂಗಲದಲ್ಲಿ, ಜನರು ಬೇಸರದಿಂದ ವಾಪಸ್‌ ತೆರಳುತ್ತಿದ್ದರು.

ಮದ್ದೂರು ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಗೊರವನಹಳ್ಳಿ ಗ್ರಾಮದ ಶಿವಮ್ಮ ಚೀಟಿ ತೋರಿಸಿ, ‘ಸಿ.ಟಿ ಸ್ಕ್ಯಾನ್‌ಗಾಗಿ ಖಾಸಗಿ ಆಸ್ಪತ್ರೆಗೆ ಚೀಟಿ ಬರೆದುಕೊಟ್ಟಿದ್ದಾರೆ, ₹ 3 ಸಾವಿರ ಕೇಳುತ್ತಿದ್ದಾರೆ. ಕೂಲಿ ಕೆಲಸ ಮಾಡುವ ನಾನು ₹ 3 ಸಾವಿರ ಎಲ್ಲಿಂದ ತರಲಿ?. ಹೇಗಾದರೂ ಮಾಡಿ ನನ್ನ ಗಂಡನನ್ನು ಉಳಿಸಿಕೊಡಿ’ ಎಂದು ಅಂಗಲಾಚುತ್ತಿದ್ದರು.

ಆರಂಭದಲ್ಲಿ ಜಿಲ್ಲೆಯಲ್ಲಿ ಆಮ್ಲಜನಕಕ್ಕೆ ಹಾಹಾಕಾರ ಇತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ದಾನಿಗಳೂ ಅಪಾರ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುತ್ತಿದ್ದಾರೆ. ತಿಂಗಳ ಹಿಂದೆ ಶವ ಸಾಗಿಸಲೂ ಆಂಬುಲೆನ್ಸ್‌ ಇರಲಿಲ್ಲ. ಆದರೆ ದಾನಿಗಳ ಸಹಕಾರದಿಂದ ಜಿಲ್ಲಾಸ್ಪತ್ರೆಯಲ್ಲಿ 3 ಆಂಬುಲೆನ್ಸ್‌, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಒಂದು ಆಂಬುಲೆನ್ಸ್‌ ಇವೆ.​

ಶವ ಸಾಗಿಸಲು, ಚಾಲಕರು ಹಣಕ್ಕೆ ಒತ್ತಾಯಿಸುತ್ತಾರೆ ಎಂಬ ಆರೋಪವಿದೆ. ‘ಆಂಬುಲೆನ್ಸ್‌ ಚಾಲಕರು ಹಣ ಕೇಳಿದರೆ ದೂರು ನೀಡಿ’ ಎಂದು ಜಿಲ್ಲಾಸ್ಪತ್ರೆ ಆವರಣದಲ್ಲಿ ಫಲಕ ಅಳವಡಿಸಲಾಗಿದೆ.

‘ಹಳ್ಳಿಯ ಕಡೆಗೆ ವೈದ್ಯರ ನಡಿಗೆ’ ಕಾರ್ಯಕ್ರಮ ಕೇವಲ ಘೋಷಣೆಗಷ್ಟೇ ಸೀಮಿತವಾಗಿದೆ. ಹಲವು ಹಳ್ಳಿಗಳಿಗೆ ಭೇಟಿ ನೀಡಿದರೂ ಅಲ್ಲಿ ವೈದ್ಯರು ಇರಲಿಲ್ಲ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

‘ಜಿಲ್ಲೆಗೆ ಸರಬರಾಜಾಗುವ ಲಸಿಕೆಯನ್ನು ವಿಂಗಡಣೆ ಮಾಡಿ ನೀಡಲಾಗುತ್ತಿದೆ. ಎಲ್ಲಾ ಕಡೆಯೂ ಲಸಿಕೆ ಕೊರತೆ ಇದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ತಿಳಿಸಿದರು.

ಮುಗಿಬಿದ್ದ ಸೋಂಕಿತರು
ಕೆ.ಆರ್‌.ಪೇಟೆ ತಾಲ್ಲೂಕು ಹೊಸಹೊಳಲು ಕೋವಿಡ್‌ ಕೇರ್‌ ಕೇಂದ್ರಕ್ಕೆ ತೆರಳಿದ್ದಾಗ ಸೋಂಕಿತರು ಸಮಸ್ಯೆಗಳ ಮಳೆ ಸುರಿಸಿದರು.

‘ಹಳಬರ ಜೊತೆ ಹೊಸ ರೋಗಿಗಳನ್ನು ಬಿಡುತ್ತಿದ್ದಾರೆ. ಇದರಿಂದ ನಮ್ಮ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬರುತ್ತಿಲ್ಲ. ಟಾಯ್ಲೆಟ್‌ ಕಟ್ಟಿಕೊಂಡು ವಾರ ಕಳೆದಿದ್ದರೂ ಸ್ವಚ್ಛ ಮಾಡಿಲ್ಲ. ಬೆಡ್‌ಶೀಟ್‌ ರಾಶಿ ಹಾಕಿದ್ದಾರೆ. ಸೊಳ್ಳೆ ಕಾಟ ತಡೆಯಲಾಗುತ್ತಿಲ್ಲ’ ಎಂದು ಸೋಂಕಿತ ರಮೇಶ್‌ ತಿಳಿಸಿದರು.

***

ವೆಂಟಿಲೇಟರ್‌ಗೆ ಹೋದವರು ಬದುಕಿ ಬರುತ್ತಿಲ್ಲ. ಕಡೇ ಕ್ಷಣದಲ್ಲಿ ಅಂಥವರ ಜೊತೆ ಮಾತನಾಡಲು ಸಂಬಂಧಿಕರನ್ನು ಬಿಡಬೇಕು
–ಟಿ.ಎಚ್‌.ಆನಂದ್‌, ತಳಗವಾದಿ, ಮಳವಳ್ಳಿ ತಾಲ್ಲೂಕು

***

ಕೋವಿಡ್‌ ಕೇಂದ್ರದಲ್ಲಿ ಯಾವುದೇ ಸೌಲಭ್ಯಗಳಿಲ್ಲ, ಊಟ ಸೇರುತ್ತಿಲ್ಲ. <br/>ಹೀಟರ್‌ ಕೆಟ್ಟಿದೆ. ಬಿಸಿನೀರನ್ನೇ ಕೊಡದಿದ್ದರೆ ನಾವು ಗುಣಮುಖರಾಗುವುದು ಹೇಗೆ?
-ಮಂಜುಳಾ, ಸೋಂಕಿತೆ

***

10 ಡೋಸ್‌ ಲಸಿಕೆ ಮಾತ್ರ ಬಂದಿವೆ, ಅವುಗಳನ್ನು ಅಂಗವಿಕಲರಿಗೆ ಮಾತ್ರ ಹಾಕುವಂತೆ ವೈದ್ಯರು ಸೂಚಿಸಿದ್ದಾರೆ. ಅಂಗವಿಕಲ ಸಂಘದ ಸದಸ್ಯರು ಬರುವುದಾಗಿ ತಿಳಿಸಿದ್ದಾರೆ.
-ಸುಮಾ, ಶುಶ್ರೂಷಕಿ, ತೆಂಡೇಕೆರೆ ಪಿಎಚ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT