ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ: ಕಾದು ನೋಡುವ ತಂತ್ರ ಬೇಡ

ಆರೋಗ್ಯ ಇಲಾಖೆ ಸಿಬ್ಬಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಸೂಚನೆ
Last Updated 21 ಜನವರಿ 2021, 13:50 IST
ಅಕ್ಷರ ಗಾತ್ರ

ಮಂಡ್ಯ: ‘ಕೋವಿಡ್‌ ಲಸಿಕೆ ಪಡೆಯಲು ಕೆಲವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಯೊಬ್ಬರೂ ಲಸಿಕೆ ಪಡೆಯುವ ಮೂಲಕ ಮುಂದಿನ ಹಂತದ ನೌಕರರಿಗೆ, ಸಾರ್ವಜನಿಕರಿಗೆ ಮಾದರಿಯಾಗಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಸೂಚಿಸಿದರು.

ಮಿಮ್ಸ್‌ ಆಸ್ಪತ್ರೆ ಕೋವಿಡ್‌ ಲಸಿಕಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಸಿಬ್ಬಂದಿ ಜೊತೆ ಅವರು ಮಾತುಕತೆ ನಡೆಸಿದರು.

‘ಜಿಲ್ಲೆಯಲ್ಲಿ ಇಲ್ಲಿಯವರೆಗೆ 3,543 ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. 15,316 ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಇಲ್ಲಿಯವರೆಗೆ 8 ಸಾವಿರ ಡೋಸ್‌ ಲಸಿಕೆಗಳು ಜಿಲ್ಲೆಗೆ ಸರಬರಾಜಾಗಿವೆ. ಆರೋಗ್ಯ ಇಲಾಖೆಯಲ್ಲಿರುವ ಪ್ರತಿಯೊಬ್ಬರೂ ಆದ್ಯತೆ ಮೇರೆಗೆ ಲಸಿಕೆ ಪಡೆಯಲು ಅರಿವು ಮೂಡಿಸಲಾಗುತ್ತಿದೆ. ಯಾವುದೇ ಹಿಂಜರಿಕೆ ಇಲ್ಲದೇ ಹೆಸರು ನೋಂದಣಿ ಮಾಡಿಸಿಕೊಂಡು ಲಸಿಕೆ ಪಡೆಯಬೇಕು’ ಎಂದು ಹೇಳಿದರು.

‘2ನೇ ಹಂತದಲ್ಲಿ ಮುಂಚೂಣಿ ಕೋವಿಡ್‌ ಸೇನಾನಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಮುಂದಿನ ಹಂತದಲ್ಲಿ ಹೆಚ್ಚಿನ ಜನರು ಲಸಿಕೆ ಪಡೆಯಬೇಕಾದರೆ ಈಗ ಆರೋಗ್ಯ ಸಿಬ್ಬಂದಿ ಪ್ರತಿಯೊಬ್ಬರೂ ಲಸಿಕೆ ಪಡೆದು ಮಾದರಿಯಾಗಬೇಕು. ಸದ್ಯ ನೋಂದಣಿ ಮಾಡಿಸಿದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಹೀಗಾಗಿ ಲಸಿಕೆ ಪಡೆಯದವರ ಸಂಖ್ಯೆ ಹೆಚ್ಚಾಗಿದೆ. ಆದಷ್ಟು ಬೇಗ ಶೇ 100ರಷ್ಟು ಸಾಧನೆ ಮಾಡಲಾಗುವುದು’ ಎಂದರು ಹೇಳಿದರು.

‘ಕೊರೊನಾ ಸೋಂಕು ಈಗಲೂ ಹರಡುತ್ತಿದೆ ಎಂಬುದನ್ನು ಜನರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೋವಿಡ್‌ ಇಲ್ಲ ಎಂದು ತಪ್ಪು ತಿಳಿದು ಅಂತರ ಮರೆಯಬಾರದು. ಕಳೆದ 9 ತಿಂಗಳಿಂದ ಒಂದು ರೀತಿಯ ಒದ್ದಾಟ ಇತ್ತು, ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದರು. ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಲು ಅಪಾರ ಸಂಖ್ಯೆಯ ಜನರು ಬರುತ್ತಿದ್ದರು. ಈಗಲೂ ದಿನಕ್ಕೆ 6–7 ಮಂದಿಗೆ ಸೋಂಕು ಪತ್ತೆಯಾಗುತ್ತಿದೆ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು’ ಎಂದು ಹೇಳಿದರು.

‘ಚುಚ್ಚುಮದ್ದು ತೆಗೆದುಕೊಂಡರೆ ಕೊರೊನಾ ಸೋಂಕು 2ನೇ ಬಾರಿಗೆ ಹರಡುವುದನ್ನು ತಡೆಯಬಹುದು. ಔಷಧಿಯು ದೇಹದಲ್ಲಿ ರೋಗ ಹರಡುವುದನ್ನು ತಪ್ಪಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವೈದ್ಯರು, ವಿಜ್ಞಾನಿಗಳು ಕಳೆದ 9 ತಿಂಗಳಿಂದ ಕಷ್ಟಪಟ್ಟು ಹಗಲು ರಾತ್ರಿ, ಸಂಶೋಧನೆ ನಡೆಸಿ ಔಷಧಿ ಉತ್ಪತ್ತಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಪಡೆಯುವ ಮೂಲಕ ರೋಗ ಹರಡುವುದನ್ನು ತಪ್ಪಿಸಬೇಕು’ ಎಂದರು.

‘ಕೆಲವರು ಚುಚ್ಚುಮದ್ದು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಅದನ್ನು ವೈದ್ಯರೇ ಹೇಳುತ್ತಾರೆ. ಅಲರ್ಜಿ, ಆಸ್ತಮಾ ಸಮಸ್ಯೆಗಳಿದ್ದರೆ ಲಸಿಕೆ ಪಡೆಯಲು ಸಾಧ್ಯವಿಲ್ಲ. ವೈದ್ಯರ ಸಲಹೆಯ ಮೇರೆ ಮಾತ್ರ ಲಸಿಕೆ ಪಡೆಯಬೇಕು. ಶುಕ್ರವಾರ ಜಿಲ್ಲೆಯಾದ್ಯಂತ 30 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು. ಮಿಮ್ಸ್‌ ಆಸ್ಪತ್ರೆಯಲ್ಲಿ 100ಕ್ಕೆ 90 ಮಂದಿಗೆ ಲಸಿಕೆ ನೀಡಲಾಗುತ್ತಿದೆ’ ಎಂದರು.

‘ತಾಲ್ಲೂಕು ಆಸ್ಪತ್ರೆ ಸೇರಿ ವಿವಿಧ ಕೇಂದ್ರಗಳಲ್ಲೂ ದಿನಕ್ಕೆ 60–70 ಮಂದಿ ಲಸಿಕೆ ಪಡೆಯುತ್ತಿದ್ದಾರೆ. ಆ ಸಂಖ್ಯೆ ಮುಂದೆ ಇನ್ನಷ್ಟು ಹೆಚ್ಚಳವಾಗಲಿದೆ. ಎಲ್ಲರಲ್ಲೂ ಜಾಗೃತಿ ಮೂಡಿಸಿ ಲಸಿಕೆ ಹಾಕಲಾಗುತ್ತಿದೆ’ ಎಂದರು.

11 ಮಂದಿಗೆ ವಾಂತಿ, ತಲೆನೋವು

‘ಕೋವಿಡ್‌ ಲಸಿಕೆ ಪಡೆದ ನಂತರ ಜಿಲ್ಲೆಯಲ್ಲಿ 11 ಮಂದಿಗೆ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ. ಆದರೆ ಅದು ಸಣ್ಣ ಸಮಸ್ಯೆಯಾಗಿದ್ದು ಯಾವುದೇ ಗಂಭೀರ ಪರಿಣಾಮ ಕಾಣಿಸಿಕೊಂಡಿಲ್ಲ’ ಎಂದು ಡಾ.ಎಚ್‌.‍ಪಿ.ಮಂಚೇಗೌಡ ಹೇಳಿದರು.

‘11 ಮಂದಿಯಲ್ಲಿ ವಾಂತಿ, ತಲೆನೋವು, ತಲೆ ಸುತ್ತು ಕಾಣಿಸಿಕೊಂಡಿದೆ. ಅವರ ಮೇಲೆ ನಿಗಾ ವಹಿಸಿ ಆರೈಕೆ ಮಾಡಲಾಗಿದೆ. ನಂತರ ಅವರಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ, ಹೀಗಾಗಿ ಮನೆಗೆ ಕಳುಹಿಸಲಾಗಿದೆ’ ಎಂದರು.

‘ಲಸಿಕೆ ಪಡೆದರೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ರಾಜ್ಯದಲ್ಲಿ ಇಬ್ಬರು ಸತ್ತಿದ್ದಾರೆ ಎಂಬ ವರದಿ ಬಂದಿದೆ, ಆದರೆ ಅದು ಕಾಕತಾಳೀಯ ಇರಬಹುದು. ಕೋವಿಡ್‌ ಲಸಿಕೆಯಿಂದ ಸತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT