ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾಮೀನು ಪಡೆದವರಿಂದ ಮತ್ತೆ ಭ್ರೂಣಹತ್ಯೆ

ಮಂಡ್ಯದಲ್ಲಿ ನಿಲ್ಲದ ದುಷ್ಕೃತ್ಯ * ಸಿಐಡಿ ವರದಿ ಸಲ್ಲಿಸಿ ತಿಂಗಳಾದರೂ ದಾಖಲಾಗದ ಪ್ರಕರಣ
Published 16 ಮೇ 2024, 19:56 IST
Last Updated 16 ಮೇ 2024, 19:56 IST
ಅಕ್ಷರ ಗಾತ್ರ

ಮಂಡ್ಯ: ಹೆಣ್ಣು ಭ್ರೂಣಹತ್ಯೆ ಸಂಬಂಧ ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಿ ತಿಂಗಳಾಗಿದ್ದರೂ ನ್ಯಾಯಾಲಯದಲ್ಲಿ ದೂರು ದಾಖಲಿಸುವ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳು ಮತ್ತೆ ಕೃತ್ಯ ಮುಂದುವರಿಸಿರುವುದು ಕಂಡುಬಂದಿದೆ.

6 ತಿಂಗಳ ಹಿಂದೆ ತಾಲ್ಲೂಕಿನ ಹಾಡ್ಯ ಬಳಿಯ ಆಲೆಮನೆಯಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಚಟುವಟಿಕೆ ಪತ್ತೆಯಾಗಿತ್ತು. ಬೆಂಗಳೂರು, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಜಾಲ ಸಕ್ರಿಯವಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು.

ಈ ಪ್ರಕರಣದ ತೀವ್ರತೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ತಂಡ ತನಿಖಾ ವರದಿಯನ್ನು ಆರೋಗ್ಯ ಇಲಾಖೆಗೆ ತಿಂಗಳ ಹಿಂದೆ ಸಲ್ಲಿಸಿದೆ. ಅದರ ಆಧಾರದಲ್ಲಿ ಸಕ್ಷಮ ಪ್ರಾಧಿಕಾರವು ಸ್ಥಳೀಯ ನ್ಯಾಯಾಲಯಲ್ಲಿ ಖಾಸಗಿ ದೂರು ನೋಂದಣಿ (ಪಿಸಿಆರ್‌) ಮಾಡಬೇಕು. ಆದರೆ, ಇಲ್ಲಿಯವರೆಗೂ ದೂರು ದಾಖಲಾಗದ ಕಾರಣ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವುದು ಸಾಧ್ಯವಾಗಿಲ್ಲ.

ಆಗ ಬಂಧಿತರಾಗಿದ್ದವರು: ಆಲೆಮನೆಯಲ್ಲಿ ನಡೆಯುತ್ತಿದ್ದ ಕೃತ್ಯದ ಸಂಬಂಧ ಪೊಲೀಸರು 17 ಮಂದಿಯನ್ನು ಬಂಧಿಸಿದ್ದರು. ಈಗ ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ನಡುವೆ ಪಾಂಡವಪುರದ ಆರೋಗ್ಯ ಇಲಾಖೆ ವಸತಿಗೃಹದಲ್ಲಿ ಭ್ರೂಣಹತ್ಯೆಯ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣದಲ್ಲಿ 10 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಆಲೆಮನೆ ಪ್ರಕರಣದಲ್ಲಿ ಬಂಧಿತರಾಗಿದ್ದವರೂ ಇದ್ದಾರೆ. ನವೀನ್‌ ಕುಮಾರ್‌ ಎರಡೂ ಪ್ರಕರಣಗಳಲ್ಲಿ ಪ್ರಮುಖ ಆರೋಪಿ. ‘ಆಲೆಮನೆ ಪ್ರಕರಣದಲ್ಲಿ ಕ್ರಮಜರುಗಿಸುವುದು ವಿಳಂಬವಾದ ಕಾರಣ ಮತ್ತೆ ದುಷ್ಕೃತ್ಯ ಮುಂದುವರಿಯಿತು’ ಎಂದು ಪೊಲೀಸರೇ ಹೇಳುತ್ತಾರೆ.

ತಡವಾಗಿದ್ದು ಏಕೆ?:

ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ (ಪಿಸಿ ಮತ್ತು ಪಿಎನ್‌ಡಿಟಿ) ಅನ್ವಯ ಕಾಯ್ದೆ ಜಾರಿ ಮತ್ತು ಅನುಷ್ಠಾನ ಅಧಿಕಾರವನ್ನು ಉಪವಿಭಾಗಾಧಿಕಾರಿಗೆ ನೀಡಲಾಗಿದೆ. ಉಪ ವಿಭಾಗಾಧಿಕಾರಿ ಕಚೇರಿಯೇ ಸಕ್ಷಮ ಪ್ರಾಧಿಕಾರ. ಸಿಐಡಿ ವರದಿಯನ್ವಯ ಮಂಡ್ಯ ಉಪ ವಿಭಾಗಾಧಿಕಾರಿ ಅವರು ನ್ಯಾಯಾಲಯಕ್ಕೆ ದೂರು ಸಲ್ಲಿಸಬೇಕಾಗಿತ್ತು.

ಆದರೆ, ಮಂಡ್ಯ ಎ.ಸಿಯಾಗಿದ್ದ ಶಿವಮೂರ್ತಿ ಅವರನ್ನು ಲೋಕಸಭಾ ಚುನಾವಣೆ ಕಾರಣಕ್ಕೆ ಬೇರೆಡೆಗೆ ನಿಯೋಜನೆ ಮೇಲೆ ಕಳುಹಿಸಲಾಗಿದೆ. ಇವರು ತೆರಳುವುದಕ್ಕೂ ಮುನ್ನ ಆರೋಗ್ಯ ಇಲಾಖೆಗೆ ಅಧಿಕಾರ ಪತ್ರ (ಪವರ್‌ ಆಫ್‌ ಅಟಾರ್ನಿ) ನೀಡಬೇಕಾಗಿತ್ತು. ಈ ಪ್ರಕ್ರಿಯೆ ಆಗದಿರುವುದರಿಂದ ದೂರು ದಾಖಲಿಸಲು ಸಾಧ್ಯವಾಗಿಲ್ಲ. ಚುನಾವಣೆ ನೀತಿಸಂಹಿತೆ ಮುಗಿಯುವವರೆಗೂ ಈ ಪ್ರಕ್ರಿಯೆ ನಡೆಯದು ಎಂದು ಮೂಲಗಳು ತಿಳಿಸಿವೆ.

‘ಜಿಲ್ಲಾಡಳಿತ, ಆರೋಗ್ಯ ಇಲಾಖೆ ಶೀಘ್ರವಾಗಿ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡದ ಕಾರಣ ಆರೋಪಿಗಳು ಮತ್ತೆ ಕೃತ್ಯ ಮುಂದುವರಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದೇವೆ.ನ್ಯಾಯಾಲಯಕ್ಕೆ ದೂರು ದಾಖಲಿಸಿ  ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದೇವೆ’ ಎಂದು ವಿಮೋಚನಾ ಮಹಿಳಾ ಸಂಘಟನೆಯ ಜನಾರ್ದನ್‌ ತಿಳಿಸಿದರು.

ಕ್ಷಮ ಪ್ರಾಧಿಕಾರದಿಂದ ದೂರು ದಾಖಲಿಸುವ ಅಧಿಕಾರ ಹಸ್ತಾಂತರವಾಗಿಲ್ಲ. ಈ ಕುರಿತು ವಕೀಲರ ಜೊತೆ ಚರ್ಚಿಸಲಾಗುತ್ತಿದೆ. ವಾರದೊಳಗೆ ಕ್ರಮ ಕೈಗೊಳ್ಳುತ್ತೇವೆ

ಡಾ.ಕೆ.ಮೋಹನ್‌ ಜಿಲ್ಲಾ ಆರೋಗ್ಯಾಧಿಕಾರಿ

‘ಲಾಡ್ಜ್‌ನ ಕೊಠಡಿ ಸಂಖ್ಯೆ 106ರಲ್ಲಿ ಕೃತ್ಯ’ ‘

ಆಲೆಮನೆ ಮತ್ತು ಆರೋಗ್ಯ ಇಲಾಖೆ ವಸತಿಗೃಹ ಎರಡೂ ಪ್ರಕರಣಗಳ ಪ್ರಮುಖ ಆರೋಪಿ ನವೀನ್‌ ಕುಮಾರ್‌ ಪಾಂಡವಪುರದ ಲಾಡ್ಜ್‌ವೊಂದರ 106 ಸಂಖ್ಯೆಯ ಕೊಠಡಿಗೆ ಗರ್ಭಿಣಿಯರನ್ನು ಕರೆದು ತರುತ್ತಿದ್ದ. ಆತನೇ ಗರ್ಭಪಾತ ಮಾತ್ರೆ ನೀಡುತ್ತಿದ್ದ ನೋವು ಆರಂಭವಾದ ನಂತರ ವಸತಿಗೃಹಕ್ಕೆ ಕರೆದು ತರುತ್ತಿದ್ದ. ಈತನನ್ನು ಹೊರಗೆ ಬಿಟ್ಟರೆ ಮತ್ತೆ ಮತ್ತೆ ಕೃತ್ಯ ಮುಂದುವರಿಸುತ್ತಾನೆ’ ಎಂದು ಪೊಲೀಸ್‌ ಸಿಬ್ಬಂದಿಯೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT