ಸೋಮವಾರ, ಅಕ್ಟೋಬರ್ 26, 2020
24 °C
ದೇವಾಲಯ ಸುತ್ತ ಹೆದ್ದಾರಿ ಕಾಮಗಾರಿಯ ಮಣ್ಣಿನ ರಾಶಿ

500 ವರ್ಷಗಳ ಹಿಂದಿನ ಶ್ರೀರಂಗಪಟ್ಟಣದ ಗದ್ದೆ ರಂಗನಾಥ ದೇಗುಲಕ್ಕೆ ಆಪತ್ತು!

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪಟ್ಟಣದ ಪ್ರಮುಖ ಸ್ಮಾರಕಗಳಲ್ಲಿ ಒಂದಾದ ಗದ್ದೆ ರಂಗನಾಥ ಸ್ವಾಮಿ ದೇವಾಲಯ ಹೆದ್ದಾರಿ ನಿರ್ಮಾಣ ಕಾಮಗಾರಿಯಿಂದ ಮಣ್ಣಿನಡಿ ಮುಚ್ಚಿಹೋಗುವ ಅಪಾಯದಲ್ಲಿದೆ.

ಕಾವೇರಿ ನದಿ ದಂಡೆಯಲ್ಲಿರುವ ದೇವಾಲಯ ಪಕ್ಕದಲ್ಲಿ ಮಣ್ಣು ಸುರಿಯಲಾಗಿದೆ. ದೇಗುಲದ ಹಿಂಬದಿ ಗೋಡೆ ಭಾಗಶಃ ಮಣ್ಣಿನಿಂದ ಮುಚ್ಚಿಕೊಂಡಿದೆ. ಎಡ ಮತ್ತು ಬಲ ಭಾಗದಲ್ಲೂ ರಾಶಿಗಟ್ಟಲೆ ಮಣ್ಣು ಸುರಿಯಲಾಗಿದೆ. ಇದರಿಂದಾಗಿ ದೇವಾಲಯ ಸೌಂದರ್ಯವೂ ಹಾಳಾಗಿದೆ.

ದೇಗುಲದ ಮುಂದಿನ ಆನೆ ಶಿಲ್ಪಗಳು ಈಗಾಗಲೇ ಮಣ್ಣಿನಡಿ ಮುಚ್ಚಿಹೋಗಿವೆ. ಕೆಲವೇ ದಿನಗಳಲ್ಲಿ ದೇವಾಲಯ ಮಣ್ಣಿನಿಂದ
ತುಂಬಿಕೊಳ್ಳಬಹುದು.

16ನೇ ಶತಮಾನದ್ದು: ಗದ್ದೆ ರಂಗನಾಥಸ್ವಾಮಿ ದೇವಾಲಯ ವಿಜಯನಗರ ಕಾಲದಲ್ಲಿ ನಿರ್ಮಾಣವಾಗಿದೆ ಎಂಬ ಐತಿಹ್ಯವಿದೆ. 12 ಬೃಹತ್‌ ಕಲ್ಲಿನ ಕಂಬಗಳ ಆಧಾರದಲ್ಲಿ ದೇಗುಲವನ್ನು ನಿರ್ಮಿಸಲಾಗಿದೆ. ಮುಂದಿನ ಕಂಬಗಳು ಗೋಲಾಕಾರದಲ್ಲಿ, ಉಳಿದವು ಚೌಕಾಕಾರದಲ್ಲಿವೆ. ಚಾವಣಿ ಕೂಡ ಕಲ್ಲಿನಿಂದ ಕೂಡಿದೆ. ಮೂರೂವರೆ ಅಡಿ ಎತ್ತರದ ಜಗುಲಿಯ ಮೇಲಿರುವ ಗರ್ಭಗುಡಿಯಲ್ಲಿ ರಂಗನಾಥ ಸ್ವಾಮಿ ಉಬ್ಬು ಶಿಲ್ಪವಿದೆ. ಭೂದೇವಿ ಸಹಿತ ಪವಡಿಸಿದ್ದಾನೆ.

ಸ್ಮಾರಕದ ಪಟ್ಟಿಯಲ್ಲಿ ಇಲ್ಲ: 500 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಗದ್ದೆ ರಂಗನಾಥ ಸ್ವಾಮಿ ದೇವಾಲಯ ಸ್ಮಾರಕಗಳ ಪಟ್ಟಿಯಲ್ಲೇ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಕಾವೇರಿ ನದಿ ದ್ವೀಪದ ಒಳಗೇ ಇರುವ ಈ ದೇವಾಲಯವನ್ನು ಪ್ರಾಚ್ಯ ವಸ್ತು ಇಲಾಖೆ ಇದುವರೆಗೆ ‘ಸಂರಕ್ಷಿತ ಸ್ಮಾರಕ’ದ ಪಟ್ಟಿಗೆ ಸೇರಿಸಿಲ್ಲ. ಗದ್ದೆ ಬಯಲಿನಲ್ಲಿರುವ ಈ ದೇವಾಲಯ ಸದ್ಯ ಹೆದ್ದಾರಿ ಕಾಮಗಾರಿಗಾಗಿ ಮಣ್ಣು ಪಾಲಾಗುತ್ತಿದೆ.

ರಾಜ್ಯ ಪ್ರಾಚ್ಯ ವಸ್ತು ಇಲಾಖೆ ಎಇಇ ಕುಬೇರಪ್ಪ ಶುಕ್ರವಾರ ಗದ್ದೆ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ‘ದೇವಾಲಯದ ಸ್ಥಿತಿಗತಿ ಕುರಿತು ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸುತ್ತೇನೆ. ಸ್ಮಾರಕವನ್ನು ಮಣ್ಣಿನಲ್ಲಿ ಮುಚ್ಚಬಾರದು, ವಿರೂಪಗೊಳಿಸಿದರೆ ಅಥವಾ ಮಣ್ಣಿನಲ್ಲಿ ಮುಚ್ಚಿ ಹಾಕಿದರೆ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ದೇವಾಲಯವನ್ನು ಮಣ್ಣಿನಲ್ಲಿ ಮುಚ್ಚಿ ಅದರ ಮೇಲೆ ರಸ್ತೆ ಮಾಡುತ್ತಿರುವುದು ನೋವು ತರಿಸಿದೆ. ದೇವಾಲಯವನ್ನು ಸ್ಥಳಾಂತರಿಸಿದರೆ ಅದಕ್ಕೆ ಅಗತ್ಯ ಇರುವಷ್ಟು ಜಾಗವನ್ನು ಕೊಡಲು ಸಿದ್ಧನಿದ್ದೇನೆ’ ಎಂದು ಗಂಜಾಂನ ವಕೀಲ ಗೋವಿಂದರಾಜು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು