ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಗಣಿಯಲ್ಲಿ ಜಿಲೆಟಿನ್‌ ಸಂಗ್ರಹ: ಅಪಾಯ

ಹುಣಸೋಡು ಘಟನೆ ನಂತರ ಜಿಲ್ಲೆಯ ಗಣಿ ಪಕ್ಕದ ಹಳ್ಳಿ ಜನರಿಗೆ ಕಾಡುತ್ತಿದೆ ಭಯ
Last Updated 22 ಜನವರಿ 2021, 13:34 IST
ಅಕ್ಷರ ಗಾತ್ರ

ಮಂಡ್ಯ: ಶಿವಮೊಗ್ಗ ಜಿಲ್ಲೆ ಹುಣಸೋಡು ಬಳಿ ಜಿಲೆಟಿನ್‌ ಸ್ಫೋಟಗೊಂಡು ಕಾರ್ಮಿಕರು ಮೃತಪಟ್ಟ ನಂತರ ಜಿಲ್ಲೆಯಲ್ಲಿರುವ ಕಲ್ಲುಗಣಿ ಪ್ರದೇಶದ ಆಸುಪಾಸಿನ ಹಳ್ಳಿಗಳ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಗಣಿಗಳಲ್ಲಿ ಅಪಾರ ಪ್ರಮಾಣದ ಜಿಲೆಟಿನ್‌ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಇದ್ದು ಸ್ಥಳೀಯ ಗ್ರಾಮೀಣ ಜನರ ಪ್ರಾಣಕ್ಕೆ ಅಪಾಯ ಎದುರಾಗಿದೆ. ಪಾಂಡವಪುರ ತಾಲ್ಲೂಕು ಬೇಬಿಬೆಟ್ಟ, ಚಿನಕುರಳಿ, ಹೊನಗಾನಹಳ್ಳಿ, ಬನ್ನಂಗಾಡಿ, ಕನಗನಮರಡಿ, ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ.ಹೊಸೂರು, ಹಂಗರಹಳ್ಳಿ, ಚನ್ನನಕೆರೆ, ಕಾಳೇನಹಳ್ಳಿ, ಮುಂಡುಗದೊರೆ, ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿ, ಅನುಕುಪ್ಪೆ, ನಾಗಮಂಗಲ ತಾಲ್ಲೂಕಿನ ಇಜ್ಜಲಘಟ್ಟ ಭಾಗದಲ್ಲಿ ವ್ಯಾಪಕವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.

ಕಲ್ಲು ಸ್ಫೋಟ ನಡೆಸಲು ಬಹುತೇಕ ಗಣಿ ಮಾಲೀಕರು ನಿಷೇಧಿತ ಜಿಲೆಟಿನ್‌, ಡೈನಮೈಟ್‌ಗಳನ್ನೇ ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈಚೆಗೆ ನಡೆದ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಾಗಮಂಗಲ ಶಾಸಕ ಸುರೇಶ್‌ಗೌಡ, ಜಿಲ್ಲೆಯಾದ್ಯಂತ ಜಿಲೆಟಿನ್‌ ಕಡ್ಡಿಗಳು ಬಿದ್ದು ಚೆಲ್ಲಾಡುತ್ತಿವೆ ಎಂದು ಆರೋಪ ಮಾಡಿದ್ದರು.

ಜಿಲ್ಲೆಯಾದ್ಯಂತ ಅಕ್ರಮ ಗಣಿ ಚಟುವಟಿಕೆಯನ್ನು ನಿಷೇಧಿಸಲಾಗಿದೆ. ಆದರೆ ರಾತ್ರಿಯ ವೇಳೆ ನಿರಾಂತಕವಾಗಿ ಗಣಿ ಚಟುವಟಿಕೆ ಮುಂದುವರಿಸಿದ್ದಾರೆ. ವಿವಿಧೆಡೆ ಪೊಲೀಸ್‌ ಚೆಕ್‌ಪೋಸ್ಟ್‌ ಇದ್ದರೂ ಕಲ್ಲು ತುಂಬಿದ ಲಾರಿಗಳು ಯಾವುದೇ ಭಯವಿಲ್ಲದೇ ಓಡಾಡುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅಕ್ರಮ ಗಣಿಗಾರಿಕೆಯನ್ನು ಕೊನೆಗಣಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿರುವ ಘಟನೆಯಿಂದ ಆತಂಕವಾಗಿದೆ. ಬೇಬಿಬೆಟ್ಟದಲ್ಲಿ ಮೊದಲಿನಿಂದಲೂ ಸ್ಫೋಟಕಗಳು ಸಿಡಿಯುವುದು ಸಾಮಾನ್ಯವಾಗುತ್ತಿದೆ. ಹಲವು ಬಾರಿ ಬೃಹತ್‌ ಶಬ್ದ ಕೇಳಿಸಿದೆ. ಆದರೆ ಅದು ಯಾವ ಸ್ಫೋಟ ಎಂಬುದನ್ನು ಇಲ್ಲಿಯವರೆಗೂ ಅಧಿಕಾರಿಗಳು ಪತ್ತೆ ಹಚ್ಚಿಲ್ಲ. ಗಣಿ ಪ್ರದೇಶದಲ್ಲಿ ಹಲವು ಹಳ್ಳಿಗಳಿವೆ, ಕೃಷಿ ಭೂಮಿ ಇದೆ. ಜನರು ಸದಾ ಜೀವವನ್ನು ಕೈಯಲ್ಲಿಡಿದು ಓಡಾಡುವ ಪರಿಸ್ಥಿತಿ ಇದೆ’ ಎಂದು ಬೇಬಿ ಗ್ರಾಮದ ಲೋಕೇಶ್‌ ಭಯ ವ್ಯಕ್ತಪಡಿಸಿದರು.

‘ದೊಡ್ಡ ಕುಳಿ ತೋಡಿ ಅದಕ್ಕೆ ಬತ್ತಿಯಂತಿರುವ ಜಿಲೆಟಿನ್‌ ಕಡ್ಡಿಗಳನ್ನು ತುಂಬುತ್ತಾರೆ. ಒಮ್ಮೆ ಸ್ಫೋಟ ಮಾಡಿದರೆ 100 ಟನ್‌ಗೂ ಹೆಚ್ಚು ಕಲ್ಲು ಮೇಲೇಳುತ್ತದೆ. ಅಪಾರ ಪ್ರಮಾಣದ ಸ್ಫೋಟಕ ಸಂಗ್ರಹ ಇರುವ ಕಾರಣ ಅದು ಯಾವಾಗ ಸಿಡಿಯುತ್ತದೆಯೇ ಎಂಬ ಭಯ ಕಾಡುತ್ತಿದೆ’ ಎಂದು ಕುಮಾರ್‌ ಹೇಳಿದರು.

88 ಗಣಿಗೆ ಮಾತ್ರ ಅನುಮತಿ: ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಾಹಿತಿ ಅನ್ವಯ ಜಿಲ್ಲೆಯಲ್ಲಿ 88 ಗಣಿ ಗುತ್ತಿಗೆ ನೀಡಲಾಗಿದೆ. ಈ ಮಾಲೀಕರು ಕಾನೂನುಬದ್ಧವಾಗಿ ಲೈಸೆನ್ಸ್‌ ಪಡೆದಿದ್ದು ಗಣಿ ಚಟುವಟಿಕೆ ನಡೆಸುತ್ತಿದ್ದಾರೆ. ಅದರೆ ಅಕ್ರಮವಾಗಿ ನಡೆಯುತ್ತಿರುವ ನಡೆಯುತ್ತಿರುವ ಕಲ್ಲು ಗಣಿಗಳ ಸಂಖ್ಯೆ ಸಾವಿರ ದಾಟಿದೆ. ಅಕ್ರಮ ಗಣಿಗಳಿಂದಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ಹಣ ನಷ್ಟ ಉಂಟಾಗಿದೆ.

ಸ್ಫೋಟಕ ಬಳಕೆ ಪೊಲೀಸ್‌ ಕಾರ್ಯವ್ಯಾಪ್ತಿ

‘ಕಲ್ಲು ಗಣಿಯಲ್ಲಿ ಜಿಲೆಟಿನ್‌, ಡೈನಮೈಟ್‌ ಬಳಕೆ ನಿಷೇಧ ಮಾಡಲಾಗಿದೆ. ಅಕ್ರಮವಾಗಿ ಸ್ಫೋಟಕ ಸಂಗ್ರಹಿಸಿದರೆ, ಬಳಕೆ ಮಾಡಿದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ. ಅದು ಸಂಪೂರ್ಣವಾಗಿ ಪೊಲೀಸ್‌ ಕಾರ್ಯವ್ಯಾಪ್ತಿಗೆ ಸೇರಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ಪುಷ್ಪಲತಾ ಹೇಳಿದರು.

‘ಸ್ಫೋಟಕ ಬಳಕೆ ತಡೆ, ಸ್ಫೋಟಕ ವಶಪಡಿಸಿಕೊಳ್ಳುವ ವಿಚಾರದಲ್ಲಿ ಪೊಲೀಸ್‌ ಸಿಬ್ಬಂದಿಗೆ ವಿಶೇಷ ತರಬೇತಿ ಇರುತ್ತದೆ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಪೊಲೀಸರ ಸಹಕಾರ ಅತ್ಯಾವಶ್ಯ’ ಎಂದರು.

ಗಣಿ ಪ್ರದೇಶಕ್ಕೇ ಜಿಲೆಟಿನ್‌ ಸರಬರಾಜು?

‘ಸ್ಫೋಟಕ ಉತ್ಪಾದನಾ ಕಂಪನಿಗಳು ಗಣಿ ಪ್ರದೇಶಕ್ಕೇ ಬಂದು ಜಿಲೆಟಿನ್‌, ಡೈನ್‌ಮೈಟ್‌ ಸರಬರಾಜು ಮಾಡುತ್ತವೆ. ನಿಷೇಧಿತ ಸ್ಫೋಟಕಗಳ ಸರಬರಾಜು ತಡೆಯುವಲ್ಲಿ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಕಲ್ಲು ಗಣಿ ಕಾರ್ಮಿಕರೊಬ್ಬರು ತಿಳಿಸಿದರು.

‘ನಿಷೇಧಿತ ಸ್ಫೋಟಕಗಳು ಬೇಬಿಬೆಟ್ಟ, ಕನಗನಮರಡಿ ಭಾಗಕ್ಕೆ ನಿತ್ಯವೂ ಬರುತ್ತದೆ. ಪೊಲೀಸರು ಗೊತ್ತಿದ್ದರೂ ಇದನ್ನು ತಡೆಯುವ ಕೆಲಸ ಮಾಡುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT