ಮಂಡ್ಯ: ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಅಂಗಳದಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಸಂಭಾವ್ಯ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು ಬಿರುಸಿನ ಚಟುವಟಿಕೆಯಲ್ಲಿ ತೊಡಗಿದ್ದು ಅಬ್ಬರದ ಪ್ರಚಾರಕ್ಕೆ ಸಜ್ಜುಗೊಳ್ಳುತ್ತಿದ್ದಾರೆ.
ಚುನಾವಣಾ ವೇಳಪಟ್ಟಿ ಪ್ರಕಟವಾಗುವುದನ್ನೇ ಕಾತರದಿದ ಕಾಯುತ್ತಿದ್ದ ಪಕ್ಷಗಳ ಮುಖಂಡರು ಬುಧವಾರದಿಂದ ವಿವಿಧ ಚಟುವಟಿಕೆ ಆರಂಭಿಸಿದ್ದಾರೆ. ಕಾರ್ಯಕರ್ತರ ಸಭೆ ನಡೆಸಿ ಪ್ರಚಾರಕ್ಕೆ ಸಜ್ಜಾಗುವಂತೆ ಸೂಚನೆ ನೀಡುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳು ಅಂತಿಮ ಪಟ್ಟಿ ಪ್ರಕಟವಾಗುವುದನ್ನೇ ಎದುರು ನೋಡುತ್ತಿದ್ದಾರೆ. ಈಗಾಗಲೇ ಹೆಸರು ಘೋಷಣೆಯಾಗಿರುವ ಅಭ್ಯರ್ಥಿಗಳು ಮೊದಲಿಗಿಂತ ಹೆಚ್ಚು ಉತ್ಸಾಹದಿಂದ ಕ್ಷೇತ್ರದ ವಿವಿಧೆಡೆ ಸಂಚಾರ ನಡೆಸುತ್ತಿದ್ದಾರೆ.
ಜೆಡಿಎಸ್‌ನಿಂದ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಕೆ.ಆರ್.ಪೇಟೆ ಹೊರತುಪಡಿಸಿ ಉಳಿದ 6 ಕ್ಷೇತ್ರಗಳಲ್ಲಿ ಹಾಲಿ ಶಾಸಕರೇ ಅಭ್ಯರ್ಥಿಯಾಗಿದ್ದಾರೆ. ಕೆ.ಆರ್.ಪೇಟೆಯಲ್ಲಿ ಎಚ್.ಟಿ. ಮಂಜು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿದೆ. ಮಂಡ್ಯ ಹಾಗೂ ಕೆ.ಆರ್.ಪೇಟೆಯಲ್ಲಿ ಅಭ್ಯರ್ಥಿಗಳ ಬದಲಾವಣೆಗೆ ಬೇಡಿಕೆ ಇದೆ. ಆದರೆ ವರಿಷ್ಠರು ಹೆಸರು ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷದಲ್ಲಿ ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡಿದ್ದು ಇನ್ನೂ ನಾಲ್ಕು ಕ್ಷೇತ್ರಗಳ ಹೆಸರು ಪ್ರಕಟಗೊಳ್ಳಬೇಕಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳಿದ್ದು ಅವರ ಮನಸ್ಸಿನಲ್ಲಿ ದುಗುಡ ಹೆಚ್ಚಾಗಿದೆ. 2–3 ಆಕಾಂಕ್ಷಿಗಳು ಕ್ಷೇತ್ರದಾದ್ಯಂತ ಮಿಂಚಿನ ಸಂಚಾರ ಮಾಡುತ್ತಿದ್ದು ತಾವೇ ಅಭ್ಯರ್ಥಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಕೆಪಿಸಿಸಿ ವಾರದೊಳಗೆ ಅಂತಿಮ ಹೆಸರು ಘೋಷಿಸುವ ಸಾಧ್ಯತೆ ಇದೆ.
ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಘೋಷಿತ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುವುದು ಬಹುತೇಕ ಖಚಿತ. ಕಾಂಗ್ರೆಸ್ ಚಿನ್ಹೆಯಿಂದಲೇ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ವರಿಷ್ಠರು ದರ್ಶನ್ ಅವರನ್ನು ಕೋರಿದ್ದರು. ಆದರೆ ಇದಕ್ಕೆ ದರ್ಶನ್ ಒಪ್ಪಿಲ್ಲ, ಹೀಗಾಗಿ ಕೆಪಿಸಿಸಿ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಬೇಕಿದೆ.
ಮದ್ದೂರು ಕ್ಷೇತ್ರದಲ್ಲಿ ಇಬ್ಬರ ನಡುವೆ ಮಾತ್ರ ಸ್ಪರ್ಧೆ ಇದ್ದು ಹೆಚ್ಚು ಗೊಂದಲವಿಲ್ಲ. ಕದಲೂರು ಉದಯ್‌ಗೌಡ ಹಾಗೂ ಗುರುಚರಣ್ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇಬ್ಬರಲ್ಲಿ ಯಾರೇ ಅಭ್ಯರ್ಥಿಯಾದರೂ ಗೆಲುವಿಗೆ ಶ್ರಮಿಸುವುದಾಗಿ ಇಬ್ಬರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮುಂದೆ ಒಪ್ಪಿಕೊಂಡಿದ್ದಾರೆ. ವಾರದೊಳಗೆ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲಿದ್ದು ಕಾಂಗ್ರೆಸ್ ಟಿಕೆಟ್ ವಿಷಯದಲ್ಲಿ ಗೊಂದಲ ಮೂಡದು ಎಂದು ಮುಖಂಡರು ತಿಳಿಸಿದ್ದಾರೆ.
ಪ್ರಧಾನಿ ರೋಡ್ ಶೋ ನಂತರ ಅತಿಯಾದ ಉತ್ಸಾಹದಲ್ಲಿರುವ ಬಿಜೆಪಿ ಮುಖಂಡರಲ್ಲೂ ಚುನಾವಣಾ ಕಾವು ಏರತೊಡಗಿದೆ. ಕೆ.ಆರ್.ಪೇಟೆಯಿಂದ ಕೆ.ಸಿ.ನಾರಾಯಣಗೌಡರ ಸ್ಪರ್ಧೆ ಖಚಿತ. ಕೇಂದ್ರ ಸಚಿವ ಅಮಿತ್ ಶಾ ಮನವೊಲಿಕೆಯ ನಂತರ ಅವರು ಪಕ್ಷಾಂತರ ಮಾಡುವ ನಿರ್ಧಾರ ಕೈಬಿಟ್ಟಿದ್ದಾರೆ.
ಶ್ರೀರಂಗಪಟ್ಟಣದಿಂದ ಕೆ.ಎಸ್.ಸಚ್ಚಿದಾನಂದ, ಮಂಡ್ಯದಿಂದ ಅಶೋಕ್ ಜಯರಾಂ, ಮದ್ದೂರಿನಿಂದ ಎಸ್.ಪಿ.ಸ್ವಾಮಿ, ನಾಗಮಂಗಲದಿಂದ ಎಲ್.ಆರ್.ಶಿವರಾಮೇಗೌಡ, ಮೇಲುಕೋಟೆಯಿಂದ ಡಾ.ಇಂದ್ರೇಶ್, ಮಳವಳ್ಳಿಯಿಂದ ಜಿ.ಮುನಿರಾಜು ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. 2–3 ದಿನದೊಳಗೆ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಕೆ.ಆರ್.ಪೇಟೆ; ಬಿಎಲ್‌ಡಿ ಕಾಂಗ್ರೆಸ್ ಅಭ್ಯರ್ಥಿ?
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ. ಸಚಿವ ಕೆ.ಸಿ.ನಾರಾಯಣಗೌಡರು ಕಾಂಗ್ರೆಸ್ ಸೇರುವುದಿಲ್ಲ ಎಂಬುದು ಸ್ಪಷ್ಟವಾದ ನಂತರ ಅಭ್ಯರ್ಥಿ ಬಗ್ಗೆ ಗೊಂದಲ ಮುಂದುವರಿದಿದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಭಾರಿ ಕುತೂಹಲ ಮೂಡಿದೆ. ಬಿಜೆಪಿಯಿಂದ ಸ್ಪರ್ಧಿಸುವ ಕೆ.ಸಿ.ನಾರಾಯಣಗೌಡ, ಜೆಡಿಎಸ್‌ನಿಂದ ನಿಲ್ಲುವ ಎಚ್.ಟಿ.ಮಂಜು ಇಬ್ಬರೂ ಪ್ರಬಲ ಅಭ್ಯರ್ಥಿಗಳಾಗಿದ್ದು ಇವರ ವಿರುದ್ಧ ಹೋರಾಟ ಕೊಡುವವರು ಯಾರು ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಇಲ್ಲಿಯವರೆಗೂ ವಿಜಯ ರಾಮೇಗೌಡ ಅವರ ಹೆಸರು ಮುನ್ನೆಲೆಯಲ್ಲಿತ್ತು. ಆದರೆ, ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿರುವ ಬಿ.ಎಲ್.ದೇವರಾಜು ಅವರು ಕೂಡ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇದು ಕಡೆಯ ಚುನಾವಣೆಯಾಗಿದ್ದು ಒಂದು ಅವಕಾಶ ನೀಡುವಂತೆ ಅವರು ವರಿಷ್ಠರಿಗೆ ಮನವಿ ಮಾಡಿದ್ದಾರೆ. ಜೊತೆಗೆ ಎಲ್ಲಾ ರೀತಿಯಿಂದಲೂ ಗೆಲುವಿಗೆ ಶಕ್ತಿ ಮೀರಿ ಯತ್ನಿಸಲಾಗುವುದು ಎಂಬ ಮಾತು ದೇವರಾಜು ಕಡೆಯಿಂದ ಬಂದಿದ್ದು ವರಿಷ್ಠರು ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
***
ಏ.15ರೊಳಗೆ ಕಾಂಗ್ರೆಸ್ ಪಕ್ಷದ ಏಳೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಈಗಾಗಲೇ ಸಮರೋಪಾದಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಂಚಿಕೆ ನಡೆಯುತ್ತಿದೆ. ಯಾರೇ ಅಭ್ಯರ್ಥಿಯಾದರೂ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದಾರೆ.
– ಸಿ.ಡಿ.ಗಂಗಾಧರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
***
ನಮ್ಮ ಪಕ್ಷದಲ್ಲಿ ಟಿಕೆಟ್ ಗೊಂದಲ ಇಲ್ಲ, ಮನೆಮನೆಗೆ ಭೇಟಿ ನೀಡಿ ಎಚ್.ಡಿ.ಕುಮಾರಸ್ವಾಮಿ ಅವರ ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲೆಯು ಜೆಡಿಎಸ್‌ನ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಲಿದೆ.
– ಡಿ.ರಮೇಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ
***
ಈ ಬಾರಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ನಮ್ಮ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ರಾಷ್ಟ್ರ, ರಾಜ್ಯ ಮುಖಂಡರು ಜಿಲ್ಲೆಗೆ ಬರಲಿದ್ದಾರೆ. ಹೆಚ್ಚು ಸ್ಥಾನ ಪಡೆಯುವುದು ನಮ್ಮ ಗುರಿಯಾಗಿದೆ.
– ಸಿ.ಪಿ.ಉಮೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.