ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಮೂಲ ಸೌಕರ್ಯಗಳ ಕೊರತೆ: ಸರ್ಕಾರಿ ಕಚೇರಿಗಳಿಗೆ ಬೇಕಿದೆ ಚಿಕಿತ್ಸೆ

Published 18 ಡಿಸೆಂಬರ್ 2023, 6:41 IST
Last Updated 18 ಡಿಸೆಂಬರ್ 2023, 6:41 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಜನರ ಪಾಲಿನ ಶಕ್ತಿ ಕೇಂದ್ರಗಳಾದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಬೇಕಾದ ಮೂಲ ಸೌಕರ್ಯಗಳ ವ್ಯವಸ್ಥೆ ಅಷ್ಟಕ್ಕಷ್ಟೇ ಎಂಬಂತೆ ಇದೆ. ಕೊಠಡಿಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಮಾಡಿಕೊಂಡಿರುವ ಅಧಿಕಾರಿಗಳು ಜನರಿಗೆ ಬೇಕಾದ ಸೌಲಭ್ಯ ಕಲ್ಪಿಸಲು ಒಲವು ತೋರುತ್ತಿಲ್ಲ.

ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳು ಸ್ಥಳಾವಕಾಶದ ಕೊರತೆ ಎದುರಿಸುತ್ತಿವೆ. ಮಂಡ್ಯ ತಾ.ಪಂ. ಇ.ಒ. ಕಚೇರಿ ಆದಿಯಾಗಿ ಸಾಕಷ್ಟು ಕಚೇರಿಗಳು ಕಿಷ್ಕಿಂಧೆಯಂತಹ ಜಾಗದಲ್ಲಿದ್ದು, ಇಕ್ಕಟ್ಟಿನ ಸ್ಥಳದಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಕಡೆಗಳಲ್ಲಿ ಮೂಲ ಸೌಕರ್ಯ ಎಂಬುದೇ ಮರೀಚಿಕೆ ಆಗಿದೆ. ದೊಡ್ಡ ಕಟ್ಟಡಗಳಲ್ಲಿಯೂ ಜನರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಸರ್ಕಾರದ ವಿವಿಧ ಸೇವೆಗಳು ತ್ವರಿತವಾಗಿ ದೊರೆಯುತ್ತಿಲ್ಲ ಎಂಬುದು ಜನರ ದೂರು.

ಜಿಲ್ಲಾ ಕೇಂದ್ರವಾದ ಮಂಡ್ಯದ ಮೈಲಿಗಲ್ಲಿನಂತೆ ನಿಂತಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡವು ಇನ್ನೊಂದು ದಶಕದಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಹೊಸ ಜಿಲ್ಲೆಯಾಗಿ ರೂಪುಗೊಂಡ ಮಂಡ್ಯದ ಕಾರ್ಯಭಾರಕ್ಕೆ ಅನುಕೂಲವಾಗಲಿ ಎಂಬಂತೆ 1939ರ ಸುಮಾರಿಗೆ ಈ ಕಟ್ಟಡ ಕಟ್ಟಿದ್ದು, ಕಲ್ಲುಗಳ ಹೊದಿಕೆ ಹೊಂದಿರುವ ಕಟ್ಟಡ ಇಂದಿಗೂ ಭದ್ರವಾಗಿ ನಿಂತಿದ್ದು, ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದೆ. ಸದ್ಯ ಇಲ್ಲಿ 57 ಕೊಠಡಿಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ವಿವಿಧ ಇಲಾಖೆಗಳ ಕಚೇರಿಗಳು, ಕೃಷಿ, ಆಹಾರ ಸರಬರಾಜು ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತೆ ಉತ್ತಮವಾಗಿದ್ದು, ಜನರ ಅಹವಾಲು ಸ್ವೀಕಾರಕ್ಕೆ ತಳ ಮಹಡಿಯಲ್ಲಿಯೇ ಕೊಠಡಿ ಮೀಸಲಿಡಲಾಗಿದೆ. ಆದರೆ ಇತರೆ ಮೂಲ ಸೌಕರ್ಯಗಳ ಕೊರತೆ ಇದೆ. ಇಡೀ ಕಟ್ಟಡದಲ್ಲಿ ಜನರು ಕುಡಿಯುವ ನೀರಿಗಾಗಿ ಹುಡುಕಬೇಕಿದೆ. ಒಳಗೆ ಎಲ್ಲಿಯೂ ಸಾರ್ವಜನಿಕರಿಗಾಗಿ ಶೌಚಾಲಯಗಳು ಇಲ್ಲ. ಕಟ್ಟಡದ ಹೊರ ಭಾಗದಲ್ಲಿ ಜನರಿಗಾಗಿ ದುಡ್ಡು ಕೊಟ್ಟು ಉಪಯೋಗಿಸುವ ಶೌಚಾಲಯ ನಿರ್ಮಿಸಲಾಗಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಕೃಷಿ ಇಲಾಖೆ ಪಕ್ಕ ಪುಟ್ಟ ಶೌಚಾಲಯ ಇದ್ದು, ಅದನ್ನು ಸಿಬ್ಬಂದಿ ಉಪಯೋಗಕ್ಕೆಂದು ಬಳಸುತ್ತಿದ್ದು, ಬೀಗ ಜಡಿಯಲಾಗಿದೆ.

ಕಟ್ಟಡದ ಮೊದಲ ಮಹಡಿಯಲ್ಲಿ ಕೈ ತೊಳೆಯಲು ಸಣ್ಣ ಸಿಂಕ್ ಹಾಕಲಾಗಿದ್ದು, ಅದರ ಪೈಪ್‌ ಅನ್ನು ನೇರವಾಗಿ ತಳಮಹಡಿಗೆ ಬಿಡಲಾಗಿದೆ. ಹೀಗಾಗಿ ಅಲ್ಲೆಲ್ಲ ನೀರು ಹರಿದು ಪಾಚಿಕಟ್ಟಿ ನಿಂತಿದೆ. ಕಟ್ಟಡದ ಮೇಲ್ಭಾಗದಲ್ಲಿ ಅಲ್ಲಲ್ಲಿ ಗಿಡಗಳು ಬೆಳೆದಿವೆ. ಮೂಲೆಯಲ್ಲಿ ಹಳೇ ಮತಪೆಟ್ಟಿಗೆಗಳ ಸಹಿತ ವಿವಿಧ ವಸ್ತುಗಳನ್ನು ಇಟ್ಟು ಗೋದಾಮಿನಂತೆ ಬಳಸಲಾಗುತ್ತಿದೆ.

ಜಿಲ್ಲಾಧಿಕಾರಿ ಕಟ್ಟಡದ ಮುಂಭಾಗ ಹಾಗೂ ಸುತ್ತಮುತ್ತ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇದೆ. ಹೀಗಾಗಿ ವಾಹನ ಸವಾರರಿಗೆ ಸಮಸ್ಯೆ ಇಲ್ಲ. ಕಟ್ಟಡದ ಮುಂಭಾಗದಲ್ಲಿ ಪುಟ್ಟ ರ್‍ಯಾಂಪ್‌ ಇದ್ದು, ಅಂಗವಿಕಲರು ತಳ ಮಹಡಿಗೆ ಪ್ರವೇಶ ಪಡೆಯಬಹುದಾಗಿದೆ. ಇಡೀ ಕಟ್ಟಡಕ್ಕೆ ಮುಕುಟದಂತೆ ಇರುವ ದೊಡ್ಡ ಗಡಿಯಾರ ಕೆಟ್ಟು ನಿಂತಿದ್ದು, ಅದನ್ನು ಸರಿಪಡಿಸುವ ಕೆಲಸವಾಗಿಲ್ಲ.

ಜಿಲ್ಲಾ ಕೇಂದ್ರದ ಮತ್ತೊಂದು ಆಡಳಿತ ಕೇಂದ್ರವಾದ ಜಿಲ್ಲಾ ಪಂಚಾಯಿತಿ ಭವನದಲ್ಲಿಯೂ ಕೆಲವು ಉತ್ತಮ ಸೌಲಭ್ಯಗಳ ಜೊತೆಗೆ ಕೊರತೆಯೂ ಇವೆ. ಕಟ್ಟಡದ ಪಾರ್ಕಿಂಗ್ ಭಾಗಕ್ಕೆ ಹೊಂದಿಕೊಂಡಂತೆ ಇರುವ ಪ್ರವೇಶ ದ್ವಾರದಲ್ಲಿ ಅಂಗವಿಕಲರಾಗಿ ರ್‍ಯಾಂಪ್‌ ನಿರ್ಮಿಸಿದ್ದರೂ ಸದ್ಯ ಆ ಪ್ರವೇಶ ದ್ವಾರವನ್ನೇ ಬಂದ್‌ ಮಾಡಲಾಗಿದೆ. ಸ್ವಚ್ಛತೆ ಹಾಗೂ ವಾಹನ ನಿಲುಗಡೆಗೆ ಸಮಸ್ಯೆ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಪ್ರವೇಶ ದ್ವಾರದ ಬಳಿಯೇ ಶೌಚಾಲಯದ ವ್ಯವಸ್ಥೆಯೂ ಇದೆ. 1996ರಲ್ಲಿ ಈ ಕಟ್ಟಡ ನಿರ್ಮಿಸಿದ್ದು, ಇದೀಗ ಇದರ ನವೀಕರಣ ಕಾಮಗಾರಿಗಳು ನಡೆದಿವೆ.

ತಾಲ್ಲೂಕು ಕಚೇರಿ ಸಾಮರ್ಥ್ಯ ಸೌಧದ ಪಕ್ಕದಲ್ಲಿ ಇರುವ ಕಟ್ಟಡ ಹಳೇಯದಾಗಿದ್ದು, ಇದರ ಒಂದು ಭಾಗವನ್ನು ಈಗಾಗಲೇ ಬಂದ್ ಮಾಡಲಾಗಿದೆ. ಜಿಲ್ಲಾ ಕೇಂದ್ರದಲ್ಲಿನ ಇತರ ಪ್ರಮುಖ ಇಲಾಖೆ ಕಚೇರಿಗಳೂ ಜಾಗದ ಕೊರತೆ ಎದುರಿಸುತ್ತಿದ್ದು, ಅಲ್ಲಿ ಜನರಿಗೆ ಆಸನದ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳು ಮರೀಚಿಕೆ ಆಗಿವೆ.

ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ತಂದು ಕೊಡುತ್ತಿರುವ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಕೊರತೆ ಇದೆ. ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿನ ನೋಂದಣಾಧಿಕಾರಿ ಕಚೇರಿಗಳು ಉತ್ತಮ ಸೌಕರ್ಯ ಹೊಂದಿಲ್ಲ. ಜನರಿಗೆ ಬೇಕಾದ ಆಸನ, ಕುಡಿಯುವ ನೀರಿನ ವ್ಯವಸ್ಥೆ, ತ್ವರಿತ ಅಂತರ್ಜಾಲ ಸಂಪರ್ಕ ಮೊದಲಾದ ಸೌಲಭ್ಯಗಳು ಇಲ್ಲಿಗೆ ಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಮಳವಳ್ಳಿ ಪಟ್ಟಣದ ತಾಲ್ಲೂಕು ಕಚೇರಿ, ಪುರಸಭೆ ಕಚೇರಿ ಸೇರಿದಂತೆ ಇನ್ನೂ ಹಲವು ಕಚೇರಿಗಳು ಜನಸ್ನೇಹಿಯಾಗಿ ರೂಪುಗೊಂಡಿಲ್ಲ. ಕೆಲ ಕಚೇರಿಗಳಲ್ಲಿ ಶೌಚಾಲಯ ವ್ಯವಸ್ಥೆ ಸಮರ್ಪಕವಾಗಿಲ್ಲ. ಕುಡಿಯುವ ನೀರು, ಅಂಗವಿಕರಿಗೆ ರ್‍ಯಾಂಪ್‌ಗಳನ್ನು ಎಲ್ಲೆಡೆ ಅಳವಡಿಸಲಾಗಿದೆ.

ಪಹಣಿ ಹಾಗೂ ಎಂ.ಆರ್‌. ಪ್ರಮಾಣಪತ್ರಕ್ಕಾಗಿ ತಾಲ್ಲೂಕು ಕಚೇರಿಯಲ್ಲಿ ಜನ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಅರ್ಜಿ ಸಲ್ಲಿಸಿದವರಿಗೆ ತ್ವರಿತವಾಗಿ ಸೇವೆ ಸಿಗಬೇಕಿದೆ. ಪುರಸಭೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು, ಖಾತೆ ಬದಲಾವಣೆ, ಇ-ಸ್ವತ್ತು ಸೇರಿದಂತೆ ಸೇರಿದಂತೆ ನಾನಾ ಕೆಲಸಗಳಿಗೆ ತಿಂಗಳುಗಟ್ಟೆ ಅಲೆಯುವಂತಾಗಿದೆ ಎಂದು ಸಾರ್ವಜನಿಕರು ದೂರುತ್ತಾರೆ.

ನಾಗಮಂಗಲ ಪಟ್ಟಣದ ತಾಲ್ಲೂಕು ಕಚೇರಿ ಪುರಸಭೆ ಕಚೇರಿ ಒಳಗೊಂಡಂತೆ ಬಹುತೇಕ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲ ಸೌಕರ್ಯಗಳಿಲ್ಲ. ಕೆಲವೆಡೆ ಇದ್ದರೂ ಬಳಕೆಗೆ ಯೋಗ್ಯವಾಗಿಲ್ಲ. ಇಲ್ಲಿನ ಕಚೇರಿಗಳಲ್ಲಿ ಮಧ್ಯವರ್ತಿ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ರೈತರು ಆರೋಪಿಸುತ್ತಾರೆ.

ಮದ್ದೂರು ತಾಲ್ಲೂಕು ಕೇಂದ್ರದಲ್ಲಿನ ತಾಲ್ಲೂಕು ಪಂಚಾಯಿತಿ ಹಾಗೂ ವಿವಿಧ ಸರ್ಕಾರಿ ಕಚೇರಿಗಳು ಜನಸ್ನೇಹಿ ಆಗುವುದರ ಬದಲು ಜನರನ್ನು ಅಲೆದಾಡಿಸುವ ಕಚೇರಿಗಳಾಗಿವೆ. ‘ಸಕಾಲ’ ಪದಕ್ಕೆ ಅರ್ಥವೇ ಇಲ್ಲವೆಂಬಂತಾಗಿದೆ. ಅದರಲ್ಲೂ ಭೂಮಾಪನ ವಿಭಾಗದಲ್ಲಿಯಂತೂ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಅಲೆದಾಡುವುದು ಹೆಚ್ಚಾಗಿದೆ.

ಈಚೆಗೆ ಜಿಲ್ಲಾಧಿಕಾರಿ ಕುಮಾರ್ ಇಲ್ಲಿನ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿಗೆ ಚುರುಕು ಮುಟ್ಟಿಸಿದ್ದರು. ಆದರೆ ಮತ್ತೆ 'ಅದೇ ರಾಗ ಅದೇ ಹಾಡು' ಎಂಬಂತೆ ಆಗಿದೆ. ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ಸರ್ಕಾರದಿಂದ ಬರುವ ಯೋಜನೆಗಳು ಸಮರ್ಪಕವಾಗಿ ಸಾರ್ವಜನಿಕರಿಗೆ ದೊರಕುತ್ತಿಲ್ಲ. ಅರ್ಹರನ್ನು ತಲುಪುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಪಾಂಡವಪುರ ತಾಲ್ಲೂಕು ಆಡಳಿತ ಸೌಧವು ಜನಸ್ನೇಹಿ ನಾಮಫಲಕಗಳಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಜನಸ್ನೇಹಿ ನಾಮಫಲಕವನ್ನು ಹಾಕಿ ಕಚೇರಿಯಲ್ಲಿನ ಸೇವೆಗಳನ್ನು ಪರಿಚಯಿಸಲಾಗಿದೆ. ಆದರೆ ಜನ ಅಲೆದಾಡುವುದು ಮಾತ್ರ ತಪ್ಪಿಲ್ಲ. ತಾಲ್ಲೂಕು ಆಡಳಿತ ಸೌಧದಲ್ಲಿಯೇ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶಾಸಕರ ಕಚೇರಿ ತೆರೆದಿದ್ದು, ಇಬ್ಬರು ಕಂಪ್ಯೂಟರ್ ಆಪರೇಟರ್ ಹಾಗೂ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿ ಆನ್‌ಲೈನ್ ಮೂಲಕ ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಕ್ರಮಕ್ಕಾಗಿ ಸೂಚಿಸುತ್ತಿದ್ದಾರೆ. ಉಳಿದಂತೆ, ಬಹುತೇಕ ಕಚೇರಿಗಳಲ್ಲಿ ಜನರಿಗೆ ಸಿಗುವ ಸೇವೆಗಳ ಕುರಿತು ಮಾಹಿತಿಯೇ ಇಲ್ಲ.

ಶ್ರೀರಂಗಪಟ್ಟಣದ ತಾಲ್ಲೂಕು ಆಡಳಿತ ಸೌಧ ಅವ್ಯವಸ್ಥೆಗಳ ಆಗರವಾಗಿದೆ. ತಹಶೀಲ್ದಾರ್ ಕಚೇರಿ, ಸರ್ವೆ, ಸಬ್ ರಿಜಿಸ್ಟ್ರಾರ್, ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಸಮಾಜ ಕಲ್ಯಾಣ ಇಲಾಖೆ, ಚುನಾವಣಾ ಶಾಖೆ, ಉಪ ಖಜಾನೆ ಇತರ ಇಲಾಖೆಗಳ ಕಚೇರಿಗಳು ಮಿನಿ‌ ವಿಧಾನಸೌಧದಲ್ಲಿವೆ. ನಿತ್ಯ ನೂರಾರು ಮಂದಿ ಬರುತ್ತಿದ್ದು, ಜನರಿಗೆ ಬೇಕಾದ ಶೌಚಾಲಯವೇ ಇಲ್ಲ. ಇದರಿಂದ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ.

ಮಿನಿ ವಿಧಾನಸೌಧದ ಒಳಗೆ ಖಾಸಗಿ ಕಂಪೆನಿಯೊಂದು ಸ್ಥಾಪಿಸಿದ್ದ ಕುಡಿಯುವ ನೀರಿನ ಘಟಕ ವರ್ಷ ಕಳೆದರೂ ರಿಪೇರಿ‌ ಮಾಡಿಸಿಲ್ಲ. ಎರಡನೇ ಮಹಡಿಯಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಲು ಲಿಫ್ಟ್ ವ್ಯವಸ್ಥೆ ಇಲ್ಲ. ಇದರಿಂದ ವೃದ್ದರು, ರೋಗಿಗಳು ಬವಣೆ ಪಡುವಂತಾಗಿದೆ. ಮಿನಿ ವಿಧಾನಸೌಧದ ಸುತ್ತ ಗಿಡಗಂಟಿಗಳು ಬೆಳೆದಿವೆ. ಕಸ ಎರಚಾಡುತ್ತದೆ. ಸ್ವಚ್ಛತೆ ಕಡೆಗೆ ಗಮನ ಹರಿಸದೇ ಇರುವುದು ಸಾರ್ವಜನಿಕರ ಟೀಕೆಗೆ ಗ್ರಾಸವಾಗಿದೆ.

ಕೆ.ಆರ್.ಪೇಟೆ ಪಟ್ಟಣ ಹಾಗೂ ಹೋಬಳಿ ಕೇಂದ್ರಗಳಲ್ಲಿನ ಸರ್ಕಾರಿ ಕಚೇರಿಗಳು ಇನ್ನೂ ಜನಸ್ನೇಹಿ ಆಗಿಲ್ಲ. ಜನಸಾಮಾನ್ಯರು ಕೊಟ್ಟ ಅರ್ಜಿಗಳ ವಿಲೇವಾರಿ ತಡವಾಗುತ್ತಿದೆ .ಅಲ್ಲದೆ ಅವುಗಳಿಗೆ ಹಿಂಬರಹಗಳು ಸಕಾಲದಲ್ಲಿ ಸಿಗುತ್ತಿಲ್ಲ .ಮಧ್ಯವರ್ತಿಗಳ ಅವಲಂಬನೆ, ಲಂಚ ನೀಡಿ ಕೆಲಸ ಮಾಡಿಕೊಳ್ಳಲು ಪ್ರಯತ್ನ ನಡೆಸುವುದು ಹೆಚ್ಚಾಗಿದೆ.

ಪುರಸಭೆ, ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯ ಸೌಲಭ್ಯ ಸರಿಯಿಲ್ಲ. ಇದರಿಂದ ಜನರು ಪರದಾಡುತ್ತಿದ್ದಾರೆ. ಮಿನಿ ವಿಧಾನಸೌಧದ ಸುತ್ತಮುತ್ತ ಸ್ವಚ್ಛತೆ ಮಾಯವಾಗಿದೆ. ಅರ್ಜಿ ವಿಲೇವಾರಿ ಸಕಾಲದಲ್ಲಿ ನಡೆಯುತ್ತಿಲ್ಲ ಎನ್ನುವುದು ಜನರ ದೂರು.

ಜಿಲ್ಲಾಧಿಕಾರಿ ಕಚೇರಿಗೆ ರ್‍ಯಾಂಪ್‌ ಬಳಸಿ ಅಂಗವಿಕಲರೊಬ್ಬರನ್ನು ಕರೆದೊಯ್ಯುತ್ತಿರುವುದು
ಜಿಲ್ಲಾಧಿಕಾರಿ ಕಚೇರಿಗೆ ರ್‍ಯಾಂಪ್‌ ಬಳಸಿ ಅಂಗವಿಕಲರೊಬ್ಬರನ್ನು ಕರೆದೊಯ್ಯುತ್ತಿರುವುದು
ಜಿಲ್ಲಾಧಿಕಾರಿ ಕಚೇರಿ ಒಳಗಿನ ಆವರಣದಲ್ಲಿ ಸ್ವಚ್ಛತೆಯ ಕೊರತೆ
ಜಿಲ್ಲಾಧಿಕಾರಿ ಕಚೇರಿ ಒಳಗಿನ ಆವರಣದಲ್ಲಿ ಸ್ವಚ್ಛತೆಯ ಕೊರತೆ
ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಸೌಧದೊಳಗೆ ಕೆಟ್ಟು ನಿಂತ ನೀರಿನ ಫಿಲ್ಟರ್‌
ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಸೌಧದೊಳಗೆ ಕೆಟ್ಟು ನಿಂತ ನೀರಿನ ಫಿಲ್ಟರ್‌
ಕಂದಾಯ ಅದಾಲತ್ ಪಿಂಚಿಣಿ ಅದಾಲತ್ ಜನತಾ ದರ್ಶನದಂತಹ ಕಾರ್ಯಕ್ರಮಗಳು ಸರಿಯಾಗಿ ನಡೆಯುತ್ತಿಲ್ಲ. ಕೆ.ಆರ್. ಪೇಟೆ ಪುರಸಭೆಯಲ್ಲಿ ಜನರು ಕೊಟ್ಟ ಮನವಿಗಳನ್ನು ಶೀಘ್ರ ವಿಲೇವಾರಿ ಮಾಡುತ್ತಿಲ್ಲ.
ಮಂಜುನಾಥ್‌ ಪುರಸಭೆ ಸದಸ್ಯ ಕೆ.ಆರ್. ಪೇಟೆ
ಜನಸ್ನೇಹಿ ಆಗಬೇಕಾದ ಸರ್ಕಾರಿ ಇಲಾಖೆಗಳು ಜನರಿಂದ ದೂರ ಸರಿದು ಕಾರ್ಯ ನಿರ್ವಹಿಸುತ್ತಿವೆ. ಜನಸಾಮಾನ್ಯರ ಸಮಸ್ಯೆ ನಿವಾರಣೆಗಾಗಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ಮುಂದೆ ಅಂಗಲಾಚಿ ಕೇಳಿಕೊಳ್ಳುವ ಪರಿಸ್ಥಿತಿ ಹೆಚ್ಚಾಗಿದೆ
ಬಸವೇಗೌಡ ಅಧ್ಯಕ್ಷ ನಾಗರೀಕ ಹಿತರಕ್ಷಣಾ ವೇದಿಕೆ ಕೆ.ಆರ್. ಪೇಟೆ
ಶ್ರೀರಂಗಪಟ್ಟಣ ಮಿನಿ ವಿಧಾನಸೌಧದ ಎರಡನೇ‌ ಮಹಡಿಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿ ಇದ್ದು ಅಂಗವಿಕಲರು ವೃದ್ದರಿಗೆ ಹತ್ತಿ ಇಳಿಯಲು ಕಷ್ಟವಾಗಿದೆ. ಈ ಕಚೇರಿಯನ್ನು ಕೆಳಕ್ಕೆ ಸ್ಥಳಾಂತರಿಸಬೇಕು. ಸಾರ್ವಜನಿಕರಿಗೆ ಶೌಚಾಲಯ ಕುಡಿಯುವ‌ ನೀರಿನ ವ್ಯವಸ್ಥೆ ಮಾಡಬೇಕು
ಅಪ್ಪಾಜಿ ಗ್ರಾ.ಪಂ. ಸದಸ್ಯ ಕೆ.ಶೆಟ್ಟಹಳ್ಳಿ ಶ್ರೀರಂಗಪಟ್ಟಣ ತಾಲ್ಲೂಕು
ಸರ್ಕಾರಿ ಕಚೇರಿಗಳನ್ನು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಜಾರಿಗೆ ತಂದರೂ ಇನ್ನೂ ಕೆಲ ಸುಧಾರಣೆಯಾಗಬೇಕು. ಮಹಿಳೆಯರಿಗೆ ತ್ವರಿತಗತಿಯಲ್ಲಿ ಸೇವೆ ಸಿಗುವಂತಾಗಬೇಕು
ನಂದಿನಿ ಮಳವಳ್ಳಿ
ತಾಲ್ಲೂಕು ಕಚೇರಿಯಲ್ಲಿನ ಕಡತಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ. ಕಚೇರಿಯಲ್ಲಿ ಸಾರ್ವಜನಿಕರ ಯಾವುದೇ ಅರ್ಜಿಗಳು ಬಾಕಿ ಉಳಿಯದಂತೆ ಕ್ರಮ ವಹಿಸಿದ್ದೇವೆ. ತಾಲ್ಲೂಕು ಆಡಳಿತ ಸೌಧ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ
ಜಿ.ಎಸ್‌. ಶ್ರೇಯಸ್ ತಹಶೀಲ್ದಾರ್ ಪಾಂಡವಪುರ
ಅರ್ಜಿ ಸ್ವೀಕಾರ ವಿಲೇವಾರಿ ವ್ಯವಸ್ಥೆ
ಜಿಲ್ಲಾಧಿಕಾರಿ ಜಿಲ್ಲಾ ಪಂಚಾಯಿತಿ ಲೋಕಾಯುಕ್ತ ಕಚೇರಿ ಸೇರಿದಂತೆ ಪ್ರಮುಖ ಕಚೇರಿಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಹಾಗೂ ಅದರ ವಿಲೇವಾರಿಗೆ ಪ್ರತ್ಯೇಕ ವಿಭಾಗಗಳು ಕಾರ್ಯ ನಿರ್ವಹಿಸುತ್ತಿವೆ. ಸಾರ್ವಜನಿಕರು ತಮ್ಮ ಯಾವುದೇ ಕುಂದುಕೊರತೆ ಸ್ವರೂಪದ ದೂರುಗಳು ಇನ್ನಿತರೆ ವಿಷಯಗಳ ಬಗೆಗಿನ ಅಹವಾಲುಗಳನ್ನು ಇಲ್ಲಿ ಸಲ್ಲಿಸಬಹುದು. ಜಿ.ಪಂ. ಭವನದ ಆರಂಭದಲ್ಲಿಯೇ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ಪ್ರಾಧಿಕಾರದ ಕಚೇರಿಯೂ ಇದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗಳೂ ಇವೆ. ಅಲ್ಲಿಯೂ ಅಹವಾಲು ಸಲ್ಲಿಕೆಗೆ ಅವಕಾಶ ಇದೆ. ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ಅರ್ಜಿ ಸ್ವೀಕಾರದ ಕುರಿತು ಜನರ ದೂರುಗಳಿವೆ. ಸಕಾಲ ಯೋಜನೆ ಜಾರಿಯಲ್ಲಿ ಇದ್ದರೂ ಸಕಾಲಕ್ಕೆ ಸೇವೆಗಳು ಸಿಗುತ್ತಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ತ್ವರಿತವಾಗಿ ಸ್ಪಂದಿಸುವುದಿಲ್ಲ ಎನ್ನುವುದು ಜನರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT