ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರಗೋಡು: ರಾಷ್ಟ್ರಧ್ವಜಕ್ಕೆ ಅವಮಾನ, ಪರಸ್ಪರ ದೂರು

ತಾಲಿಬಾನ್‌ ಧ್ವಜಕ್ಕೆ ರಾಷ್ಟ್ರಧ್ವಜದ ಹೋಲಿಕೆ * ಸಿ.ಟಿ.ರವಿ ಬಂಧನಕ್ಕೆ ಒತ್ತಾಯ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಮಂಡ್ಯ: ‘ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಅಧಿಕಾರಿಗಳು ರಾಷ್ಟ್ರ ಧ್ವಜವನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡರು ಮಂಗಳವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದರು. ಇದೇ ವೇಳೆ, ‘ಬಿಜೆಪಿ ಮುಖಂಡ ಸಿ.ಟಿ.ರವಿ ಅವರು ರಾಷ್ಟ್ರಧ್ವಜವನ್ನು ತಾಲಿಬಾನ್‌ ಧ್ವಜಕ್ಕೆ ಹೋಲಿಸಿ ಅವಮಾನಿಸಿದ್ದು, ಕೂಡಲೇ ಅವರನ್ನು ಬಂಧಿಸಬೇಕು’ ಎಂದು ಆಗ್ರಹಿಸಿ ಮಳವಳ್ಳಿ ಕಾಂಗ್ರೆಸ್‌ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರೂ ದೂರು ಸಲ್ಲಿಸಿದರು.

‘ಹನುಮ ಧ್ವಜ ಇಳಿಸುವ ನೆಪದಲ್ಲಿ ಜಿಲ್ಲಾಡಳಿತ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದೆ. ಆ ವೇಳೆ ಧ್ವಜಸಂಹಿತೆಯನ್ನು ಗಾಳಿಗೆ ತೂರಲಾಗಿದೆ. ಮಧ್ಯಾಹ್ನದ ವೇಳೆಯಲ್ಲಿ ಸ್ತಂಭದ ಅರ್ಧ ಭಾಗಕ್ಕೆ ರಾಷ್ಟ್ರಧ್ವಜ ಹಾರಿಸಲಾಗಿದೆ. ಅಧಿಕಾರಿಗಳು ಚಪ್ಪಲಿ ಧರಿಸಿ ಧ್ವಜಾರೋಹಣ ಮಾಡಿದ್ದಾರೆ. ಆಗ ರಾಷ್ಟ್ರಗೀತೆ ಹಾಡಿಲ್ಲ, ಪುಷ್ಪಾರ್ಪಣೆ ಮಾಡಿಲ್ಲ. ಬಲವಂತದಿಂದ ಧ್ವಜಾರೋಹಣ ಮಾಡಿ  ಅವಮಾನಿಸಿದ್ದಾರೆ’ ಎಂದು ಬಿಜೆಪಿ ಮುಖಂಡರಾದ ಸಿ.ಟಿ.ಮಂಜುನಾಥ್‌, ಚಂದ್ರು, ಶಿವಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.

ತಾಲಿಬಾನ್‌ ಧ್ವಜ ಹೇಳಿಕೆ: ‘ನಾವು ಹಾರಿಸಿರುವುದು ಹನುಮ ಧ್ವಜವೇ ಹೊರತು ತಾಲಿಬಾನ್‌ ಧ್ವಜವಲ್ಲ, ಹಿಂದೂ ದೇಶದಲ್ಲಿ ಹಿಂದೂ ಧ್ವಜ ಹಾರಿಸಿದ್ದೇವೆ ಎಂದು ಹೇಳಿ ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ. ಹಿಂದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ, ರಾಷ್ಟ್ರಧ್ವಜವನ್ನು ನೇರವಾಗಿ ತಾಲಿಬಾನ್‌ ಧ್ವಜಕ್ಕೆ ಹೋಲಿಸಿದ್ದಾರೆ. ಆ ಕುರಿತ ವಿಡಿಯೊ ದೃಶ್ಯಾವಳಿಯನ್ನು ಕೂಡ ಪೊಲೀಸರಿಗೆ ಸಲ್ಲಿಸಿದ್ದೇನೆ’ ಎಂದು ಶಾಸಕ ನರೇಂದ್ರಸ್ವಾಮಿ ತಿಳಿಸಿದರು.

ಪ್ರತಿಭಟನಕಾರರ ವಿರುದ್ಧ ಎಫ್‌ಐಆರ್‌: ‘ಹನುಮ ಧ್ವಜ ತೆರವು ವೇಳೆ ನಿಷೇಧಾಜ್ಞೆ ಉಲ್ಲಂಘಿಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ತಹಶೀಲ್ದಾರ್‌ ಶಿವಕುಮಾರ ಬಿರಾದರ ನೀಡಿದ ದೂರಿನ ಮೇರೆಗೆ, ಬಿಳಿದೇಗಲು ಗ್ರಾಮದ ಪ್ರತಾಪ್‌, ಕೆರಗೋಡಿನ ಪ್ರಕಾಶ್‌, ಹೊನಗವಳ್ಳಿಮಠ ಗ್ರಾಮದ ಅವಿನಾಶ್‌ ಸೇರಿ ಹಲವರ ವಿರುದ್ಧ ಕೆರಗೋಡು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಕೆರಗೋಡಿನಿಂದ ಮಂಡ್ಯದವರೆಗೆ ಭಾನುವಾರ ಪಾದಯಾತ್ರೆ ನಡೆಸಿದ ವೇಳೆ ಫ್ಲೆಕ್ಸ್‌ ಹರಿದು, ಸಾರ್ವಜನಿಕರ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ 8 ಮಂದಿ ವಿರುದ್ಧ ಡಿವೈಎಸ್‌ಪಿ ಶಿವಮೂರ್ತಿ ನೀಡಿದ ದೂರು ಆಧರಿಸಿ ನಗರದ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಕುರುಬರ ಸಂಘದಿಂದ ದೂರು: ‘ಪಾದಯಾತ್ರೆ ವೇಳೆ ಕುರುಬರ ಸಂಘದ ವಿದ್ಯಾರ್ಥಿನಿಲಯದ ಮೇಲೆ ಕಲ್ಲು ತೂರಿ, ಕನಕದಾಸರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫ್ಲೆಕ್ಸ್‌ ಹರಿದು ದಾಂಧಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಸಂಘದ ಮುಖಂಡರು ಹಾಗೂ ರಾಜ್ಯ ಶೋಷಿತ ಸಮುದಾಯಗಳ ಮಹಾಒಕ್ಕೂಟದ ಪದಾಧಿಕಾರಿಗಳು ಪ್ರತ್ಯೇಕವಾಗಿ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು
ಸಲ್ಲಿಸಿದರು.

ಕುರುಬರ ಸಂಘದ ಕಾರ್ಯದರ್ಶಿ ಶಶಿಧರ ಪಶ್ಚಿಮ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದು 40 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಪಿಡಿಒ ಅಮಾನತು: ‘ಗ್ರಾಮ ಪಂಚಾಯಿತಿಯ ಜಾಗದಲ್ಲಿ ಧ್ವಜಸ್ತಂಭ ನಿರ್ಮಿಸಲು ಖಾಸಗಿ ಸಂಸ್ಥೆಗೆ ನಿಯಮ ಬಾಹಿರವಾಗಿ ಅನುಮತಿ ನೀಡಲಾಗಿದೆ’ ಎಂಬ ಆರೋಪದ ಮೇರೆಗೆ ಕೆರಗೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಂ.ಜೀವನ್‌ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್‌ ತನ್ವೀರ್‌ ಆಸೀಫ್‌ ಸೋಮವಾರ ಆದೇಶಿಸಿದ್ದಾರೆ.

‘2023, ಡಿ.23ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸದೆ, ಪಂಚಾಯತ್‌ ರಾಜ್‌ ಕಾಯ್ದೆಯ ನಿಯಮ ಉಲ್ಲಂಘಿಸಿ, ಧ್ವಜಸ್ತಂಭ ನಿರ್ಮಿಸಲು ಗೌರಿಶಂಕರ ಸೇವಾ ಟ್ರಸ್ಟ್‌ಗೆ ಸರ್ಕಾರಿ ಜಾಗ ನೀಡಲಾಗಿದೆ. ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಷರತ್ತು ಉಲ್ಲಂಘಿಸಿದ್ದರೂ ಕ್ರಮ ಕೈಗೊಳ್ಳದೆ ಪಿಡಿಒ ಕರ್ತವ್ಯ ಲೋಪ ಎಸಗಿದ್ದಾರೆ. ಅದರಿಂದ ಸಂಘರ್ಷ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಆದೇಶಿಸಿದ್ದಾರೆ.

ಈ ನಡುವೆ, ಕೆರಗೋಡು ಗ್ರಾಮದಲ್ಲಿ ನಿಷೇಧಾಜ್ಞೆಯನ್ನು ತೆರವುಗೊಳಿಸ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಚಲುವರಾಯಸ್ವಾಮಿಗೆ ನಿಂದನೆ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಮಂಡ್ಯದಿಂದ ನಾಗಮಂಗಲಕ್ಕೆ ತೆರಳುತ್ತಿದ್ದಾಗ ಕೆರಗೋಡು ಗ್ರಾಮದಲ್ಲಿ ಕೆಲವರು ಅವರ ಕಾರು ಅಡ್ಡಗಟ್ಟಿದರು. ‘ನೀವು ನಮ್ಮ ಊರಿಗೇಕೆ ಬಂದಿರಿ’ ಎಂದು ಆಕ್ಷೇಪಿಸಿ ಧಿಕ್ಕಾರ ಕೂಗಿದರು.

ಪ್ರತಿಭಟನಕಾರರೊಂದಿಗೆ ಮಾತನಾಡಲು ಯತ್ನಿಸಿದ ಸಚಿವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ‘ನೀವು ನಮ್ಮ ಊರಿಗೆ ಮತ್ತೆ ಬಂದರೆ ಘೇರಾವ್‌ ಹಾಕುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎಚ್‌.ಡಿ.ಕುಮಾರ ಸ್ವಾಮಿ ಅವರಿಗೆ ಜೈಕಾರ ಹಾಕಿದರು.

ನಡಾವಳಿ ಪುಸ್ತಕ ಎಲ್ಲಿ?

ಹನುಮ ಧ್ವಜಾರೋಹಣ ಸಂಬಂಧ ಕೆರಗೋಡು ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆ ನಡಾವಳಿ ಪುಸ್ತಕ ನೀಡುವಂತೆ ಮಂಗಳವಾರ ಕೆಲ ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು. ‘ನಡಾವಳಿ ಪುಸ್ತಕ ಇಲ್ಲ’ ಎಂದು ಅಧಿಕಾರಿಗಳು ತಿಳಿಸಿದಾಗ ಕಚೇರಿಯಲ್ಲಿ ವಾಗ್ವಾದ ನಡೆಯಿತು.

‘ನಡಾವಳಿ ಪುಸ್ತಕ ತಾಲ್ಲೂಕು ಪಂಚಾಯಿತಿ ಇಒ ಬಳಿ ಇದೆ, ಅದನ್ನು ಕೊಡಲು ನಮಗೆ ಅಧಿಕಾವಿಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.

‘ನರೇಂದ್ರಸ್ವಾಮಿ ರಾಜಕೀಯವಾಗಿ ಸೀಡ್‌ಲೆಸ್’

ಚಿಕ್ಕಮಗಳೂರು: ‘ಮಳವಳ್ಳಿ ಕಾಂಗ್ರೆಸ್‌ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ರಾಜಕೀಯವಾಗಿ ಈಗ ಸೀಡ್‌ಲೆಸ್ ಆಗಿದ್ದಾರೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ತಿರುಗೇಟು ನೀಡಿದರು.

‘ಮಂತ್ರಿಗಿರಿಗೆ ಅರ್ಜಿ ಹಾಕುತ್ತಿರುವ ನರೇಂದ್ರಸ್ವಾಮಿ ಪಕ್ಷದ ನಾಯಕರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಯಾರು ಹಾಗೆ ಇರುತ್ತಾರೋ, ಅವರು ಮತ್ತೊಬ್ಬರ ಬಗ್ಗೆ ಮಾತನಾಡುತ್ತಾರೆ. ಆ ಕಾರಣಕ್ಕೆ ಅವರ ಬಾಯಿಂದ ಈ ರೀತಿಯ ಮಾತು ಬಂದಿದೆ’ ಎಂದು ಅವರು ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯಿಸಿದರು.

‘ಕಾಂಗ್ರೆಸ್ ನಾಯಕರು ನಡೆದುಕೊಳ್ಳುವ ಮಾದರಿಯಲ್ಲೇ ಇತರರು ನಡೆದುಕೊಳ್ಳುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ಬಗ್ಗೆ ಏಕವಚನದಲ್ಲಿ ಮಾತನಾಡಿದರು. ಆ ಪಕ್ಷದ ಇತರ ಮುಖಂಡರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ನರೇಂದ್ರಸ್ವಾಮಿ ಅವರಿಂದ ರಾಜಕೀಯಕ್ಕೆ ಏನೂ ಕೊಡುಗೆ ಇರುವುದಿಲ್ಲ’ ಎಂದು ಅವರು ಹೇಳಿದರು.

‘ಕೇಸರಿ ಶಾಲು ಧರಿಸಿದರೆ ಮಹಾಪರಾಧವೇ?’

ಬೆಂಗಳೂರು: ‘ನಾನು ಕೇಸರಿ ಶಾಲು ಧರಿಸುವುದು ಮಹಾನ್‌ ಅಪರಾಧವೆ? ಕಾಂಗ್ರೆಸ್‌ನವರಿಗೆ ಕೇಸರಿ ಬಣ್ಣದ ಕುರಿತು ಸಂಕುಚಿತ ಭಾವನೆ ಏಕೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ರಾಷ್ಟ್ರ ಧ್ವಜದಲ್ಲಿ ಯಾವ ಬಣ್ಣಗಳಿವೆ ಎಂಬುದು ಕಾಂಗ್ರೆಸ್‌ನವರಿಗೆ ತಿಳಿದಿಲ್ಲವೆ? ರಾಷ್ಟ್ರ ಧ್ವಜದಿಂದ ಕೇಸರಿ ಬಣ್ಣ ತೆಗೆದರೆ ಏನು ಅರ್ಥ ಉಳಿಯುತ್ತದೆ. ಕೇಸರಿ ಬಣ್ಣದ ಮೇಲೆ ಅಸಹನೆ, ಸಂಕುಚಿತ ಭಾವನೆ ಏಕೆ? ನಾನು ಕೇಸರಿ ಶಾಲು ಹಾಕಿಕೊಂಡಿದ್ದರ ಬಗ್ಗೆ ಮಾತನಾಡುತ್ತಿದ್ದಾರೆ. ದಲಿತ ಸಮುದಾಯದ ಬಂಧುಗಳು ಸಭೆಗೆ ಕರೆದಾಗ ಅಲ್ಲಿಗೆ ಹೋಗಿ ಜೈ ಭೀಮ್‌ ಕಾರ್ಯಕರ್ತರು ಧರಿಸುವ ನೀಲಿ ಬಣ್ಣದ ಶಾಲನ್ನೂ ಹಾಕಿದ್ದೇನೆ. ಇದು ಇವರ ಕಣ್ಣಿಗೆ ಕಾಣಲಿಲ್ಲವೆ’ ಎಂದು ಕೇಳಿದರು.

‘ಕೇಸರಿ ಶಾಲು ಹಾಕಿದ ತಕ್ಷಣ ನಾನು ಜೆಡಿಎಸ್‌ ಪಕ್ಷವನ್ನು ಅವನತಿಗೆ ತಳ್ಳಿದ್ದೇನೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿದ್ದಾರೆ. ಪಕ್ಷ ಉಳಿಸಿಕೊಳ್ಳುವುದನ್ನು ನಾನು ಇವರಿಂದ ಕಲಿಯಬೇಕಿಲ್ಲ. ಜನರು ಕೊಟ್ಟಿರುವ ಪ್ರೀತಿ ನನ್ನ ಜತೆಗಿದೆ’ ಎಂದರು.-

ಕೇಸರಿ ಶಾಲು ಧರಿಸಿದ ಕುಮಾರಸ್ವಾಮಿಯವರು ಕೆರಗೋಡು ಘಟನೆಯನ್ನು ಮುಂದಿಟ್ಟಕೊಂಡು ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ.
-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ
ಕೆರಗೋಡಿನಲ್ಲಿ ಹನುಮ ಧ್ವಜ ಹಾರಿಸುವವರೆಗೂ ಬಿಜೆಪಿ ಹೋರಾಟ ನಡೆಸಲಿದೆ. ಸರ್ಕಾರ ಇನ್ನಷ್ಟು ಕೆದಕಲು ಹೋದರೆ ದೇಶವ್ಯಾಪಿ ಹೋರಾಟ ನಡೆಸಲಾಗುವುದು.
- ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT