ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾನ್ಯ ಖರೀದಿ | ಮಧ್ಯವರ್ತಿಗಳಿಗೆ ಮಣೆ ಹಾಕಿದರೆ ಕ್ರಮ: ಬಂಡಿಸಿದ್ದೇಗೌಡ ಎಚ್ಚರಿಕೆ

Published 17 ಫೆಬ್ರುವರಿ 2024, 14:12 IST
Last Updated 17 ಫೆಬ್ರುವರಿ 2024, 14:12 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ‘ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಧಾನ್ಯ ಖರೀದಿಸುವಾಗ ನಿಜವಾದ ರೈತರಿಂದ ಖರೀದಿಸಬೇಕು. ಮಧ್ಯವರ್ತಿಗಳಿಗೆ ಮಣೆ ಹಾಕಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಹಾಗೂ ಸೆಸ್ಕ್‌ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಎಚ್ಚರಿಸಿದರು.

ಪಟ್ಟಣದ ಟಿಎಪಿಸಿಎಂಎಸ್‌ ಕಚೇರಿ ಆವರಣದಲ್ಲಿ, ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಶನಿವಾರ ಧಾನ್ಯ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರತಿ ಕ್ವಿಂಟಲ್‌ ಭತ್ತಕ್ಕೆ ₹2183 ಮತ್ತು ರಾಗಿಗೆ ₹3,846 ನಿಗದಿ ಮಾಡಲಾಗಿದೆ. ರೈತರಿಗೆ ಇದರ ಪ್ರಯೋಜನ ಸಿಗಬೇಕು. ಅನ್ಯಾಯವಾಗಲು ಅವಕಾಶ ನೀಡಬಾರದು’ ಎಂದು ತಿಳಿಸಿದರು.

ತಾಂತ್ರಿಕ ಕಾರಣಗಳಿಂದಾಗಿ ಸರ್ಕಾರ ತುಸು ತಡವಾಗಿ ಧಾನ್ಯ ಖರೀದಿ ಕೇಂದ್ರ ತೆರೆದಿದೆ. ಆದರೂ ನಿಗದಿತ ದಿನಾಂಕದ ವರೆಗೆ ಹೆಸರು ನೊಂದಾಯಿಸಿಕೊಳ್ಳುವ ಎಲ್ಲ ರೈತರಿಂದಲೂ ಭತ್ತ ಮತ್ತು ರಾಗಿಯನ್ನು ಖರೀದಿಸಬೇಕು. ರೈತರಿಂದ ದೂರು ಬರದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನಿರ್ದೇಶಕ ಕೆ.ಎಸ್‌. ಮೋಹನ್‌ ಮಾತನಾಡಿ, ‘ಸರ್ಕಾರ ಡಿಸೆಂಬರ್‌ ತಿಂಗಳಿನಲ್ಲಿಯೇ ಧಾನ್ಯ ಖರೀದಿ ಕೇಂದ್ರ ತೆರೆಯಬೇಕು. ಹಾಗಾದರೆ ರೈತರಿಗೆ ಅನುಕೂಲ ಆಗುತ್ತದೆ. ತಡವಾದರೆ ರೈತರು ದಳ್ಳಾಳಿಗಳಿಗೆ ಮಾರಾಟ ಮಾಡುತ್ತಾರೆ. ಇದರಿಂದ ನಷ್ಟವೂ ಆಗುತ್ತದೆ. ಧಾನ್ಯ ಮಾರಾಟ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ಮಧ್ಯವರ್ತಿಗಳ ಪ್ರವೇಶಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು’ ಎಂದರು.

ತಹಶೀಲ್ದಾರ್‌ ಪರಶುರಾಮ ಸತ್ತಿಗೇರಿ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಉಸ್ತುವಾರಿ ಕಾರ್ಯದರ್ಶಿ ಶೈಲಜಾ ಪ್ರಿಯದರ್ಶಿನಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಎಂ. ನಂದೀಶ್‌, ಉಪಾಧ್ಯಕ್ಷೆ ಲಕ್ಷ್ಮಿದೇವಮ್ಮ, ನಿರ್ದೇಶಕರಾದ ನಾಗರಾಜು, ಎನ್‌.ವಿ. ಕಾಂತಾಮಣಿ, ರಾಮಲಿಂಗೇಗೌಡ, ಆಹಾರ ಶಿರಸ್ತೇದಾರ್‌ ರಮಾ, ಧಾನ್ಯ ಖರೀದಿ ಕೇಂದ್ರದ ನಿಯೋಜಿತ ಅಧಿಕಾರಿ ಜಿ.ಎಂ. ದರ್ಶನ್‌, ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ವೆಂಕಟೇಶ್‌, ಗ್ರೇಟ್‌–2 ತಹಶೀಲ್ದಾರ್‌ ಟಿ. ಆದರ್ಶ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT