ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ: ಲಿಂಗಪಟ್ಟಣ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ 70 ಮಂದಿ ಅಸ್ವಸ್ಥ

Last Updated 28 ಅಕ್ಟೋಬರ್ 2020, 15:21 IST
ಅಕ್ಷರ ಗಾತ್ರ

ಹಲಗೂರು (ಮಂಡ್ಯ ಜಿಲ್ಲೆ): ಸಮೀಪದ ಲಿಂಗಪಟ್ಟಣ ಗ್ರಾಮದಲ್ಲಿರುವ ಮಾರಮ್ಮನ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ದಿನದ ಪೂಜೆಯ ನಂತರ ಪ್ರಸಾದ ಸೇವಿಸಿದ 70 ಮಂದಿ ಬುಧವಾರ ಅಸ್ವಸ್ಥರಾಗಿದ್ದಾರೆ.

ಮಾರಮ್ಮನ ದೇವಾಲಯದಲ್ಲಿ ಪ್ರತಿ ಮಂಗಳವಾರ ವಿಶೇಷ ಪೂಜೆ ನಡೆಯುತ್ತದೆ. ಪೂಜೆಯ ನಂತರ ನೂರಾರು ಭಕ್ತರು ಪ್ರಸಾದವಾಗಿ ಪುಳಿಯೊಗರೆ ಸೇವನೆ ಮಾಡಿದ್ದರು. ನಂತರ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ 70 ಮಂದಿ ವಾಂತಿ–ಭೇದಿಯಿಂದ ಬಳಲಿದ್ದಾರೆ. ಹಲಗೂರು ಆಸ್ಪತ್ರೆಗೆ ತೆರಳಿದ ನಂತರ ಪುಳೆಯೊಗರೆ ಸೇವನೆಯಿಂದಲೇ ಅಸ್ವಸ್ಥಗೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

15 ಮಂದಿ ಹಲಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ಮರಳಿದ್ದರು. ನಂತರ 50ಕ್ಕೂ ಹೆಚ್ಚು ಮಂದಿ ವಾಂತಿ– ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ತೆರಳಿದರು. ಗ್ರಾಮಸ್ಥರು ಅಸ್ವಸ್ಥಗೊಂಡಿರುವ ಸುದ್ದಿ ತಿಳಿದ ಮಳವಳ್ಳಿ ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಹಾಗೂ ತಂಡ ಗ್ರಾಮಕ್ಕೆ ತೆರಳಿ, ಸರ್ಕಾರಿ ಶಾಲೆ ಆವರಣದಲ್ಲಿ ಚಿಕಿತ್ಸೆ ನೀಡಿದರು.

‘70ಕ್ಕೂ ಹೆಚ್ಚು ಮಂದಿಯಲ್ಲಿ 15 ಜನರಿಗೆ ಹೆಚ್ಚು ಸುಸ್ತಾಗಿದೆ. ಪ್ರಾಥಮಿಕವಾಗಿ ಇದಕ್ಕೆ ದೇವಾಲಯದಲ್ಲಿ ವಿತರಣೆ ಮಾಡಿದ ಪುಳಿಯೊಗರೆಯೇ ಕಾರಣ ಎನ್ನಲಾಗಿದೆ. ಪುಳಿಯೊಗರೆಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ವರದಿ ಬಂದ ನಂತರ ನಿಖರ ಕಾರಣ ಗೊತ್ತಾಗಲಿದೆ. ಗ್ರಾಮದಲ್ಲಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ವಾಹನ ಹಾಗೂ ಒಂದು ತಂಡವನ್ನು ಇಲ್ಲಿಯೇ ಇರಿಸಲಾಗಿದೆ’ ಎಂದು70 ವೈದ್ಯಾಧಿಕಾರಿ ಡಾ.ವೀರಭದ್ರಪ್ಪ ಹೇಳಿದರು.

‘ಕೋವಿಡ್‌ ಹಿನ್ನೆಲೆಯಲ್ಲಿ ಯಾವುದೇ ದೇವಾಲಯದಲ್ಲಿ ಪ್ರಸಾದ ವಿತರಣೆಗೆ ಅವಕಾಶವಿಲ್ಲ. ಆದರೂ ಪ್ರಸಾದ ವಿತರಣೆ ಮಾಡಿರುವುದು ತಪ್ಪು. ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದವರ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ತಹಶೀಲ್ದಾರ್‌ ಚಂದ್ರಮೌಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT