ಶನಿವಾರ, ಜೂನ್ 19, 2021
26 °C
ಕಾರ್ಖಾನೆ ಅಧ್ಯಕ್ಷರ ಮೇಲೆ ರೈತರಿಂದ ಪ್ರಶ್ನೆಗಳ ಸುರಿಮಳೆ

ಮೈಷುಗರ್‌, ಪಿಎಸ್‌ಎಸ್‌ಕೆಯಲ್ಲಿನ ಬೆಳವಣಿಗೆಗಳ ಶ್ವೇತಪತ್ರ ಹೊರಡಿಸಲು ಆಗ್ರಹ

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: 2008ರಲ್ಲಿ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಮೈಷುಗರ್‌, ಪಿಎಸ್‌ಎಸ್‌ಕೆ ಎರಡೂ ಕಾರ್ಖಾನೆಗಳು ಕುಂಟುತ್ತಾ ಸಾಗುತ್ತಿದ್ದವು. ಪುನಶ್ಚೇತನ ನೀಡುವ ಉದ್ದೇಶದೊಂದಿಗೆ ಬಿಎಸ್‌ವೈ ಕೋಟ್ಯಂತರ ರೂಪಾಯಿ ಹಣದೊಂದಿಗೆ ಹೊಸ ಅಧ್ಯಕ್ಷರನ್ನು ನೇಮಿಸಿದರು. ಇದಾಗಿ 12 ವರ್ಷ ಕಳೆದಿದ್ದು ಹಲವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಈಗಲೂ ಕಾರ್ಖಾನೆಗಳಿಗೆ ಪುನಶ್ಚೇತನ ನೀಡಲು ಸಾಧ್ಯವಾಗಿಲ್ಲ.

ಬಿ.ಎಸ್‌.ಯಡಿಯೂರಪ್ಪ, ನಾಗರಾಜಪ್ಪ ಅವರನ್ನು ಮೈಷುಗರ್‌, ಪಿಎಸ್‌ಎಸ್‌ಕೆ ಎರಡೂ ಕಾರ್ಖಾನೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಕೃಷಿಯಲ್ಲಿ ಬಿಎಸ್ಸಿ ಪದವಿ, ಮೈಷುಗರ್‌ ಕಾರ್ಖಾನೆಯಲ್ಲಿ ಕಬ್ಬು ಅಧೀಕ್ಷಕರಾಗಿದ್ದ ಅವರು ಕಾರ್ಖಾನೆಗೆ ಹೊಸ ರೂಪ ಕೊಡುತ್ತಾರೆ ಎಂಬ ಭರವಸೆ ರೈತರಲ್ಲಿ ಇತ್ತು. ರೈತಸಂಘ ಕೂಡ ನಾಗರಾಜಪ್ಪ ಆಯ್ಕೆಯ ಪರವಾಗಿಯೇ ಇತ್ತು. ನಾಗರಾಜಪ್ಪ ಅವರ ನಂತರ ಸಕ್ಕರೆ ಸಚಿವರೇ ಕಾರ್ಖಾನೆಯ ಅಧ್ಯಕ್ಷರಾದರು.

12 ವರ್ಷದಲ್ಲಿ ನಾಗರಾಜಪ್ಪ ಸೇರಿ ಮೂವರು ಸಕ್ಕರೆ ಸಚಿವರು ಮೈಷುಗರ್‌ ಅಧ್ಯಕ್ಷರಾಗಿದ್ದಾರೆ. ಆದರೆ ಅವರಾರೂ ಕಾರ್ಖಾನೆಗೆ ಜೀವ ತುಂಬಲೇ ಇಲ್ಲ ಎಂಬುದು ರೈತರನ್ನು ಕಾಡುತ್ತಿರುವ ನೋವಾಗಿದೆ. ಕೋಟಿ ಕೋಟಿ ಹಣದೊಂದಿಗೆ ಕಾರ್ಖಾನೆ ಆವರಣ ಪ್ರವೇಶಿಸಿದ ಅಧ್ಯಕ್ಷರು ಐತಿಹಾಸಿಕ ಸಕ್ಕರೆ ಕಂಪನಿಗೆ, ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಕೊಟ್ಟ ಕೊಡುಗೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಕಾರ್ಖಾನೆಗಳಿಗೆ ಪುನಶ್ಚೇತನ ನೀಡುವ ವಿಚಾರ ಮುನ್ನೆಲೆಗೆ ಬಂದಿರುವ ಈ ಹೊತ್ತಿನಲ್ಲಿ ಜಿಲ್ಲೆಯ ರೈತರು ಅಧ್ಯಕ್ಷರಾಗಿ ಕೆಲಸ ಮಾಡಿದವರ ಮುಂದೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ಷೇರುದಾರರಿಗೆ ಅಧಿಕಾರ ಕೊಡಲಿಲ್ಲ: ನಾಗರಾಜಪ್ಪ ಅವರು ಅಧ್ಯಕ್ಷರಾದ ನಂತರ ಸರ್ಕಾರದ ನಿರ್ದೇಶನದ ಮೇರೆಗೆ ಆಡಳಿತ ಮಂಡಳಿ ರಚನೆಯಾಯಿತು. ಮಂಡಳಿಗೆ ಷೇರುದಾರರನ್ನು ನೇಮಕ ಮಾಡಲಾಯಿತು. ಆದರೆ ಅಧ್ಯಕ್ಷರು ಮಂಡಳಿ ಸದಸ್ಯರನ್ನು ಕಾರ್ಖಾನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ. ಒಂದು ಸಭೆಯನ್ನೂ ನಡೆಸಲಿಲ್ಲ, ಅವರಿಗೆ ಅಧಿಕಾರವನ್ನು ನೀಡಲಿಲ್ಲ, ಕಾರ್ಖಾನೆ ಬೆಳೆವಣಿಗೆಗಳನ್ನು ಸದಸ್ಯರ ಗಮನಕ್ಕೆ ತರಲಿಲ್ಲ. ಕೇವಲ ಕಾಗದದಲ್ಲಿ ಮಾತ್ರ ಆಡಳಿತ ಮಂಡಳಿಯನ್ನು ಉಳಿಸಿಕೊಂಡದ್ದೇಕೆ ಎಂದು ರೈತರು ಪ್ರಶ್ನೆ ಮಾಡುತ್ತಾರೆ.

ಮೈಷುಗರ್‌ನಲ್ಲಿ ಹೊಸ ಮಿಲ್‌ ಅಳವಡಿಸಲು ₹ 58 ಕೋಟಿ ಹಣ ವೆಚ್ಚ ಮಾಡಲಾಯಿತು. ಮಿಲ್‌ ಅಳವಡಿಸಿದ ನಂತರ ಕೇವಲ 2 ಲಕ್ಷ ಟನ್‌ ಕಬ್ಬು ಅರೆಯಲಾಗಿದ್ದು ಯಂತ್ರಗಳು ಪದೇ ಪದೇ ರಿಪೇರಿಗೆ ಬಂದಿವೆ.  ಪ್ರತಿದಿನ 5 ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದ್ದ ಹೊಸ ಮಿಲ್‌ ಕಳಪೆ ಗುಣಮಟ್ಟದಿಂದ ಕೂಡಿದೆ, ಪದೇಪದೇ ರಿಪೇರಿಗೆ ಬಂದಿದೆ. ಕಳಪೆ ಮಿಲ್‌ಗೆ ₹ 58 ಕೋಟಿ ಹಣ ಖರ್ಚು ಮಾಡಿದ್ದೇಕೆ ಎಂಬ ಪ್ರಶ್ನೆ ಈಗಲೂ ಕಾರ್ಖಾನೆ ಆವರಣದಲ್ಲಿದೆ.

ದಶಕದ ಹಿಂದೆ ಮದ್ಯ ತಯಾರಿಕಾ ಘಟಕ ಪುನರಾರಂಭಿಸಿ ‘ಮೈ ಬ್ರಾಂಡಿ, ಮೈ ವಿಸ್ಕಿ’ ಬ್ರ್ಯಾಂಡ್‌ ಆರಂಭಿಸಲಾಯಿತು. ಬಾಟಲಿಗೆ ಮುಚ್ಚಳ ಹಾಕುವ ಯಂತ್ರಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಯಿತು. ಎರಡನೇ ದರ್ಜೆಯ ಯಂತ್ರ ಕೊಳ್ಳಲಾಯಿತು ಎಂಬ ಆರೋಪವಿದೆ. ಕೆಲವೇ ದಿನಗಳಲ್ಲಿ ಮದ್ಯ ತಯಾರಿಕಾ ಘಟಕ ನಷ್ಟ ಅನುಭವಿಸಿ ಸ್ಥಗಿತಗೊಂಡಿತು. ಇತಿಹಾಸದಲ್ಲಿ ಎಂದೂ ನಷ್ಟ ಅನುಭವಿಸದ ಮದ್ಯ ತಯಾರಿಕಾ ಘಟಕ ಆಗ ಸ್ಥಗಿತಗೊಂಡಿದ್ದೇಕೆ ಎಂಬ ಪ್ರಶ್ನೆ ರೈತರ ಮನದಾಳದಲ್ಲಿದೆ. ಇದೇ ಅವಧಿಯಲ್ಲಿ 1.5 ಲಕ್ಷ ಲೀಟರ್‌ ಸ್ಪಿರಿಟ್‌ ಸೋರಿಕೆಯಾಯಿತು. ಸೋರಿಕೆಗೆ ಕಾರಣ ಈವರೆಗೂ ಗೊತ್ತಾಗಿಲ್ಲ.

‘ಕಾರ್ಖಾನೆಯಲ್ಲಿ ಉತ್ಪಾದನೆಯಾದ ಸಕ್ಕರೆಯನ್ನು ಪಾರದರ್ಶಕವಾಗಿ ಮಾರಾಟ ಮಾಡುತ್ತಿರಲಿಲ್ಲ. ಯಾರಿಗೂ ತಿಳಿಯದ ರೀತಿಯಲ್ಲಿ ಭಾನುವಾರವೇ ಮಾರಾಟ ಮಾಡುತ್ತಿದ್ದರು. ಅದೂ ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು’ ಎಂದು ರೈತ ಶಿವಕುಮಾರ್‌ ಆರೋಪಿಸುತ್ತಾರೆ.

ಶ್ವೇತ ‍ಪ‍ತ್ರ ಹೊರಡಿಸಿ: ‘ದಶಕದ ಹಿಂದೆಯೂ ಮೈಷುಗರ್‌, ಪಿಎಸ್‌ಎಸ್‌ಕೆ ಸುಸ್ಥಿತಿಯಲ್ಲಿದ್ದವು. ಕುಂಟುತ್ತಾ ಸಾಗುತ್ತಿದ್ದ ಕಾರ್ಖಾನೆಗಳನ್ನು ಸರಿದಾರಿಗೆ ತರಬಹುದಾದ ಎಲ್ಲಾ ಅವಕಾಶಗಳು ಇದ್ದವು. ಆದರೆ ಅಧಿಕಾರ ವಹಿಸಿಕೊಂಡವರು ಕಾರ್ಖಾನೆಗಳನ್ನು ಹಳ್ಳಕ್ಕೆ ತಳ್ಳಿದರು. ಕಳೆದ 12 ವರ್ಷಗಳಿಂದ ಕಾರ್ಖಾನೆಗಳ ಆವರಣದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ವಕೀಲ ರಾಮಯ್ಯ ಒತ್ತಾಯಿಸಿದರು.

ಬಹಿರಂಗ ಚರ್ಚೆಗೆ ಬನ್ನಿ: ಒತ್ತಾಯ

‘ನಾಗರಾಜಪ್ಪ ಹಾಗೂ ಅವರ ನಂತರ ಬಂದ ಎರಡೂ ಕಾರ್ಖಾನೆಗಳ ಅಧ್ಯಕ್ಷರು ಬಹಿರಂಗ ಚರ್ಚೆಗೆ ಬರಬೇಕು. ಮೈಷುಗರ್‌ ಕಾರ್ಖಾನೆ ಆವರಣ ಅಥವಾ ವಿಶ್ವೇಶ್ವರಯ್ಯ ಪ್ರತಿಮೆಯ ಎದುರು ಬಹಿರಂಗ ತನಿಖೆಗೆ ರೈತಸಂಘವೇ ವ್ಯವಸ್ಥೆ ಮಾಡಲಿದೆ. ಕಾರ್ಖಾನೆಗಳು ಮತ್ತೆ ಆರಂಭವಾಗಬೇಕು ಎಂಬ ಕಾಳಜಿ ಇದ್ದರೆ ಬಹಿರಂಗ ಚರ್ಚೆಗೆ ಬಂದು ರೈತರು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು’ ಎಂದು ರೈತ ಸಂಘದ ಮುಖಂಡರೊಬ್ಬರು ಒತ್ತಾಯಿಸಿದರು.

ತನಿಖೆಗೆ ಸಿದ್ಧ: ನಾಗರಾಜಪ್ಪ

‘ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಎರಡೂ ಕಾರ್ಖಾನೆಗಳ ಆಡಳಿತ ಪಾರದರ್ಶಕವಾಗಿತ್ತು. ಸರ್ಕಾರ ಬಿಡುಗಡೆ ಮಾಡಿರುವ ಹಣ ಹಾಗೂ ನಾನು ಅಧ್ಯಕ್ಷನಾಗಿ ಖರ್ಚು ಮಾಡಿದ ಹಣದ ಬಾಬ್ತಿಗೆ ಈಗಲೂ ಲೆಕ್ಕವಿದೆ. ಅನುಮಾನವಿದ್ದವರು ರ್ಕಾಖಾನೆಯ ಲೆಕ್ಕ ಪರಿಶೋಧಕರನ್ನು ಸಂಪರ್ಕಿಸಬಹುದು. ನಾನು ಅಧಿಕಾರದಿಂದ ಇಳಿದಾಗಲೂ ಕಾರ್ಖಾನೆಗಳು ನಡೆಯುತ್ತಿದ್ದವು. ಈಗಿನ ಪರಿಸ್ಥಿತಿಗೆ ನನ್ನ ನಂತರ ಬಂದವರೇ ಕಾರಣ. ನನ್ನ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ತನಿಖೆ ನಡೆಸಲಿ, ತನಿಖೆಗೆ ಸಿದ್ಧನಿದ್ದು ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ’ ಎಂದು ನಾಗರಾಜಪ್ಪ ಪ್ರತಿಕ್ರಿಯೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು