ಶುಕ್ರವಾರ, ಮೇ 20, 2022
19 °C

ನೇರಲಕೆರೆ: ಇದು ತರಕಾರಿಗಳ ತವರು, ವರ್ಷಪೂರ್ತಿ ಬೆಳೆ

ಗಣಂಗೂರು ನಂಜೇಗೌಡ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ನೇರಲಕೆರೆ ಗ್ರಾಮ ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದ್ದು, ಇಲ್ಲಿ ಬೆಳೆಯುವ ತರಕಾರಿಗಳು ಮಂಡ್ಯ, ಮೈಸೂರು, ರಾಮನಗರ, ಚನ್ನಪಟ್ಟಣ ಮಾತ್ರವಲ್ಲದೆ ಬೆಂಗಳೂರು ಮಾರುಕಟ್ಟೆಗೂ ಹೋಗುತ್ತವೆ.

ಊರಿನ ಯಾವ ದಿಕ್ಕಿಗೆ ತಿರುಗಿದರೂ ಬಗೆ ಬಗೆಯ ತರಕಾರಿ ತೋಟಗಳೇ ಕಾಣುತ್ತವೆ. ಇಲ್ಲಿ 900 ಕುಟುಂಬಗಳಿದ್ದು, ಶೇ 95ರಷ್ಟು ಜನರು ತರಕಾರಿ ಬೆಳೆಯುತ್ತಾರೆ. ಪ್ರತಿ ದಿನ 10 ರಿಂದ 15 ವಾಹನಗಳು ತರಕಾರಿ ತುಂಬಿಕೊಂಡು ಮಾರುಕಟ್ಟೆಗೆ ಹೋಗುತ್ತವೆ. ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲೂ ತರಕಾರಿಯನ್ನು ಇಲ್ಲಿನ ರೈತರು ಮಾರುಕಟ್ಟೆಗೆ ಒಯ್ಯುತ್ತಾರೆ. ವರ್ಷದ 365 ದಿನವೂ ಇಲ್ಲಿ ತರಕಾರಿ ಸಿಗುತ್ತದೆ ಎಂಬುದು ವಿಶೇಷ.

ಲಕ್ಷ ಲಕ್ಷ ವಹಿವಾಟು: ನೇರಲಕೆರೆ ಗ್ರಾಮದಲ್ಲಿ ಟೊಮೆಟೊ, ಎಲೆ ಕೋಸು, ಹೂ ಕೋಸು, ಹೀರೆ, ಸೋರೆ, ಸೌತೆ, ಹಾಗಲ, ಪಡುವಲ, ಹಣ್ಣಿನ ಬೆಳೆಗಳಾದ ಕಲ್ಲಂಗಡಿ, ಪರಂಗಿ (ಪಪ್ಪಾಯಿ) ಬೆಳೆಯುತ್ತಾರೆ. ಕೊತ್ತಂಬರಿ ಸೊಪ್ಪು, ಸಬ್ಬಸಿಗೆ, ಮೆಂತ್ಯ, ಪಾಲಕ್‌, ಕೀರೆ, ಕಿಲಕೀರೆ ಇತರ ಸೊಪ್ಪುಗಳನ್ನು ಬೆಳೆಯಲಾಗುತ್ತದೆ. ಹಣ್ಣು, ತರಕಾರಿ, ಸೊಪ್ಪು ಹಾಗೂ ಹೂ ಮಾರಾಟದಿಂದ ಒಂದು ದಿನಕ್ಕೆ ಎರಡರಿಂದ ₹3 ಲಕ್ಷ ಹಣ ಈ ಊರಿಗೆ ಬರುತ್ತದೆ.

500 ಕೊಳವೆ ಬಾವಿಗಳು: ಅರಕೆರೆ ಹೋಬಳಿಯ ಈ ಗ್ರಾಮದ ರೈತರು ಮಳೆಯನ್ನೇ ಆಶ್ರಯಿಸಿದ್ದಾರೆ. ಕೊಳವೆ ಬಾವಿ ಕೊರೆಸಿಕೊಂಡು ತರಕಾರಿ ಬೆಳೆಯುತ್ತಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 500 ಕೊಳವೆ ಬಾವಿಗಳು ಈ ಊರಿನಲ್ಲಿವೆ. ಐಪಿ ಸೆಟ್‌ಗಳೂ ಅಷ್ಟೇ ಇವೆ. ವಿಫಲವಾಗಿರುವ ಕೊಳವೆ ಬಾವಿ ಸೇರಿದರೆ ಆ ಸಂಖ್ಯೆ ಸಾವಿರ ದಾಟುತ್ತದೆ. ಹನಿ ನೀರಾವರಿ ಮತ್ತು ಸ್ಪ್ರಿಂಕ್ಲರ್‌ ವ್ಯವಸ್ಥೆ ಮೂಲಕ ಮಿತ ನೀರಿನಲ್ಲಿ ಬೇಸಾಯ ಮಾಡುವುದನ್ನು ಈ ಊರಿನ ರೈತರು ರೂಢಿಸಿಕೊಂಡಿದ್ದಾರೆ.

ವಿದ್ಯುತ್‌ ಸಮಸ್ಯೆ: ‘ತರಕಾರಿ ಬೆಳೆಗೇನೋ ನಮ್ಮೂರು ಪ್ರಸಿದ್ಧಿ ಪಡೆದಿದೆ. ಆದರೆ ಸಕಾಲಕ್ಕೆ ವಿದ್ಯುತ್‌ ಇರುವುದಿಲ್ಲ. ಅಗತ್ಯ ಇರುವಷ್ಟು ವಿದ್ಯುತ್‌ ಸಿಕ್ಕರೆ ನಮ್ಮೂರಿನ ರೈತರು ಇನ್ನೂ ಹೆಚ್ಚು ತರಕಾರಿ ಬೆಳೆಯಬಲ್ಲರು’ ಎಂಬುದು ಗ್ರಾಮದ ಹೂ ಕೋಸು ಬೆಳೆಗಾರ ಮಲ್ಲೇಶ್‌ ಅವರ ಮಾತು.

‘ತರಕಾರಿ ಬೆಳೆಯಿಂದಲೇ ನಮ್ಮೂರಿನ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಅದರಲ್ಲೇ ಮದುವೆ, ಮನೆ, ಮಕ್ಕಳ ಶಿಕ್ಷಣ, ಆಸ್ಪತ್ರೆ ಖರ್ಚು ಎಲ್ಲಾ ನಿಭಾಯಿಸುತ್ತಾರೆ. ಆದರೆ ತರಕಾರಿ ಬೆಲೆ ಕುಸಿದಾಗ ಸಂಗ್ರಹಿಸಿ ಇಟ್ಟುಕೊಂಡು, ಉತ್ತಮ ಬೆಲೆ ಬಂದಾಗ ಮಾರಾಟ ಮಾಡಲು ಅನುಕೂಲ ಆಗುವಂತೆ ಕೋಲ್ಡ್‌ ಸ್ಟೋರೇಜ್‌ ಸ್ಥಾಪಿಸಬೇಕು’ ಎಂದು ಒತ್ತಾಯಿಸುತ್ತಾರೆ ತಾ.ಪಂ. ಸದಸ್ಯ ಎನ್‌.ಪಿ. ಸುರೇಶ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು