ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಪಾಂಡವಪುರ ಸಂಪರ್ಕ ರಸ್ತೆ ಬಂದ್‌- ಆಕ್ರೋಶ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಕಿಡಿ, ರಸ್ತೆ ತಡೆದು ಪ್ರತಿಭಟನೆ
Last Updated 24 ಜುಲೈ 2021, 13:42 IST
ಅಕ್ಷರ ಗಾತ್ರ

ಮಂಡ್ಯ: ಮೈಸೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ದಶಪಥ ಕಾಮಗಾರಿ ವೇಳೆ ಪಾಂಡವಪುರ ಸಂಪರ್ಕ ರಸ್ತೆ ಬಂದ್‌ ಮಾಡುತ್ತಿರುವುದನ್ನು ಖಂಡಿಸಿ ಶಾಸಕ ಸಿ.ಎಸ್‌.ಪುಟ್ಟರಾಜು ನೇತೃತ್ವದಲ್ಲಿ ಶನಿವಾರ ವಿವಿಧ ಹಳ್ಳಿಗಳ ಗ್ರಾಮಸ್ಥರು, ಜೆಡಿಎಸ್‌ ಸದಸ್ಯರು ಕೆಲಕಾಲ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ತೂಬಿನಕೆರೆ ಬಳಿಯ ಪಾಂಡವಪುರ ಕ್ರಾಸ್‌ ಬಳಿ ಜಮಾಯಿಸಿದ ಜನರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಕಾಮಗಾರಿ ನಡೆಸುತ್ತಿರುವ ದಿಲೀಪ್‌ ಬಿಲ್ಡ್‌ಕಾನ್‌ ಎಂಜಿನಿಯರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಾಂಡವಪುರದಿಂದ ಮಂಡ್ಯಕ್ಕೆ ತೆರಳಲು ತೂಬಿನಕೆರೆ ಬಳಿ ಸಂಪರ್ಕ ರಸ್ತೆ ಜಿಲ್ಲೆಯ ಪ್ರಮುಖ ರಸ್ತೆಯಾಗಿದೆ. ದಶಪಥ ನಿರ್ಮಾಣ ಕಾರ್ಯದಲ್ಲಿ ಈ ಮಾರ್ಗವನ್ನು ಬಂದ್ ಮಾಡುತ್ತಿರುವುದು ಸರಿಯಲ್ಲ. ನಿತ್ಯ ಸಾವಿರಾರು ಜನರು ಮಂಡ್ಯ, ಬೆಂಗಳೂರಿಗೆ ಇದೇ ಮಾರ್ಗದಲ್ಲಿ ತೆರಳುತ್ತಾರೆ. ಪಾಂಡವಪುರ ಮಾರ್ಗದಲ್ಲಿ ಹಲವಾರು ಆಲೆಮನೆಗಳು ಇದ್ದು ಇಲ್ಲಿನ ಬೆಲ್ಲವನ್ನು ಮಂಡ್ಯ ಮಾರುಕಟ್ಟೆಗೆ ಸರಬರಾಜು ಮಾಡುತ್ತಾರೆ. ರೈತರು ಕಿ.ಮೀ.ಗಟ್ಟಲೆ ಸುತ್ತಾಡಿಕೊಂಡು ಬೇರೆಡೆ ಸಂಚರಿಸಲು ಕಷ್ಟವಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ಪಾಂಡವಪುರ ಪಟ್ಟಣದ ಮಾರ್ಗವಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಈ ಮಾರ್ಗವಾಗಿ ಸಂಚರಿಸುವ ಕೆಲ ವಾಹನಗಳು ಮಂಡ್ಯ ಸೇರಿದಂತೆ ಇತರೆಡೆಗೆ ತೆರಳಲು ಈ ರಸ್ತೆ ಉಪಯೋಗವಾಗುತ್ತಿದೆ. ಅಲ್ಲದೆ ವಿಶ್ವವಿಖ್ಯಾತ ಕೆಆರ್‌ಎಸ್ ಜಲಾಶಯ, ಹಿನ್ನೀರಿನ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಪ್ರವಾಸಿಗರಿಗೂ ಈ ರಸ್ತೆ ಅನುಕೂಲವಾಗಿದೆ. ಇಂತಹ ರಸ್ತೆಯನ್ನು ಬಂದ್ ಮಾಡುವುದು ಎಷ್ಟು ಸರಿ ಅಧಿಕಾರಿಗಳನ್ನು ಪ್ರಶ್ನಿಸಿದರು.

ಪ್ರವಾಸಿ ತಾಣ ಮಾತ್ರವಲ್ಲದೇ ಮಂಡ್ಯದಿಂದ ಕೆ.ಆರ್‌.ಪೇಟೆ, ಚನ್ನರಾಯಪಟ್ಟಣ, ಹಾಸನ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ಇದೊಂದು ಪ್ರಮುಖ ರಸ್ತೆಯಾಗಿದ್ದರೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಆ ರಸ್ತೆಯನ್ನು ಬಂದ್‌ ಮಾಡಿ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತದೆ. ಸ್ಥಳೀಯರ ಅಗತ್ಯಗಳನ್ನು ಪೂರೈಸದೇ ರಸ್ತೆ ಕಾಮಗಾರಿ ನಡೆಸಕೂಡದು. ಸಂಪರ್ಕ ರಸ್ತೆ ಬಂದ್‌ ಮಾಡಿದರೆ ಹೆದ್ದಾರಿ ಕಾಮಗಾರಿ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಶ್ರೀಧರ್ ಮಾತನಾಡಿ ‘ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸುವ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಅನುಮತಿ ಕೋರಲಾಗುವುದು. ಅಲ್ಲಿಯವರೆಗೂ ಯಥಾಸ್ಥಿತಿ ಮುಂದುವರಿಸಲಾಗುವುದು’ ಎಂದು ಭರವಸೆ ನೀಡಿದರು. ಕೆಲಕಾಲ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು, ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮುಂಜಾಗೃತಾ ಕ್ರಮವಾಗಿ ನೂರಾರು ಸಂಖ್ಯೆಯ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಜೆಡಿಎಸ್ ಮುಖಂಡರಾದ ರಾಮಕೃಷ್ಣೇಗೌಡ, ಎಂ.ಗಿರೀಶ್, ಚಂದ್ರು, ಬಿ.ವೈ.ಬಾಬು, ಕ್ಯಾತನಹಳ್ಳಿ ಚೇತನ್, ಹಾರೋಹಳ್ಳಿ ಉಮೇಶ್, ಹಿರೋಡೆ ಚಂದ್ರು ಇದ್ದರು.

ಎಚ್‌ಡಿಡಿ ಮೂಲಕ ಗಡ್ಕರಿ ಭೇಟಿ: ಪುಟ್ಟರಾಜು

‘ದಶಪಥ ಕಾಮಗಾರಿ ಅವೈಜ್ಞಾನಿಕವಾಗಿ ನಡೆಸಲಾಗುತ್ತಿದೆ. ಪ್ರಮುಖ ತಾಲ್ಲೂಕು ಕೇಂದ್ರದ ಸಂಪರ್ಕ ರಸ್ತೆಯನ್ನೇ ಬಂದ್‌ ಮಾಡುತ್ತಿರುವುದು ಸರಿಯಲ್ಲ. ಈ ಬಗ್ಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಕೇಂದ್ರದ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಲಾಗಿದೆ. ಮುಂದಿನ ವಾರ ಗಡ್ಕರಿ ಅವರನ್ನು ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಿಕೊಟ್ಟು ಸಂಪರ್ಕ ರಸ್ತೆ ಬಂದ್ ಆಗದಂತೆ ಕ್ರಮವಹಿಸಲು ಮನವಿ ಮಾಡಲಾಗುವುದು’ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT