ಮಂಡ್ಯ: ‘ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಬೆರೆಸಿ ಸರಬರಾಜು ಮಾಡಿರುವ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಇದರಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು, ಗುತ್ತಿಗೆದಾರರು, ಮಧ್ಯವರ್ತಿಗಳನ್ನು ಕೂಡಲೇ ಬಂಧಿಸಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಆಗ್ರಹಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಜಿಲ್ಲೆಯ ಆರ್ಥಿಕತೆ ಪುನಶ್ಚೇತನಗೊಳಿಸಿ, ಸ್ವಾಭಿಮಾನವನ್ನು ಎತ್ತಿ ಹಿಡಿಯಲು ಹಮ್ಮಿಕೊಂಡಿರುವ ಮಂಡ್ಯ ಪುನಶ್ಚೇತನಾ ಯಾತ್ರೆ ಶುಕ್ರವಾರ ಮಂಡ್ಯ ನಗರದ ವಿವಿ ರಸ್ತೆಗೆ ಬಂದಾಗ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಶ್ರಮವಹಿಸಿ ಹಾಲು ಉತ್ಪಾದಿಸುವ ವರಿಗೆ ಅನ್ಯಾಯ ಮಾಡಿದ್ದಾರೆ. ಬೇಡಿಕೆ ಇಲ್ಲ ಎಂದು ಕಡಿಮೆ ದರ ಕೊಡುತ್ತಾರೆ. ಹಾಲನ್ನು ಬಳಸುವವರ ಶೋಷಣೆ ಮಾಡುತ್ತಿದ್ದಾರೆ. ಇದರಿಂದ ಕೋಟಿ ಕೋಟಿ ಲೂಟಿ ಮಾಡಿ ಸ್ವಾರ್ಥ ಜೀವನ ನಡೆಸುತ್ತಿದ್ದಾರೆ. ಇಷ್ಟಾದರೂ ಅವರನ್ನು ಬಂಧಿಸಿಲ್ಲ. ಕೂಡಲೇ ಅವರನ್ನು ಬಂಧಿಸಿ ಸೂಕ್ತ ನಡೆಸಬೇಕು. ಇದಕ್ಕಾಗಿ ಎಲ್ಲರೂ ಧ್ವನಿಗೂಡಿಸಬೇಕು’ ಎಂದರು.
‘ನಮ್ಮ ಸ್ವಾತಂತ್ರ್ಯ ಕಾಪಾಡ ಬೇಕಾದರೆ ನಾವು ಸದಾ ಜಾಗೃತರಾಗಿ ರಬೇಕು. ಭ್ರಷ್ಟರು ಮಾಡುವ ಕೆಲಸ ವನ್ನು ಖಂಡಿಸಿ ಧ್ವನಿ ಎತ್ತಬೇಕು. ಪ್ರಜಾ ಪ್ರಭುತ್ವ ಎಂದರೆ ಕೆಲವೇ ಜನರಿಗೆ ಗುತ್ತಿಗೆ ನೀಡುವುದಲ್ಲ. ಪ್ರಜೆಗಳು ಪ್ರಭುಗಳಾಗಿ ಸರಿಯಾದ ಜವಾಬ್ದಾರಿ ನಿರ್ವಹಿಸಬೇಕು. ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಲ್ಲಿ ಸಾಕಷ್ಟು ರಾಜಕೀಯ ವ್ಯಕ್ತಿಗಳಿ ದ್ದಾರೆ. ರೈತರು ಇದರ ವಿರುದ್ಧ ಮೊದಲು ಎಚ್ಚರಗೊಳ್ಳಬೇಕು’ ಎಂದು ತಿಳಿಸಿದರು.
‘ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಮಾಡಿ ಸಾವಿರಾರು ಕೋಟಿ ಲೂಟಿ ಮಾಡಿದ್ದರು. ಇಲ್ಲಿಯೂ ಅಕ್ರಮ ಗಣಿಗಾರಿಕೆಯಿಂದ ನೂರಾರು ಕೋಟಿ ಲೂಟಿ ಮಾಡುತ್ತಿದ್ದಾರೆ. ಅದರ ರಾಜಧನವನ್ನು ಪಾವತಿಸುತ್ತಿಲ್ಲ. ಜನಪ್ರತಿನಿಧಿಗಳು ಸಾರ್ವಜನಿಕರ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಅವರನ್ನು ಸಾರ್ವಜನಿಕ ಜೀವನದಿಂದ ಹೊರಗಟ್ಟಬೇಕು. ಪ್ರಜಾಪ್ರಭುತ್ವ ಸುರಕ್ಷಿ ತವಾಗಬೇಕು. ಮಂಡ್ಯ ಪುನಶ್ಚೇತನ ಮಾಡಬೇಕು. ಮುಂದಿನ ಪೀಳಿಗೆಯ ಬದುಕಿಗಾಗಿ ಧ್ವನಿ ಎತ್ತಬೇಕು. ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ಸಕ್ರಿಯರಾಗಬೇಕು’ ಎಂದು ಹೇಳಿದರು.
ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಲಿಂಗೇಗೌಡ ಮಾತನಾಡಿ, ‘ಕಾರ್ಪೊರೇಟ್ ವ್ಯವಸ್ಥೆ ಆಲೆಮನೆಗಳಲ್ಲಿ ತಯಾರಾಗುತ್ತಿರುವ ಬೆಲ್ಲದಲ್ಲಿ ರಾಸಾಯನಿಕ ಮಿಶ್ರಣ ಆಗುತ್ತಿದೆ ಎಂದು ಬಿಂಬಿಸಿ ಬೆಲ್ಲದ ವಹಿವಾಟು ನಿಲ್ಲಿಸುವ ಸಂಚು ರೂಪಿಸಿದೆ. ಬೆಲ್ಲದ ವಹಿವಾಟನ್ನು ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ವಹಿಸುವ ಹುನ್ನಾರ ನಡೆಯುತ್ತಿದೆ. ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಸರ್ಕಾರ ಒಪ್ಪಂದ ಮಾಡಿಕೊಡದಿದ್ದರೂ ನಿರಾಣಿ ಷುಗರ್ಸ್ ಕಬ್ಬು ಅರೆಯುತ್ತಿದ್ದಾರೆ. ಇದರ ವಿರುದ್ಧ ಎಲ್ಲರೂ ಧ್ವನಿ ಎತ್ತಿ ಸಂಘಟಿತರಾಗಬೇಕು’ ಎಂದರು.
ನಂತರ ನಗರದ ವಿವಿಧೆಡೆ, ಮಂಡ್ಯ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಪುನಶ್ಚೇತನಾ ಯಾತ್ರೆ ಸಂಚರಿಸಿತು.
ರಾಜ್ಯ ಘಟಕದ ಪ್ರಧಾನ ಕಾರ್ಯ ದರ್ಶಿ ದೀಪಕ್, ಜಂಟಿ ಕಾರ್ಯದರ್ಶಿ ಸೋಮಸುಂದರ್, ಜಿಲ್ಲಾ ಘಟಕದ ಉಪಾಧ್ಯಕ್ಷ ರಮೇಶ್‌ಗೌಡ, ಜೀವನ್, ಪ್ರಸನ್ನ, ಚಿಕ್ಕತಮ್ಮೇಗೌಡ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.