ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ

Last Updated 13 ಅಕ್ಟೋಬರ್ 2020, 13:31 IST
ಅಕ್ಷರ ಗಾತ್ರ

ಮಂಡ್ಯ: ಉತ್ತರ ಪ್ರದೇಶದ ಹಾಥರಸ್ ಮತ್ತು ನಮ್ಮ ರಾಜ್ಯದ ರಾಮನಗರ ಜಿಲ್ಲೆಯ ಬೆಟ್ಟಹಳ್ಳಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಹಾಥರಸ್ ಘಟನೆಯನ್ನು ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಸಮಗ್ರ ತನಿಖೆಗೆ ಒಳಪಡಿಸಬೇಕು. ಪೊಲೀಸರು ಸೇರಿದಂತೆ ಕರ್ತವ್ಯಲೋಪವೆಸಗಿದ ಎಲ್ಲಾ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಹಾಥರಸ್, ಉನ್ನಾವ್, ಬಲರಾಂಪುರ್ ಮತ್ತು ಕರ್ನಾಟಕದ ಬೆಟ್ಟಳ್ಳಿ ಸೇರಿದಂತೆ ಎಲ್ಲಾ ಸಂತ್ರಸ್ತರಿಗೆ ತೋರವಾಗಿ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇತ್ತೀಚಿನ ದಿನಗಳಲ್ಲಿ ದೇಶದಾದ್ಯಂತ ಮಹಿಳೆಯರು ದಲಿತರು ಮತ್ತು ದುರ್ಬಲ ವರ್ಗದವರ ಮೇಲೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಗಳು, ದೌರ್ಜನ್ಯಗಳು ಹೆಚ್ಚಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೇಲ್ಜಾತಿ ಮತ್ತು ಮೇಲ್ವರ್ಗಗಳ ಪರವಾದ ಸರ್ಕಾರವಾಗಿ ಮಾರ್ಪಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೊರೇಟ್ ಕಂಪನಿಗಳ ದಲ್ಲಾಳಿ ಆಗಿರುವ ಸರ್ಕಾರ ಭೂಸುಧಾರಣಾ ಕಾನೂನುಗಳನ್ನು ತಿದ್ದುಪಡಿ ಮಾಡಿ ಶ್ರೀಮಂತರಿಗೆ ಕಂಪನಿಗಳಿಗೆ ಅನುಕೂಲ ಮಾಡಿಕೊಡುತಿದೆ. ಇದರಿಂದ ಸಮಾಜದ ಪಟ್ಟಭದ್ರ ಶಕ್ತಿಗಳು ಸರ್ಕಾರದ ನಮ್ಮ ಪರವಾಗಿದೆ ಎಂದು ಭಾವಿಸಿ ಮಹಿಳೆಯರು ಮತ್ತು ದಲಿತರು ಸೇರಿದಂತೆ ಸಮಾಜದ ದುರ್ಬಲ ವರ್ಗದವರ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಸರ್ಕಾರಗಳು ದಲಿತರ ಮೇಲಿನ ದೌರ್ಜನ್ಯ ತಡೆ ಕಾನೂನುಗಳನ್ನು ಸರಿಯಾಗಿ ಜಾರಿ ಮಾಡಿರಲಿಲ್ಲ. ಈಗಿನ ಸರ್ಕಾರ ಸಂವಿಧಾನವನ್ನು ಬುಡಮೇಲು ಮಾಡುವ ಉದ್ದೇಶ ಹೊಂದಿದ್ದು ಕಾನೂನುಗಳನ್ನು ದುರ್ಬಲಗೊಳಿಸಿ ಹಲ್ಲಿಲ್ಲದ ಹಾವಿನಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ರಾಮನಗರ ಜಿಲ್ಲೆಯ ಬೆಟ್ಟಹಳ್ಳಿ ಬೆಟ್ಟ ಹಳ್ಳಿಯಲ್ಲಿ ಹಾಥರಸ್ ಮಾದರಿಯಲ್ಲೇ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಿದೆ. ರಾಜ್ಯದ ಬಿಜೆಪಿ ಸರ್ಕಾರ ಕೂಡ ಕೇಂದ್ರದ ಮಾದರಿಯನ್ನೇ ಅನುಸರಿಸುತ್ತಿರುವುದರಿಂದ ಇಲ್ಲಿಯೂ ಅಪರಾಧಿಗಳಿಗೆ ಕಾನೂನಿನ ಶಿಕ್ಷೆಯ ಭಯ ಇಲ್ಲವಾಗಿದೆ. ದೌರ್ಜನ್ಯ ಅತ್ಯಾಚಾರ ವಿರೋಧಿ ಮತ್ತು ಮೀಸಲಾತಿ ಕಾನೂನುಗಳನ್ನು ಸರಿಯಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪುಟ್ಟಮಾದು, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಕಾರ್ಯದರ್ಶಿ ಪುಟ್ಟಮ್ಮ, ಮುಖಂಡರಾದ ಆರ್‌.ಕೃಷ್ಣ, ಬಿ.ಎಂ. ಶಿವ ಮಲ್ಲಯ್ಯ, ನಾಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT