ಮಂಗಳವಾರ, ಏಪ್ರಿಲ್ 7, 2020
19 °C
ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿರುವ ಮಹಿಳೆ, ಯುವಜನರಿಗೆ ಸ್ಫೂರ್ತಿ

ದಿನಕ್ಕೆ ನೂರೈವತ್ತು ಎಳನೀರು ಕೊಚ್ಚುವ ಗೌರಿ!

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಪಿಯುಸಿ ಓದಿ ಗಾರ್ಮೆಂಟ್‌ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಗೌರಿ ಈಗ ಸ್ವಂತ ಉದ್ಯೋಗದಿಂದ ಬೆಳಕು ಕಂಡಿದ್ದಾರೆ. ನಗರದ ಆಸ್ಪತ್ರೆ ರಸ್ತೆಯಲ್ಲಿ ದಿನಕ್ಕೆ 150 ಎಳನೀರು ಕೊಚ್ಚಿ, ಮಾರಾಟ ಮಾಡುವ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ.

ಹನಿಯಂಬಾಡಿ ಗ್ರಾಮದ ಗೌರಿ ಎರಡು ಹೆಣ್ಣುಮಕ್ಕಳ ತಾಯಿ. ಮೂರು ವರ್ಷಕ್ಕೂ ಮೊದಲು ಅವರು ಬೆಳಿಗ್ಗೆ ಗಾರ್ಮೆಂಟ್‌ ಕಾರ್ಖಾನೆಗೆ ತೆರಳಿದರೆ ರಾತ್ರಿ ಮನೆಗೆ ಮರಳುತ್ತಿದ್ದರು. ಹೀಗಾಗಿ ಮಕ್ಕಳ ಶಿಕ್ಷಣ, ಆರೋಗ್ಯದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿರಲಿಲ್ಲ. ತಮ್ಮಿಬ್ಬರೂ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ನಿರ್ಧಾರ ಮಾಡಿಕೊಂಡಿದ್ದ ಅವರು ಸ್ವಂತ ಉದ್ಯೋಗ ಮಾಡುವ ಯೋಚನೆಯಲ್ಲಿದ್ದರು.

ಶೈಕ್ಷಣಿಕ ಹಂತದಲ್ಲಿ ಗೌರಿ ಕ್ರೀಡಾಪಟುವಾಗಿದ್ದರು, ಕಬಡ್ಡಿ, ಓಟದಲ್ಲಿ ಸಾಧನೆ ಮಾಡಿದ್ದರು. ಆಲಹಳ್ಳಿ ಅವರ ತವರು ಮನೆ. ಹನಿಯಂಬಾಡಿಯ ಶ್ರೀನಿವಾಸ್‌ ಅವರ ಕೈಹಿಡಿದ ಅವರು ಸ್ವಂತ ಉದ್ಯೋಗ ಮಾಡಲು ಪತಿಗೂ ಸ್ಫೂರ್ತಿಯಾದರು. ಗಾರೆ ಕೆಲಸ ಮಾಡುತ್ತಿದ್ದ ಶ್ರೀನಿವಾಸ್‌ ಅವರಲ್ಲೂ ಕನಸುಗಳನ್ನು ಬಿತ್ತಿದರು. ಅದರ ಪರಿಣಾಮವಾಗಿ ಶ್ರೀನಿವಾಸ್‌– ಗೌರಿ ದಂಪತಿ ಆಸ್ಪತ್ರೆ ರಸ್ತೆಯಲ್ಲಿ ಎಳನೀರು ಮಾರಾಟ ಮಾಡುವ ಸಣ್ಣ ಉದ್ಯೋಗ ಆರಂಭಿಸಿದರು.

ಪತಿ ರೈತರಿಂದ ಎಳನೀರು ಖರಿದಿಸಿ ತಂದುಕೊಟ್ಟರೆ ರಸ್ತೆಯಲ್ಲಿ ಗೌರಿ ಕೊಚ್ಚಿ, ಮಾರಾಟ ಮಾಡುತ್ತಾರೆ. ಯಾವುದೇ ಅಂಜಿಕೆ, ಅಳುಕು ಅವರಲ್ಲಿ ಇಲ್ಲ. ಎಲ್ಲರ ಜೊತೆಗೂ ನಗುನಗುತ್ತಾ ಮಾತನಾಡುವ ಅವರು ಮಚ್ಚು ಹಿಡಿದು ನಿಂತರೆ ಹದವಾಗಿ ಎಳನೀರು ಕೊಚ್ಚಿ ಕೊಡುತ್ತಾರೆ. ಪುರಷರು ಮಾಡುವ ಕೆಲಸವನ್ನು ಗೌರಿಯವರು ಮಾಡುತ್ತಿರುವುದಕ್ಕೆ ಕೆಲವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅವರೊಳಗಿರುವ ಅಂತಃಶಕ್ತಿಯನ್ನು ಕಂಡು ಬರಗಾಗುತ್ತಾರೆ.

ಮಿಮ್ಸ್‌ ಆಸ್ಪತ್ರೆ ರಸ್ತೆಯಲ್ಲಿ ಬಹುತೇಕ ಗ್ರಾಹಕರು ರೋಗಿಗಳು, ರೋಗಿಗಳ ಸಂಬಂಧಿಕರೇ ಆಗಿರುತ್ತಾರೆ. ತಾಯಿ ಹೃದಯದ ಗೌರಿ ಬಡ ರೋಗಿಗಳಿಗೆ ಎಳನೀರು ಬೆಲೆಯಲ್ಲಿ ರಿಯಾಯಿತಿ ನೀಡುತ್ತಾರೆ. ಸ್ವಂತ ಉದ್ಯೋಗದಿಂದ ಉತ್ತಮ ಜೀವನ ಕಟ್ಟಿಕೊಂಡಿರುವ ಗೌರಿ ಅವರು ತಮ್ಮ ಹಿರಿಯ ಮಗಳನ್ನು ಸೇಂಟ್‌ ಜೋಸೆಫ್‌ ಶಾಲೆಯಲ್ಲಿ ಓದಿಸುತ್ತಿದ್ದಾರೆ.

‘ಸ್ವಾಭಿಮಾನದ ಜೀವನದಿಂದ ನನಗೆ ಹೆಮ್ಮೆ ಇದೆ. ಎಳನೀರು ಕೊಚ್ಚುತ್ತಿದ್ದರೆ ಎಷ್ಟೋ ಜನರು ಆಶ್ಚರ್ಯದಿಂದ ನೋಡುತ್ತಾರೆ. ಮಹಿಳೆಗೆ ಆಗದಿರುವ ಯಾವ ಕೆಲಸವೂ ಇಲ್ಲ’ ಎಂದು ಗೌರಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು