ಶುಕ್ರವಾರ, ಅಕ್ಟೋಬರ್ 23, 2020
21 °C

ಮಂಡ್ಯ ಜಿ.ಪಂ ಸಾಮಾನ್ಯ ಸಭೆ 6ನೇ ಬಾರಿ ಮೂಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರಾಜಕೀಯ ಕಾರಣಗಳಿಂದಾಗಿ ಕಳೆದ ಒಂದೂವರೆ ವರ್ಷದಿಂದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದ ಜಿಲ್ಲೆಯಾದ್ಯಂತ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿದ್ದು ಸರ್ಕಾರದ ಅನುದಾನಗಳು ವಾಪಸ್‌ ಹೋಗುವ ಅಪಾಯ ಎದುರಾಗಿದೆ.

ಕೋರಂ ಕೊರತೆಯ ಕಾರಣದಿಂದಾಗಿ ಮಂಗಳವಾರ 6ನೇ ಬಾರಿಗೆ ಸಾಮಾನ್ಯ ಸಭೆ ಮುಂದೂಡಲಾಯಿತು. ಸದಸ್ಯರು ಜಿ.ಪಂ ಕಚೇರಿಗೆ ಬಂದರೂ ಸಾಮಾನ್ಯ ಸಭೆಗೆ ಬರಲಿಲ್ಲ. ಅಧ್ಯಕ್ಷೆ ನಾಗರತ್ನಾ ಸ್ವಾಮಿ ಹಾಗೂ ಜೆಡಿಎಸ್‌ ಸದಸ್ಯರ ನಡುವಿನ ಅಧಿಕಾರದ ಕಿತ್ತಾಟದಿಂದಾಗಿ 2020–21ನೇ ಸಾಲಿನ ಬಜೆಟ್‌ ಮಂಡನೆಯೂ ಸಾಧ್ಯವಾಗಿಲ್ಲ.

ಜೆಡಿಎಸ್‌ನಿಂದ ಗೆಲುವು ಕಂಡಿದ್ದ ನಾಗರತ್ನಾ ಒಪ್ಪಂದದಂತೆ ಕಳೆದ ವರ್ಷವೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಅವರ ಪತಿ ಸ್ವಾಮಿ ಬಿಜೆಪಿಗೆ ಸೇರ್ಪಡೆಯಾಗಿದ್ದು ನಾಗರತ್ನಾ ಅವರ ಜೆಡಿಎಸ್‌ ಜೊತೆಗಿನ ಸಂಬಂಧ ಹಳಸಿದೆ. ಜೆಡಿಎಸ್‌ ಮುಖಂಡರ ರಾಜೀನಾಮೆ ಒತ್ತಡ ತಳ್ಳಿಹಾಕುತ್ತಿರುವ ಅವರು ಅಧ್ಯಕ್ಷೆ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ಹೀಗಾಗಿ ಜೆಡಿಎಸ್‌ ಸದಸ್ಯರು ಒಂದೂವರೆ ವರ್ಷದಿಂದ ಸಾಮಾನ್ಯ ಸಭೆಗೆ ಹಾಜರಾಗದೆ ಅಧ್ಯಕ್ಷೆಗೆ ಅಸಹಾಕಾರ ತೋರುತ್ತಿದ್ದಾರೆ.

ಅನುದಾನ ಬಳಸಿಕೊಳ್ಳಲು ಜಿ.ಪಂ ವಿಫಲವಾಗಿರುವ ಕಾರಣ 15ನೇ ಹಣಕಾಸು ಯೋಜನೆ, ಕುಡಿಯುವ ನೀರಿನ ಕಾಮಗಾರಿ, ಮೂಲ ಸೌಲಭ್ಯಗಳ ಕೋಟ್ಯಂತರ ರೂಪಾಯಿ ವಾಪಸ್‌ ಹೋಗುವ ಸ್ಥಿತಿ ಎದುರಾಗಿದೆ.

‘6 ಬಾರಿ ಸಾಮಾನ್ಯ ಸಭೆ ಮುಂದೂಡಿಕೆಯಾಗಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಸರ್ಕಾರ ಮಧ್ಯ ಪ್ರವೇಶ ಮಾಡಿ ಅನುದಾನ ಬಳಕೆಗೆ ಅವಕಾಶ ಮಾಡಿಕೊಡುವಂತೆ ಕೋರಲಾಗುವುದು’ ಎಂದು ಜಿ.ಪಂ ಸಿಇಒ ಜುಲ್ಫಿಕರ್‌ ಉಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು