ಭಾನುವಾರ, ಜುಲೈ 25, 2021
22 °C

‘ಹೊಸ ರೋಗಿಗಳಿಗೆ ಧೈರ್ಯ, ಆತ್ಮವಿಶ್ವಾಸ ತುಂಬುತ್ತಿದ್ದೆ’

ಬಿ.ಎಂ.ಮಧು, ಕೆಪಿಟಿಸಿಎಲ್ ನೌಕರ Updated:

ಅಕ್ಷರ ಗಾತ್ರ : | |

ಕೊರನಾ ವೈರಸ್‌ ಸೋಂಕು–ಪ್ರಾತಿನಿಧಿಕ ಚಿತ್ರ

ಮೈಸೂರು: ‘ನನಗೆ ಕೊರೊನಾ ಸೋಂಕಿನ ಯಾವೊಂದು ಲಕ್ಷಣವಿರಲಿಲ್ಲ. ಆದರೂ ಗಂಟಲು ದ್ರವದ ಮಾದರಿಯ ಪರೀಕ್ಷೆಗೆ ಹೋಗಿದ್ದೆ. 24 ತಾಸಿನೊಳಗೆ ನಿಮಗೆ ಯಾವುದೇ ಮಾಹಿತಿ ನೀಡದಿದ್ದರೆ ನೆಗೆಟಿವ್ ಅಂದುಕೊಳ್ಳಿ ಅಂತ ಹೇಳಿದ್ದರು. ನಾಲ್ಕು ದಿನವಾದರೂ ನನ್ನ ವರದಿ ಬಂದಿರಲಿಲ್ಲ. ಕೋವಿಡ್‌ ಟೆನ್ಷನ್‌ ನನ್ನಲ್ಲಿ ಇರಲೂ ಇಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಫೋನ್ ಮಾಡಿ ನಿಮಗೆ ಕೋವಿಡ್–19 ದೃಢಪಟ್ಟಿದೆ ಎಂದರು.’

‘ನಾನೆಲ್ಲೂ ಹೊರಗೆ ಓಡಾಡಿರಲಿಲ್ಲ. ಶಂಕಿತ–ಸೋಂಕಿತರ ಸಂಪರ್ಕವೂ ನನಗಿರಲಿಲ್ಲ. ಕೊರೊನಾದ ಯಾವೊಂದು ಲಕ್ಷಣವೂ ನನ್ನಲ್ಲಿರಲಿಲ್ಲ. ಆದರೂ ಪಾಸಿಟಿವ್ ಬಂದಿತ್ತು. ಇದರಿಂದ ನಾನು ಗಾಬರಿಯಾಗಲಿಲ್ಲ.

ಮಾಧ್ಯಮಗಳಲ್ಲಿ ನೆಗೆಟಿವ್ ಸುದ್ದಿಗಳೇ ಹೆಚ್ಚಿದ್ದವು. ವೈದ್ಯರ ತಂಡ ಆಸ್ಪತ್ರೆಗೆ ಕರೆದೊಯ್ದ ಮೇಲೆ ವಾಸ್ತವ ನನಗೆ ಅರಿವಾಯ್ತು. ಬಹುತೇಕರು ಆರಾಮವಾಗಿದ್ದರು. ಯಾವೊಂದು ಒತ್ತಡ ಅವರ ಮುಖದಲ್ಲಿ ಗೋಚರಿಸಲಿಲ್ಲ. ಇದು ನನ್ನ ಧೈರ್ಯ ಹೆಚ್ಚಿಸಿತು.

2–3 ದಿನಗಳಲ್ಲೇ ಕೋವಿಡ್‌ ಆಸ್ಪತ್ರೆಯ ಪರಿಸರಕ್ಕೆ ಒಗ್ಗಿಕೊಂಡೆ. ಅಲ್ಲಿದ್ದಷ್ಟು ದಿನ ನಾನೊಬ್ಬ ರೋಗಿ ಎಂದು ಅನಿಸಲೇ ಇಲ್ಲ. ಹೊಸ ರೋಗಿ ಬಂದರೆ, ಅವರು ಭೀತಿಗೊಳಗಾಗಿದ್ದರೆ ನಾನೇ ಅವರನ್ನು ವೈದ್ಯರ ಬಳಿ ಕರೆದೊಯ್ಯುತ್ತಿದ್ದೆ. ಅವರ ಮನದಲ್ಲಿನ ಭಯವನ್ನು ದೂರ ಮಾಡಲು ಆತ್ಮವಿಶ್ವಾಸ ತುಂಬುತ್ತಿದ್ದೆ. ನಾವು ಎಷ್ಟು ಆರಾಮವಾಗಿ ಇದ್ದೇವೆ ಎಂಬುದನ್ನು ಬಿಡಿಸಿ ಹೇಳಿ, ಅವರ ರೂಮಿಗೆ ಕರೆದೊಯ್ದು ಬಿಡುವುದು ನನ್ನ ಕೆಲಸವಾಗಿತ್ತು. ಗುಣಮುಖನಾಗಿ ಮನೆಗೆ ಮರಳುವ ತನಕ ನಿತ್ಯವೂ ಇದೇ ಕೆಲಸ ಮಾಡಿಕೊಂಡಿದ್ದೆ.

ವೈದ್ಯರು ನೀಡಿದ ಸೂಚನೆಯಂತೆ, ಕೋವಿಡ್–19 ನಿಯಮಾವಳಿಯಂತೆ 14 ದಿನ ಹೋಂ ಕ್ವಾರಂಟೈನ್‌ನಲ್ಲಿರುವೆ. ಸೋಮವಾರ (ಇಂದು) ಈ ಅವಧಿಯೂ ಮುಕ್ತಾಯಗೊಳ್ಳಲಿದೆ. ಕೋವಿಡ್ ಎದುರಿಸಲು ಆತ್ಮವಿಶ್ವಾಸವೇ ಮುಖ್ಯ. ಭಯ–ಆತಂಕ ಪಡಬೇಕಿಲ್ಲ. ಏನೂ ಆಗಲ್ಲ. ಇದು ಸಹ ಕೆಮ್ಮು, ನೆಗಡಿ, ಜ್ವರವಷ್ಟೇ.

ಮತ್ತೊಬ್ಬರಿಗೆ ಹರಡಬಾರದು ಎಂಬ ಮುನ್ನೆಚ್ಚರಿಕೆ ವಹಿಸಿದರೆ ಸಾಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಬಿಸಿ ನೀರಿನ ಬಳಕೆ ಹೆಚ್ಚಿರಲಿ. ಶೀತ, ಗಂಟಲು ಕಟ್ಟಿದಾಗ ಮನೆ ಮದ್ದು ಮಾಡಿಕೊಳ್ಳುವಂತೆ, ಈ ರೋಗಕ್ಕೂ ಹಾಲಿಗೆ ಅರಿಸಿನ, ಶುಂಠಿ ಹಾಕಿಕೊಂಡು ಕುದಿಸಿ ಕಷಾಯ ಮಾಡಿಕೊಂಡು ಬೆಳಿಗ್ಗೆ–ಸಂಜೆ ಕುಡಿಯುವುದು ಒಳ್ಳೆಯದು. ಹೋಂ ಕ್ವಾರಂಟೈನ್‌ನಲ್ಲಿ ನಾನು ಮಾಡಿದ್ದು ಇದನ್ನೇ.

-ಬಿ.ಎಂ.ಮಧು, ಕೆಪಿಟಿಸಿಎಲ್ ನೌಕರ

ನಿರೂಪಣೆ: ಡಿ.ಬಿ.ನಾಗರಾಜ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು