ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕಾ ಅಭಿಯಾನ ಬಿರುಸುಗೊಳಿಸಲು ಮೌಲ್ವಿಗಳ ಮೊರೆ!

ಕೋವಿಡ್‌ ಲಸಿಕೆ; ಪಾಲಿಕೆಯಿಂದ ಉರ್ದು ಭಾಷೆಯಲ್ಲಿ 2 ಲಕ್ಷ ಕರಪತ್ರ
Last Updated 8 ಏಪ್ರಿಲ್ 2021, 2:45 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌– 19 ಲಸಿಕಾ ಅಭಿಯಾನ ಬಿರುಸುಗೊಳಿಸಲು ಹಾಗೂ ಲಸಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಆಡಳಿತ ಜಂಟಿಯಾಗಿ ಮುಂದಾಗಿವೆ.

ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಸಿಕೆಗೆ ಅರ್ಹರಾದವರ ಸಂಖ್ಯೆಯೇ 70 ಸಾವಿರದಿಂದ 80 ಸಾವಿರದ ಆಸುಪಾಸಿನಲ್ಲಿದೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಎಲ್ಲೆಡೆಗಿಂತ ಕಡಿಮೆಯಿದೆ. ಇಲ್ಲಿ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲಿಕ್ಕಾಗಿ ಪಾಲಿಕೆ, ಆರೋಗ್ಯ ಇಲಾಖೆ ಬುಧವಾರ ನಗರದ ಜೆ.ಪಿ. ಫಾರ್ಚೂನ್‌ ಪ್ಯಾಲೇಸ್‌ನಲ್ಲಿ ಮುಸ್ಲಿಂ ಧರ್ಮೀಯರ ಎಲ್ಲ ಪಂಗಡದ 35ಕ್ಕೂ ಹೆಚ್ಚು ಮೌಲ್ವಿಗಳ ಸಭೆ ನಡೆಸಿದೆ.

ಉಪ ಮೇಯರ್‌ ಅನ್ವರ್‌ ಬೇಗ್‌, ಡಿಎಚ್‌ಒ ಡಾ.ಅಮರನಾಥ್, ಮೈಸೂರು ನಗರದ ಕೋವಿಡ್‌ ಲಸಿಕಾಧಿಕಾರಿ ಡಾ.ಪಿ.ರವಿ, ಎನ್‌.ಆರ್‌. ಕ್ಷೇತ್ರದ ಕೋವಿಡ್‌ ಲಸಿಕಾಧಿಕಾರಿ ಡಾ.ಮೊಹಮದ್‌ ಶಿರಾಜ್ ಅಹಮದ್‌, ಕೆ.ಆರ್‌.ಆಸ್ಪತ್ರೆಯ ಆರ್‌ಎಂಒ ನಯಾಜ್‌ಪಾಷ, ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಡಾ.ನಾಗರಾಜ್‌ ತಂಡ ಮೌಲ್ವಿಗಳ ಜೊತೆ ಚರ್ಚಿಸಿದ್ದು, ಲಸಿಕೆಗೆ ಸಂಬಂಧಿಸಿದಂತೆ ಅವರಲ್ಲಿದ್ದ ಅನುಮಾನ ಪರಿಹರಿಸುವಲ್ಲಿ ಯಶಸ್ವಿಯಾಗಿದೆ.

‘ಲಸಿಕೆ ತಯಾರಿಕೆಯಲ್ಲಿ ಹಂದಿಯ ಕೊಬ್ಬನ್ನು ಮಿಶ್ರಣ ಮಾಡಲಾಗಿದೆ. ಲಸಿಕೆ ಪಡೆದವರು ಮೃತಪಟ್ಟಿದ್ದಾರೆ ಎಂಬುದು ಸೇರಿದಂತೆ ಹಲವು ಅನುಮಾನಗಳನ್ನು ಮೌಲ್ವಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಮೌಲ್ವಿಗಳು ವ್ಯಕ್ತಪಡಿಸಿದ ಪ್ರತಿಯೊಂದು ಅನುಮಾನವನ್ನು ಪರಿಹರಿಸಲಾಯಿತು. ಸಣ್ಣ ಅಡ್ಡಪರಿಣಾಮ ಉಂಟಾಗಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟೆವು’ ಎಂದು ಸಭೆಯಲ್ಲಿ ಭಾಗವಹಿಸಿದ್ದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೀದಿ ಬೀದಿಗೆ ಹೋಗೋಣ: ‘ಲಸಿಕೆ ಯಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗಲ್ಲ. ಲಸಿಕೆ ಪಡೆಯುವುದ ರಿಂದ ಆಗುವ ಪ್ರಯೋಜನಗಳ ಕುರಿತಂತೆ ಉರ್ದು ಭಾಷೆಯಲ್ಲಿ 2 ಲಕ್ಷ ಕರಪತ್ರ ಮುದ್ರಿಸಿಕೊಡಿ. ಪ್ರತಿ ಬೀದಿ, ಬೀದಿಗೂ ಹೋಗಿ ಸ್ಥಳೀಯರ ಮನವೊಲಿಸೋಣ. ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ ಸಂದರ್ಭವೂ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಮೌಲ್ವಿಗಳು ತಿಳಿಸಿದ್ದಾರೆ’ ಎಂದು ಎನ್‌.ಆರ್‌. ಕ್ಷೇತ್ರದ ಕೋವಿಡ್‌ ಲಸಿಕಾಧಿಕಾರಿ ಡಾ.ಮೊಹಮದ್‌ ಶಿರಾಜ್ ಅಹಮದ್‌ ಹೇಳಿದರು.

ಕರಪತ್ರ ಮುದ್ರಿಸಿಕೊಡಲು ಪಾಲಿಕೆ ಸಮ್ಮತಿಸಿದೆ ಎನ್ನಲಾಗಿದೆ.

ಶುಕ್ರವಾರದಿಂದ ಅಭಿಯಾನ

ಮೌಲ್ವಿಗಳಿಗೆ ಜಿಲ್ಲೆಯಾದ್ಯಂತ ಸಂಪರ್ಕವಿದೆ. ಎಲ್ಲೆಡೆ ಜಾಗೃತಿ ಮೂಡಿಸಲು ಸಹಕರಿಸಿ ಎಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ್ದಾರೆ. ಶುಕ್ರವಾರದಿಂದಲೇ ಅಭಿಯಾನ ಬಿರುಸು ಪಡೆಯಲಿದೆ ಎಂದು ಎನ್‌.ಆರ್‌. ಕ್ಷೇತ್ರದ ಕೋವಿಡ್‌ ಲಸಿಕಾಧಿಕಾರಿ ಡಾ.ಮೊಹಮದ್‌ ಶಿರಾಜ್ ಅಹಮದ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT