ಮಂಗಳವಾರ, ಸೆಪ್ಟೆಂಬರ್ 21, 2021
29 °C
ಕಳೆದ ವರ್ಷದ ಮಳೆ ಹಾನಿಗೆ ಈ ವರ್ಷ ದುರಸ್ತಿ!

ಬಾಗಿಲು ತೆರೆದವು ಶಿಥಿಲ ಶಾಲೆಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯಲ್ಲಿ ಶಾಲೆಗಳು ಬಾಗಿಲು ತೆರೆಯುತ್ತಿದ್ದಂತೆ ಸಡಗರದಿಂದ ಓಡಿ ಬಂದ ಮಕ್ಕಳನ್ನು ಮತ್ತದೇ ಮಾಸಿದ ಫಲಕಗಳು, ಮುರಿದ ಗೇಟುಗಳು, ಬಿರುಕುಬಿಟ್ಟ ಗೋಡೆಗಳು ಸ್ವಾಗತಿಸಿವೆ. ಕೋವಿಡ್‌ ಭಯದಿಂದ ಮಾನಸಿಕವಾಗಿ ಜರ್ಝರಿತವಾದ ಮಕ್ಕಳಿಗೆ ಮತ್ತೆ ಶಿಥಿಲ ಶಾಲೆಗಳಲ್ಲಿ ಕಲಿಯುವ ಒತ್ತಡ ಎದುರಾಗಿದೆ.

ಜಿಲ್ಲೆಯಲ್ಲಿ ಹಿಂದಿನ ವರ್ಷ ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಗೆ 97 ಶಾಲಾ ಕೊಠಡಿಗಳು ಹಾನಿ
ಗೀಡಾಗಿದ್ದವು. ಇದುವರೆಗೂ ಅವುಗಳ ದುರಸ್ತಿಯಾಗಿಲ್ಲ. ಶಾಲೆ ಆರಂಭವಾಗಿ ಮತ್ತೊಂದು ಮಳೆಗಾಲ ಬಂದ ನಂತರ, ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಶಿಕ್ಷಣ ಇಲಾಖೆ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯವನ್ನು ಕೈಗೊಂಡಿದೆ!

‘ಕೋವಿಡ್‌ನಿಂದ ಅನುದಾನದ ಕೊರತೆ ಎದುರಾಗಿಲ್ಲ’ ಎಂದು ಇಲಾಖೆಯ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಮಳೆಯಿಂದ ಹಾನಿಗೀಡಾದ ಶಾಲೆಯ ದುರಸ್ತಿ ಕಾರ್ಯ ಒಂದು ವರ್ಷವಾದರೂ ಏಕೆ ನಡೆದಿಲ್ಲ ಎಂದು ಕೇಳಿದರೆ ಅವರ ಬಳಿ ಸಣ್ಣ ಉತ್ತರವೂ ಇಲ್ಲ.

ಕೇಂದ್ರದ ಅನುದಾನ ಬಿಡುಗಡೆಯಾಗಿದ್ದರೂ, ಶಾಲೆ ಕೊಠಡಿಗಳ ದುರಸ್ತಿ ಆಗಿಲ್ಲ. ರಾಜ್ಯದ ಅನುದಾನವೂ ಪೂರ್ಣ ಬಿಡುಗಡೆಯಾಗಿಲ್ಲ. ಜಿಲ್ಲಾ ಪಂಚಾಯ್ತಿ ಅನುದಾನವೂ ಎರಡು ವರ್ಷದಿಂದ ಇಲ್ಲ.

ಕೊಠಡಿಗಳ ಅಭಾವ: ವರುಣಾ ಹೋಬಳಿಯ ಕೆಲವು ಶಾಲೆಗಳಲ್ಲಿ ಕೊಠಡಿದುರಸ್ತಿ ಮಾಡದಿರುವುದರಿಂದ ಕೊಠಡಿಗಳ ಕೊರತೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಳ್ಳು
ವುದು ಕಷ್ಟಕರವಾಗಿದೆ. ಸದ್ಯ ಶೇ 40ರಷ್ಟು ಮಕ್ಕಳು ಮಾತ್ರ ಹಾಜರಾಗಿರುವುದರಿಂದ ಸಮಸ್ಯೆ ಬಿಗಡಾಯಿಸಿಲ್ಲ. ಗೌರಿ ಗಣೇಶ ಹಬ್ಬದ ನಂತರದ ವಾರಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಸಮಸ್ಯೆ ಮುಂದುವರಿಯುತ್ತದೆ.

ಶಿಕ್ಷಕರ ಕೊರತೆ: ಕೆಲವು ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭವಾಗಿರುವುದರಿಂದ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಅವರು ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ನಿರ್ವಹಿಸಿದರೆ, ಅದಕ್ಕಿಂತ ಮೊದಲು ನಿರ್ವಹಿಸುತ್ತಿದ್ದ ಕನ್ನಡ ಮಾಧ್ಯಮ ತರಗತಿಗಳಿಗೆ ಶಿಕ್ಷಕರೇ ಇಲ್ಲದಂತಾಗುತ್ತದೆ. ಏಕೆಂದರೆ ಬದಲಿ ಶಿಕ್ಷಕರ ನೇಮಕಾತಿ ಇನ್ನೂ ನಡೆದಿಲ್ಲ. ‘ಶೀಘ್ರ ಬದಲಿ ಶಿಕ್ಷಕರನ್ನು ನಿಯೋಜಿಸಬೇಕು’ ಎಂದು ವರುಣಾ ಶಾಲಾಭಿವೃದ್ಧಿ ಸಮಿತಿಯ ಮಹೇಶ್‌ ಆಗ್ರಹಿಸುತ್ತಾರೆ.

ಎಚ್.ಡಿ.ಕೋಟೆ; 150 ಕೊಠಡಿ ಅಗತ್ಯ: ಎಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿಗೆ 150 ಹೊಸ ಶಾಲಾ ಕೊಠಡಿಗಳು ಬೇಕಿವೆ. ತುರ್ತಾಗಿ 100ರಿಂದ 120 ಕೊಠಡಿಗಳು ದುರಸ್ತಿಯಾಗಬೇಕು. ಆದರೆ, ಬಿಡುಗಡೆಯಾಗುವ ಅನುದಾನ ಏನೇನೂ ಸಾಲದು ಎಂದು ಇಲಾಖೆಯ ಸಿಬ್ಬಂದಿಯೊಬ್ಬರು ಹೇಳುತ್ತಾರೆ. ಪಿರಿಯಾಪಟ್ಟಣದ ಬೈಲುಕುಪ್ಪೆ, ಕೆಎಸ್‌ಎ ನಗರ ಸೇರಿದಂತೆ ಹಲವೆಡೆ ಶಾಲಾ ಕಟ್ಟಡಗಳೇ ಶಿಥಿಲವಾಗಿವೆ. ಕೆಲವೆಡೆ ಆಟದ ಮೈದಾನವಿಲ್ಲ. 2ರಿಂದ 3 ಶಾಲೆ
ಗಳಿಗೆ ಒಬ್ಬರೇ ದೈಹಿಕ ಶಿಕ್ಷಕರಿದ್ದಾರೆ. 

ಶೌಚಾಲಯ ಕಟ್ಟಡ ಅಪೂರ್ಣ: ಜಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯದ ಕಟ್ಟಡ ನಿರ್ಮಾಣವೂ ಪೂರ್ಣಗೊಳ್ಳದೆ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ. ‘190 ವಿದ್ಯಾರ್ಥಿಗಳಿರುವ ಶಾಲೆಗೆ ಸಮಪರ್ಕವಾದ ಶೌಚಾಲಯಗಳಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತೊಂದರೆ ಉಂಟಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ರವಿ ವಿಷಾದಿಸಿದರು.

‘ಶಿಥಿಲ ಕಟ್ಟಡಗಳು ನಿರುಪಯುಕ್ತವಾಗಿವೆ. ಪೂರ್ಣ ಪ್ರಮಾಣದಲ್ಲಿ ಶಾಲೆ ಪ್ರಾರಂಭವಾದರೆ ಪಾಠ ಮಾಡಲು ತೊಂದರೆಯಾಗಲಿದೆ’ ಎಂದು ಶಿಕ್ಷಕರೊಬ್ಬರು ದೂರಿದರು.

ನಾಡಕಚೇರಿ ಮತ್ತು ಹಾಲಿನ ಡೇರಿಯಿಂದ ಹೊರಬರುವ ಕೊಳಚೆ ನೀರು ‌ಶಾಲೆಯ ಆವರಣ ಸೇರುತ್ತಿದೆ. ಉರ್ದು ಶಾಲೆಗೆ ನೀಡಲಾಗಿದ್ದ ಕೊಠಡಿಗೂ ನೀರು ನುಗ್ಗಿದೆ. ಸೊಳ್ಳೆ, ನೊಣಗಳ ಕಾಟದಿಂದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ. ಕಾಂಪೌಂಡ್ ಇಲ್ಲದಿರುವುದರಿಂದ ಕಿಡಿಗೇಡಿಗಳು ಶಾಲೆಯ ಆವರಣದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

‘ನರೇಗಾ ಯೋಜನೆಯಡಿ ಶೌಚಾಲಯ ಕಟ್ಟಡ ನಿರ್ಮಾಣ ನಡೆದಿದೆ. ಕಾಂಪೌಂಡ್‌ ನಿರ್ಮಾಣಕ್ಕೆ ಕ್ರಿಯಾಯೋಜನೆ ಸಿದ್ಧಗೊಂಡಿದೆ. ಶಾಲೆ ಆವರಣದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಡಿಓ ನರಹರಿ ಹೇಳಿದರು.

ಮೈದಾನದಲ್ಲಿ ಮಳಿಗೆಗಳು: ‘ನಂಜನಗೂಡು ಪಟ್ಟಣದ ದಳವಾಯಿ ಶಾಲೆ ಹಾಗೂ ಸಿಂಹರಸ್ತೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಆಟದ ಮೈದಾನ ಇಲ್ಲ. ಶಾಲೆಗೆ ಸಂಬಂಧಿಸಿದ ಮೈದಾನದಲ್ಲಿ ಮಳಿಗೆಗಳು ತಲೆ ಎತ್ತಿವೆ. ಮಕ್ಕಳು ಆಟೋಟಗಳಿಂದ ವಂಚಿತರಾಗಿದ್ದಾರೆ’ ಎಂದು ಸ್ಥಳೀಯ ನಿವಾಸಿ ಪುಟ್ಟಸ್ವಾಮಿ ದೂರಿದರು.

ನಗರದ ಶಾಲೆ ‘ಪರವಾಗಿಲ್ಲ’: ನಗರದಲ್ಲಿರುವ ಕೆಲವು ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳಿಗೆ ಸರಿಸಮನಾಗಿವೆ. ಕುಕ್ಕರಹಳ್ಳಿ ಶಾಲೆಯಲ್ಲಿ ಹೈಟೆಕ್ ಗ್ರಂಥಾಲಯ, ಪ್ರಯೋಗಾಲಯಗಳಿವೆ. ಗ್ರಂಥಾಲಯದಲ್ಲಿ 2,008 ಪುಸ್ತಕಗಳಿವೆ.

‘104 ವಿದ್ಯಾರ್ಥಿಗಳ ಪೈಕಿ 80 ಮಕ್ಕಳು ಹಾಜರಾಗುತ್ತಿದ್ದಾರೆ’ ಎಂದು ಮುಖ್ಯಶಿಕ್ಷಕ ಆರ್.ಕೃಷ್ಣಪ್ಪ ತಿಳಿಸಿದರು.

ಅಶೋಕರಸ್ತೆಯಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಸುಸಜ್ಜಿತವಾಗಿದೆ. ವಿಶಾಲ ಮೈದಾನ,  ಪೀಠೋಪಕರಣಗಳಿವೆ. ಆದರೆ ಅಲ್ಲಿ ಕೇವಲ 17 ಮಕ್ಕಳಷ್ಟೇ ಇದ್ದಾರೆ‌. ಎನ್.ಆರ್.ಮೊಹಲ್ಲಾದ ಸರ್ಕಾರಿ ಶಾಲೆಯೂ ಉತ್ತಮ ಸ್ಥಿತಿಯಲ್ಲಿದೆ.

ನೂರು ವರ್ಷ ಪೂರೈಸಿರುವ ನಜರ್ ಬಾದ್ ಸರ್ಕಾರಿ ಶಾಲೆಯಲ್ಲಿ 27 ಮಕ್ಕಳಿದ್ದಾರೆ. ‘ಕಟ್ಟಡ ಶಿಥಿಲವಾಗಿದ್ದು, ದುರಸ್ತಿ ಮಾಡಿಸಬೇಕು’ ಎಂದು ಸ್ಥಳೀಯ ನಿವಾಸಿ ಲೋಕೇಶ್ ಹೇಳಿದರು.

ದೇವರಾಜ ಅರಸು ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಹೊರನೋಟಕ್ಕೆ ಸುಸಜ್ಜಿತವಾಗಿದೆ. 'ತಾರಸಿ ಸ್ವಲ್ಪ ದುರಸ್ತಿಯಾಗಬೇಕು. 26 ವಿದ್ಯಾರ್ಥಿಗಳಿದ್ದು ಎಲ್ಲರೂ ಬರುತ್ತಿದ್ದಾರೆ’ ಎಂದು ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ತಿಳಿಸಿದರು.

‘ಕನಕಗಿರಿಯ ಸರ್ಕಾರಿ ಶಾರದಾ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯು 150 ವರ್ಷಗಳಷ್ಟು ಹಳೆಯದು. ಸದ್ಯ ಶಾಲೆ ಸುಸ್ಥಿತಿಯಲ್ಲಿದ್ದು, 280 ಮಕ್ಕಳಿದ್ದಾರೆ. ಶೇ70 ರಷ್ಟು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ’ ಎಂದು ಮುಖ್ಯಶಿಕ್ಷಕ ರವೀಶ ಕುಮಾರ್ ಹೇಳಿದರು.

ಶಾಲೆ ದಾರಿಗೆ ಬಾರದ ಬಸ್: ಬಸ್‌ಗಳ ಕೊರತೆಯೂ ಶಿಕ್ಷಕ–ವಿದ್ಯಾರ್ಥಿಗಳನ್ನು ಸುಸ್ತು ಮಾಡಿದೆ. ಖಾಸಗಿ ವಾಹನಗಳು ಸಂಚರಿಸುತ್ತಿಲ್ಲ. ಇಂಧನ ಬೆಲೆ ಏರಿಕೆಯಿಂದ ಸರಕು ಸಾಗಣೆ ವಾಹನಗಳು, ಖಾಸಗಿ ಬಸ್‌ಗಳು ಕಡಿಮೆಯಾಗಿದೆ.

ತಿ.ನರಸೀಪುರ ತಾಲ್ಲೂಕಿನ ಮೂಗೂರು ಹೋಬಳಿಯ ಗ್ರಾಮಗಳಲ್ಲಿ ಮಕ್ಕಳು ಸುಮಾರು 4 ಕಿ.ಮೀವರೆಗೂ ನಡೆಯಬೇಕಿದೆ. ಕೊತ್ತೇಗಾಲ, ಮಾಡ್ರಹಳ್ಳಿ, ಸೀಹಳ್ಳಿ ಭಾಗಗಳಲ್ಲೂ ಇದೇ ಸ್ಥಿತಿ ಇದೆ. ಕುಪ್ಯಾ ಮತ್ತು ಅಗಸ್ತ್ಯಪುರದ ವಿದ್ಯಾರ್ಥಿಗಳು ಯಡದೊರೆ ಗೇಟ್‌ಗೆ ಬಂದು, ಬಸ್‌ ಹಿಡಿಯಬೇಕು. ಬನ್ನೂರು ಹೋಬಳಿಯಲ್ಲೂ ಇದೇ ಸಮಸ್ಯೆ ಇದೆ.

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಗ್ರಾಮಗಳಿಂದ ಪ್ರೌಢಶಾಲೆಗೆ ಬರಲು ಸಕಾಲಕ್ಕೆ ಬಸ್ ಇಲ್ಲ. ಮಾವಿನಹಳ್ಳಿ, ಕಾಳಿಹುಂಡಿ, ಬೆಟ್ಟದಬೀಡು, ಅರಸಿನಕೆರೆಯ ಮಾರ್ಗದಲ್ಲಿ ಸಂಚರಿಸುವ ಸಿಟಿ ಬಸ್‌ಗಳು ಸಕಾಲಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.

‘ಬಸ್ ಕೊರತೆಯಿಂದ ಶಾಲೆಗೆ ಬರಲು ಶಿಕ್ಷಕರಿಗೂ ತೊಂದರೆಯಾಗುತ್ತಿದೆ. ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕು’ ಎಂದು ಶಿಕ್ಷಕ ಕಿರಣ್ ಹೇಳುತ್ತಾರೆ.

ಆಫ್‌ಲೈನ್‌ನಿಂದ ಆನ್‌ಲೈನ್‌ಗೆ..: ಒಂದೂವರೆ ವರ್ಷಗಳಿಂದ ಮಕ್ಕಳು ಶಾಲೆಗೆ ಬಾರದೆ ಆನ್‌ಲೈನ್‌ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಈಗ ಶಾಲೆಗೆ ಬಂದು ತರಗತಿಗಳಿಗೆ ಹಾಜರಾಗುವ ಸನ್ನಿವೇಶದಲ್ಲಿ ಅವರಿಗೆ ಹೊಂದಾಣಿಕೆಯ ಸಮಸ್ಯೆಯೂ ಎದುರಾಗಿದೆ.

‘ಮನೆಯಲ್ಲೇ ಪಾಠ ಕೇಳುವ ಅಭ್ಯಾಸ ಬದಲಾಗಿದೆ, ತರಗತಿಯಲ್ಲಿ ಸಹಪಾಠಿಗಳೊಡನೆ ಪಾಠ ಕೇಳುವ ವೇಳೆ ಮತ್ತೆ ಏಕಾಗ್ರತೆಯ ಸಮಸ್ಯೆ ಎದುರಾಗುತ್ತದೆ. ನಮಗೂ ಆನ್‌ಲೈನ್‌ನಲ್ಲಿ ಪಾಠ ಮಾಡಿ ಮತ್ತೆ ತರಗತಿಯೊಳಗೆ ಪಾಠ ಮಾಡುವಾಗಲೂ ಸಮಸ್ಯೆಗಳು ಎದುರಾಗುತ್ತವೆ’ ಎಂದು ಲಕ್ಷ್ಮಿಪುರಂ ಪ್ರೌಢಶಾಲೆಯ ಶಿಕ್ಷಕಿ ಗೀತಾ ಅಭಿ‍ಪ್ರಾಯ‍ಪಟ್ಟರು.

ಪ್ರಜಾವಾಣಿ ತಂಡ: ಕೆ.ಎಸ್‌.ಗಿರೀಶ್‌, ಗೋವಿಂದ ಕುಲಕರ್ಣಿ, ಎಚ್‌.ಎಸ್‌.ಸಚ್ಚಿತ್, ಮಹದೇವ್, ಬಿಳಿಗಿರಿ, ಗಣೇಶ್, ಪಂಡಿತ್‌ ನಾಟಿಕರ್, ಪ್ರಕಾಶ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು