ಶನಿವಾರ, ಅಕ್ಟೋಬರ್ 1, 2022
25 °C
ಒಸಾಟ್‌ನಿಂದ ಹರವೆ ಸರ್ಕಾರಿ ಶಾಲೆಯಲ್ಲಿ ₹70 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ

ಹುಣಸೂರು: ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣ

ಎಚ್.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಗ್ರಾಮೀಣ ಶಿಕ್ಷಣದ ಗುಣಮಟ್ಟ ಸುಧಾರಣೆ ಮತ್ತು ಮೂಲ ಸೌಕರ್ಯ ಒದಗಿಸುವ ದಿಕ್ಕಿನಲ್ಲಿ 14 ವರ್ಷಗಳಿಂದ ‘ಒಸಾಟ್’ ಸ್ವಯಂ ಸೇವಾ ಸಂಸ್ಥೆ ಕಾರ್ಯೋನ್ಮುಖವಾಗಿದ್ದು, ಶಿಕ್ಷಣ ದತ್ತಿನಿಧಿ (ಒಸಾಟ್) ರಾಜ್ಯದಲ್ಲಿ 60 ಯೋಜನೆಗಳನ್ನು ಕೈಗೊಂಡಿದೆ.

ಜಿಲ್ಲೆಯ ಹುಣಸೂರು ಕ್ಷೇತ್ರದಲ್ಲಿ 14 ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣ ಮತ್ತು 7 ಶಾಲೆಗಳಲ್ಲಿ ಒಟ್ಟು ತಲಾ ₹70 ಲಕ್ಷದಲ್ಲಿ 24 ಕೊಠಡಿ, ಬಿಸಿಯೂಟ ತಯಾರಿಕೆ ಕೊಠಡಿ ಮತ್ತು ಶೌಚಾಲಯ ನಿರ್ಮಿಸಿ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದೆ. ಆ.17ರಂದು ಹರವೆ ಸರ್ಕಾರಿ ಪ್ರೌಢಶಾಲೆಯಲ್ಲಿ 5 ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಹುಣಸೂರು ತಾಲ್ಲೂಕಿನ ಚಿಕ್ಕ ಹುಣಸೂರು, ಚೋಳನಹಳ್ಳಿ, ಹರವೆ, ಗುರುಪುರ, ಬಿಳಿಕೆರೆ, ಮೂಕನಹಳ್ಳಿ, ಕಟ್ಟೆಮಳಲವಾಡಿ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಮರು ಜೀವ ನೀಡುವ ಪ್ರಯತ್ನ ನಡೆದಿದೆ ಎಂದು ಸಂಸ್ಥೆಯ ಸ್ವಯಂ ಸೇವಕ ಪಿ.ವಿ.ಸುಬ್ರಹ್ಮಣ್ಯ ಮಾಹಿತಿ ನೀಡಿದರು.

ಡಿಜಿಟಲ್ ಶಿಕ್ಷಣ: ‘2019ರಿಂದ ಡಿಜಿಟಲ್ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಒಸಾಟ್ ಡಿಜಿಟಲ್ ವಿಭಾಗ ಅನುಷ್ಠಾನಗೊಳಿಸಿ 52 ಶಾಲೆಗಳನ್ನು ಗುರುತಿಸಿ 392 ಶಿಕ್ಷಕರಿಗೆ ಲ್ಯಾಪ್‌ಟಾಪ್, 8,300 ವಿದ್ಯಾರ್ಥಿಗಳಿಗೆ 656 ಟ್ಯಾಬ್ ಮತ್ತು ತರಗತಿಗೆ 70 ಸ್ಮಾರ್ಟ್ ಟಿವಿ ಅಳವಡಿಸುವ ಯೋಜನೆ ಹೊಂದಿದೆ. ಪ್ರಥಮ ಹಂತದಲ್ಲಿ 18 ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಉತ್ತಮ ಸ್ಪಂದನೆ ಮತ್ತು ಫಲಿತಾಂಶ ಸಿಕ್ಕಿದೆ’ ಎಂದು ಡಿಜಿಟಲ್ ಶಿಕ್ಷಣ ವಿಭಾಗದ ಮುಖ್ಯಸ್ಥ ಸುಧೀರ್ ತಿಳಿಸಿದರು.

ಸ್ಥಾಪನೆ: 2002ರಲ್ಲಿ ಅನಿವಾಸಿ ಭಾರತಿಯ ಸ್ನೇಹಿತರ ಸಾಂಸ್ಕೃತಿಕ ಚಟುವಟಿಕೆಗೆ ಅಮೆರಿಕದಲ್ಲಿ ಆರಂಭ ಗೊಂಡ ಕೂಟ ಇದಾಗಿದೆ. ನಂತರದಲ್ಲಿ, ತಾವು ಓದಿದ ಗ್ರಾಮೀಣ ಶಾಲೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ಉದ್ದೇಶದಿಂದ 2008ರಲ್ಲಿ ಒಸಾಟ್ (ಒನ್ ಸ್ಕೂಲ್ ಅಟ್ ಎ ಟೈಮ್) ಸ್ಥಾಪನೆಗೊಂಡಿತು.

2014ರ ಬಳಿಕ ಸರ್ಕಾರಿ ಶಾಲೆಗಳಿಗೆ ಊರುಗೋಲಾಗಿ ನಿಂತು ಗ್ರಾಮೀಣ ಶಾಲೆಗಳನ್ನು ಸುಧಾರಿಸಲು ಬೇಡಿಕೆಗೆ ಅನುಗುಣವಾಗಿ 100 ಸದಸ್ಯರ ಬಲ ಹೊಂದಿರುವ ಈ ಸಂಸ್ಥೆ ಕಟ್ಟಡ ನಿರ್ಮಾಣ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

***

ಒಸಾಟ್ ಶಾಲೆಗಳಲ್ಲಿ ಡಿಜಿಟಲ್ ಶಿಕ್ಷಣ ವ್ಯವಸ್ಥೆ ಕಲ್ಪಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ತಂತ್ರಜ್ಞಾನದ ಕೊರತೆ ನೀಗಿಸಿದೆ. ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದೆ.
–ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ

***

ಹರವೆ ಶಾಲೆಯಲ್ಲಿ 2 ವರ್ಷದಿಂದ ಡಿಜಿಟಲ್ ಶಿಕ್ಷಣ ನಡೆದಿದ್ದು, ವಿದ್ಯಾರ್ಥಿಗಳಲ್ಲಿ ಬದಲಾವಣೆ ಕಂಡು ಬಂದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೂವರು ವಿದ್ಯಾರ್ಥಿ ಗಳು 617 ಅಂಕ ಪಡೆದಿದ್ದಾರೆ.
–ಯಶೋದಾ, ಮುಖ್ಯಶಿಕ್ಷಕಿ, ಹರವೆ ಶಾಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು