ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರನ್ನು ಮರೆತರೆ ಉಳಿಗಾಲವಿಲ್ಲ: ಎಸ್.ಟಿ.ಸೋಮಶೇಖರ್

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿಕೆ
Last Updated 8 ಜೂನ್ 2020, 15:30 IST
ಅಕ್ಷರ ಗಾತ್ರ

ಮೈಸೂರು: ‘ನಾನು ಶಾಸಕ, ಸಚಿವನಾಗಿರಬಹುದು. ಆದರೆ, ಪಕ್ಷದ ವಿಚಾರ ಬಂದಾಗ ಬಿಜೆಪಿ ಅಧ್ಯಕ್ಷರ ಸೂಚನೆ ಪಾಲಿಸುವವನು. ಅಂತಹ ಶಿಸ್ತು ಬಿಜೆಪಿಯಲ್ಲಿದೆ. ಯಾರು ಕಾರ್ಯಕರ್ತರನ್ನು ಮರೆಯುತ್ತಾರೋ ? ದೂರ ಮಾಡುತ್ತಾರೋ... ಅಂತಹ ಶಾಸಕ ಬಹಳ ಕಾಲ ಅಧಿಕಾರದಲ್ಲಿರಲು ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಚಾಮರಾಜ ವಿಧಾನಸಭಾ ಕ್ಷೇತ್ರದ ಮನೆ ಮನೆಗೂ ಕೇಂದ್ರ ಸರ್ಕಾರದ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಾಧನೆಯನ್ನು ತಲುಪಿಸುವ ಕಾರ್ಯಕ್ರಮಕ್ಕೆ ನಗರದಲ್ಲಿ ಸೋಮವಾರ ಚಾಲನೆ ನೀಡಿದ ಸಚಿವರು, ‘ಕೊರೊನಾ ಸೋಂಕು ಅಮೆರಿಕದಂತಹ ದೇಶವನ್ನೇ ತಲ್ಲಣಗೊಳಿಸಿದೆ. ಆದರೆ, ಭಾರತದಲ್ಲಿ ಪ್ರಧಾನಿ ಮೋದಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಪ್ರಪಂಚಕ್ಕೆ ಮಾದರಿಯಾಗಿವೆ’ ಎಂದರು.

‘ಚಪ್ಪಾಳೆ ಹೊಡೆಯುವುದು, ಗಂಟಾನಾದ ಮೊಳಗಿಸುವುದು, ದೀಪ ಹಚ್ಚುವಿಕೆಯ ಮೂಲಕ ಸೋಂಕಿನ ಋಣಾತ್ಮಕ ಅಂಶ ಹೋಗಲಾಡಿಸುವಂತೆ ನೀಡಿದ ಒಂದೇ ಒಂದು ಕರೆಗೆ ಇಡೀ ದೇಶದ ಜನತೆ ಜಾತಿ, ಧರ್ಮ, ಪಕ್ಷಭೇದ ಮರೆತು ಬೆಂಬಲಿಸಿದ್ದರು. ಇದು ಮೋದಿ ಸಾಮರ್ಥ್ಯವನ್ನು ಪ್ರದರ್ಶಿಸಿತು’ ಎಂದು ಸಚಿವರು ಹೇಳಿದರು.

ಷರತ್ತು ಅನ್ವಯ: ‘ಸುದೀರ್ಘ ಅವಧಿ ದೇಶ ಲಾಕ್‌ಡೌನ್ ಹಿಡಿತದಲ್ಲಿತ್ತು. ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಬೇಕೆಂಬ ದೃಷ್ಟಿಯಲ್ಲಿ ಈಗ ಕೇಂದ್ರ ಸರ್ಕಾರ ಹಲವು ಷರತ್ತುಗಳೊಂದಿಗೆ ದೇವಸ್ಥಾನ, ಮಸೀದಿ, ಚರ್ಚ್, ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅನುಮತಿ ಕೊಟ್ಟಿದೆ. ಸಾರ್ವಜನಿಕರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರ ಜೊತೆಗೆ ಕೊರೊನಾ ವೈರಸ್ ಜೊತೆಗೆ ಬದುಕುವುದನ್ನು ಕಲಿಯಬೇಕು’ ಎಂದು ಸೋಮಶೇಖರ್ ಸಲಹೆ ನೀಡಿದರು.

‘ಕೋವಿಡ್‌ನ ಸಂಕಷ್ಟದ ಕಾಲದಲ್ಲಿ ಸುಮಾರು 80 ಕೋಟಿ ಜನರಿಗೆ ಪಡಿತರ ವಿತರಣೆ ಮಾಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಪಡಿತರ ಕಾರ್ಡ್ ಇಲ್ಲದಿದ್ದರೂ ರೇಷನ್ ಕೊಡಿಸಲಾಗುತ್ತಿದೆ. ಹಸಿದವನಿಗೆ ಊಟ ಸಿಗಬೇಕು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ’ ಎಂದು ಸಚಿವರು ತಿಳಿಸಿದರು.

ಶಾಸಕ ನಾಗೇಂದ್ರ ಮಾತನಾಡಿ, ‘ಕೇಂದ್ರ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ರಕ್ಷಣಾ ವ್ಯವಸ್ಥೆ ಬಲಗೊಂಡಿದೆ. ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇದು ದೇಶದ ಇತಿಹಾಸದಲ್ಲೇ ಮೊದಲು’ ಎಂದರು. ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT