ಶನಿವಾರ, ಜನವರಿ 18, 2020
21 °C
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಮಾತು

ಮೈಸೂರು: ಇ–ಬೀಟ್‌ ವ್ಯವಸ್ಥೆ, ಜನಸ್ನೇಹಿ ಭರವಸೆ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಮೈಸೂರು: ನಿಮ್ಮ ಬಡಾವಣೆ, ಊರಿನಲ್ಲಿ ನೈಟ್‌ ಬೀಟ್‌ ವ್ಯವಸ್ಥೆ ಸರಿ ಇಲ್ಲವೇ? ಪೊಲೀಸ್‌ ಸಿಬ್ಬಂದಿ ಸರಿಯಾಗಿ ಗಸ್ತು ಕಾರ್ಯ ನಿರ್ವಹಿಸುತ್ತಿಲ್ಲವೇ? ಈ ಸಮಸ್ಯೆಗೆ ಅಂತ್ಯ ಹೇಳಲು ಹಾಗೂ ಜನಸ್ನೇಹಿಯಾಗಿಸಲು ಇದೇ 26ರಿಂದ ಜಿಲ್ಲಾ ಪೊಲೀಸರು ‘ಇ–ಬೀಟ್‌ ವ್ಯವಸ್ಥೆ’ ಜಾರಿಗೊಳಿಸಲಿದ್ದು, ಇದಕ್ಕೆ ತಂತ್ರಜ್ಞಾನದ ಸ್ಪರ್ಶವೂ ಇದೆ.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಮೈಸೂರು ಕಚೇರಿಯಲ್ಲಿ ಬುಧವಾರ ನಡೆದ ‘ಫೋನ್‌ ಇನ್‌’ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಈ ವಿಚಾರ ಹಂಚಿಕೊಂಡರು.

ಗಸ್ತು ಸಿಬ್ಬಂದಿ ಮೇಲೆ ನಿಗಾ ವಹಿಸಲು ಮತ್ತು ಸಾರ್ವಜನಿಕರಿಗೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಈ ಮಾದರಿಯ ಬೀಟ್‌ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಆರಂಭದಲ್ಲಿ ಜಿಲ್ಲೆಯಾದ್ಯಂತ 590 ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.

‘ಫೋನ್‌ ಇನ್‌’ಗೆ ಭಾರಿ ಸ್ಪಂದನೆ ವ್ಯಕ್ತವಾಯಿತು. ಜಿಲ್ಲೆಯ ವಿವಿಧೆಡೆಯಿಂದ ಜನರು ಕರೆ ಮಾಡಿದರು. ಬೆಳಿಗ್ಗೆ 11ರಿಂದ ಮಧ್ಯಾಹ್ನ 12 ಗಂಟೆವರೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, 10.15ಕ್ಕೆ ಶುರುವಾದ ಫೋನ್‌ ಕರೆಗಳು, 12.30ರವರೆಗೂ ರಿಂಗಣಿಸುತ್ತಲೇ ಇದ್ದವು. ಬಿಡುವಿಲ್ಲದೆ ಕರೆಗಳನ್ನು ಸ್ವೀಕರಿಸಿ, ಸಾರ್ವಜನಿಕರ ದೂರುಗಳನ್ನು ಆಲಿಸಿದ ರಿಷ್ಯಂತ್‌, ಪುಸ್ತಕದಲ್ಲಿ ದಾಖಲಿಸಿಕೊಂಡರು.

ಕೆಲ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರೆ, ಮತ್ತಷ್ಟು ಸಮಸ್ಯೆಗಳಿಗೆ ಸಿಬ್ಬಂದಿ ಜೊತೆ ಚರ್ಚಿಸಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು. ಹಲವರಿಗೆ ತಮ್ಮ ಮೊಬೈಲ್‌ ಸಂಖ್ಯೆ ನೀಡಿದರೆ, ಕೆಲವರಿಗೆ ದಾಖಲೆಗಳೊಂದಿಗೆ ನೇರವಾಗಿ ಕಚೇರಿಯಲ್ಲಿ ಭೇಟಿಯಾಗಿ ಎಂದು ಹೇಳಿದರು.

ಮರಳು ದಂಧೆ, ಕಲ್ಲು ಗಣಿಗಾರಿಕೆ, ಇಸ್ಪೀಟ್‌ ಜೂಜಾಟ, ಕ್ರಿಕೆಟ್‌ ಬೆಟ್ಟಿಂಗ್‌, ಹಲ್ಲೆ, ಕಳ್ಳತನ, ವಂಚನೆ, ಕೊಲೆ, ರಸ್ತೆಯಲ್ಲೇ ಮದ್ಯಪಾನ, ಮದ್ಯ ಅಕ್ರಮ ಮಾರಾಟ, ಸಮಸ್ಯೆಗೆ ಸ್ಪಂದಿಸದ ಕೆಲ ಠಾಣೆಗಳ ಪೊಲೀಸ್‌ ಸಿಬ್ಬಂದಿ, ಪಾದಚಾರಿ ಮಾರ್ಗ ಅತಿಕ್ರಮಣ, ಹೆಚ್ಚುತ್ತಿರುವ ರಸ್ತೆ ಅಪಘಾತ, ಸರಕು ಸಾಗಣೆ ವಾಹನದಲ್ಲಿ ಜನರು–ಮಕ್ಕಳ ಪ್ರಯಾಣ, ಟ್ರಾಫಿಕ್‌ಗೆ ಸಂಬಂಧಿಸಿದ ಸಮಸ್ಯೆಗಳು ‘ಫೋನ್‌ ಇನ್‌’ನಲ್ಲಿ ಹೆಚ್ಚಾಗಿ ಪ್ರತಿಧ್ವನಿಸಿದವು. ಪೊಲೀಸ್‌ ಸಿಬ್ಬಂದಿಯ ವಿರುದ್ಧವೂ ದೂರು ಬಂದವು.

ಮರಳು ಮಾಫಿಯಾ, ಬೆಟ್ಟಿಂಗ್‌ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ನೀಡಿದ ಕೆಲವರು ಹೆಸರು ಬಹಿರಂಗಗೊಳಿಸದಂತೆಯೂ ಮನವಿ ಮಾಡಿದರು.

ಮಹಿಳೆಯರ ಸುರಕ್ಷತೆಗೆ ತೆಗೆದುಕೊಂಡಿರುವ ಕ್ರಮಗಳು, ಜಾಗೃತಿ ಕಾರ್ಯಕ್ರಮಗಳನ್ನು ವಿವರಿಸಿದರು. ಪೋಕ್ಸೊ ಪ್ರಕರಣಗಳನ್ನು 60 ದಿನಗಳಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗಿದೆ ಎಂದರು.

ಪರವಾನಗಿ ರದ್ದು: ಸರಕು ಸಾಗಣೆ ವಾಹನಗಳಲ್ಲಿ ಜನರು ಹಾಗೂ ಆಟೊಗಳಲ್ಲಿ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುವುದು ಕಂಡುಬಂದರೆ ಅಂಥ ಚಾಲಕರ ಚಾಲನಾ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹುಣಸೂರು, ಪಿರಿಯಾಪಟ್ಟಣ ಜಿಲ್ಲೆಗಳಲ್ಲಿ ಇಂಥ ಪ್ರಕರಣಗಳು ಹೆಚ್ಚಿವೆ. ಈಗಾಗಲೇ 92 ಚಾಲಕರ ಪರವಾನಗಿ ರದ್ದು ಮಾಡಲಾಗಿದೆ ಎಂದು ಹೇಳಿದರು.

ನಂಜನಗೂಡು, ಕೆ.ಆರ್‌.ನಗರ, ‍ಪಿರಿಯಾಪಟ್ಟಣ ನಗರಗಳಲ್ಲಿ ಹೆಚ್ಚಿರುವ ಟ್ರಾಫಿಕ್‌ ಸಮಸ್ಯೆ ಬಗ್ಗೆ ಸಾರ್ವಜನಿಕರು ರಿಷ್ಯಂತ್‌ ಅವರ ಗಮನ ಸೆಳೆದರು. ಟ್ರಾಫಿಕ್‌ ದೀಪ (ಸಿಗ್ನಲ್‌) ಅಳವಡಿಸಿ ಸ್ಥಳಕ್ಕೆ ಟ್ರಾಫಿಕ್‌ ಪೊಲೀಸರನ್ನು ನಿಯೋಜಿಸುವ ಭರವಸೆ ನೀಡಿದರು.

ತಗ್ಗಿದ ಅಪಘಾತ: ಹಲವು ಅಗತ್ಯ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಅಪಘಾತ ಸಂಖ್ಯೆ ಇಳಿಮುಖವಾಗಿದೆ ಎಂಬ ವಿಚಾರವನ್ನೂ ಅವರು ಹಂಚಿಕೊಂಡರು. ಅಪಘಾತ ಪ್ರಕರಣಗಳಲ್ಲಿ 2018ಕ್ಕೆ ಹೋಲಿಸಿದರೆ 2019ರಲ್ಲಿ ಶೇ 23ರಷ್ಟು ತಗ್ಗಿದೆ ಎಂದು ಅಂಕಿ–ಅಂಶ ಸಮೇತ ವಿವರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು