ಶನಿವಾರ, ಏಪ್ರಿಲ್ 1, 2023
25 °C
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಟೀಕೆ

‘ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ’: ಸುರ್ಜೇವಾಲಾ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹಿರಿಯರನ್ನು ಕಸದ ಬುಟ್ಟಿಗೆ ಎಸೆಯುವ ಸಂಸ್ಕೃತಿ ಬಿಜೆಪಿಯದ್ದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಟೀಕಿಸಿದರು.

ಭ್ರಷ್ಟಾಚಾರದ ಕಾರಣಕ್ಕೆ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಬೇಕಿತ್ತು. ಆದರೆ, ಅವರು ಹಿರಿಯರೆಂಬ ಕಾರಣಕ್ಕೆ ತೆಗೆದಿರುವುದು ಸರಿಯಲ್ಲ. ಲಾಲ್‌ಕೃಷ್ಣ ಅಡ್ವಾಣಿ ಸೇರಿದಂತೆ ಅನೇಕರನ್ನು ಮಕ್ಕಳು ತಮ್ಮ ಮನೆಯಿಂದ ಅಪ್ಪ, ಅಮ್ಮರನ್ನು ಹೊರಗಟ್ಟಿದಂತೆ ಕಸದ ಬುಟ್ಟಿಗೆ ಬಿಜೆಪಿ ಹಾಕಿದೆ ಎಂದು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಜಾತಿ ಸಮುದಾಯಗಳನ್ನು ಬಿಜೆಪಿ ತನ್ನ ಲಾಭಕ್ಕೆ ಉಪಯೋಗಿಸಿಕೊಂಡು ನಂತರ ಬೀಸಾಡುತ್ತಿದೆ. ಯಡಿಯೂರಪ್ಪ ರಾಜೀನಾಮೆಯಿಂದ ಕಾಂಗ್ರೆಸ್‌ಗೆ ಉಂಟಾಗುವ ಲಾಭ, ನಷ್ಟದ ಕುರಿತು ಚಿಂತಿಸುವುದಿಲ್ಲ. ಆದರೆ, ಅವರು ಕಣ್ಣೀರು ಹಾಕಿದ್ದು ಏಕೆ ಎಂಬ ಪ್ರಶ್ನೆಗೆ ಬಿಜೆಪಿ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತರು, ಕೇಂದ್ರ ಸಚಿವರು, ಸಿಬಿಐ, ನ್ಯಾಯಾಂಗ, ಚುನಾವಣಾ ಆಯೋಗ ಸೇರಿದಂತೆ ಬಹುತೇಕರ ಮೇಲೆ ಸರ್ಕಾರ ಗೂಢಾಚಾರಿಕೆ ನಡೆಸಿದೆ. ಪತ್ರಕರ್ತರ ಪತ್ನಿಯರು, ಸಿಬಿಐ ಮುಖ್ಯಸ್ಥರ ಸೊಸೆ, ಪುತ್ರರ ಮೇಲೂ ಕಣ್ಣಿಡಲಾಗಿದೆ. ಸ್ನಾನದ ಮನೆ, ಮಲಗುವ ಕೋಣೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಕೆಲಸದಲ್ಲಿ ಸರ್ಕಾರ ನಿರತವಾಗಿದೆ. ಖಾಸಗಿತನದ ಹಕ್ಕನ್ನು ಸರ್ಕಾರ ಉಲ್ಲಂಘಿಸಿ, ಪ್ರಜಾಪ್ರಭುತ್ವದ ಮೇಲೆಯೇ ದಾಳಿ ನಡೆಸುತ್ತಿದೆ ಎಂದು ಹರಿಹಾಯ್ದರು.

ಪ್ರವಾಹದ ಸಂತ್ರಸ್ತರ ನೆರವಿಗೆ ಬಾರದ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. 2019ರ ಪ್ರವಾಹ, ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೆರವು ನೀಡಲಿಲ್ಲ. ಈಗಲೂ ಇದೇ ಪ್ರವೃತ್ತಿಯನ್ನು ಮುಂದುವರಿಸಲಾಗಿದೆ ಎಂದು ಕಿಡಿಕಾರಿದರು.

ಬಿಜೆಪಿಯದ್ದು ಭ್ರಷ್ಟಾಚಾರ, ಪಕ್ಷಾಂತರ, ಗೂಢಚಾರಿಕೆಯ ಸರ್ಕಾರ. ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡುವುದೇ ಇದರ ಕೆಲಸ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು