ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೂವರೆ ಸಾವಿರ ಜನರನ್ನು ಸೇರಿಸಿ ಹೋರಾಡಲು ಸಿದ್ಧತೆ: ದೊರೆಸ್ವಾಮಿ

Last Updated 1 ಫೆಬ್ರುವರಿ 2021, 14:36 IST
ಅಕ್ಷರ ಗಾತ್ರ

ಮೈಸೂರು: ‘ದೇಶವನ್ನು ಉಳಿಸಿಕೊಳ್ಳಲು ಒಂದೂವರೆ ಸಾವಿರ ಮಂದಿಯನ್ನು ಸೇರಿಸಿ ಹೋರಾಡಲು ತಯಾರಿ ನಡೆಸುತ್ತಿದ್ದೇನೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ, ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ವತಿಯಿಂದ ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಏರ್ಪ‍ಡಿಸಲಾಗಿದ್ದ ‘ಯಶೋಧರಮ್ಮ ದಾಸಪ್ಪ ಒಂದು ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ, ಕ್ರೈಸ್ತ, ಮುಸ್ಲಿಮರೊಂದಿಗೆ ನಿರಂತರವಾಗಿ ಸಭೆ ನಡೆಸುತ್ತಿದ್ದೇನೆ. ಇವರಲ್ಲಿ ಈಗಾಗಲೇ 200ರಿಂದ 300 ಮಂದಿ ಜೈಲಿಗೆ ಹೋಗಲೂ ಸಿದ್ಧ ಎಂದು ಹೇಳಿದ್ದಾರೆ. ಅಸಹಕಾರ ಚಳವಳಿ ಸೇರಿದಂತೆ ಎಲ್ಲ ಬಗೆಯ ಶಾಂತಿಯುತ ಹೋರಾಟಕ್ಕೆ ಬದ್ಧವಾಗಿರುವುದಾಗಿ ಅವರು ತಿಳಿಸಿದ್ದಾರೆ ಎಂದರು.

ಅಣ್ಣಹಜಾರೆ ಹೋರಾಟಕ್ಕೆ ಧುಮುಕಿ ಒಂದು ರೀತಿಯ ಉನ್ಮಾದ ಮೂಡಿಸಿದರು. ಈ ಉನ್ಮಾದಕ್ಕೆ ಒಳಗಾದ ಜನರು ಚುನಾಯಿತ ಸರ್ವಾಧಿಕಾರಿ ಕೈಯಲ್ಲಿ ದೇಶವನ್ನು ಕೊಟ್ಟಿದ್ದಾರೆ. ಅದಾನಿ, ಅಂಬಾನಿ ಸೇರಿದಂತೆ ಬಂಡವಾಳಷಾಹಿಗಳು ತಮ್ಮ ಕಾರ್ಯಸಾಧನೆಗೆ ನರೇಂದ್ರ ಮೋದಿ ಅವರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.‌

ಗೂಂಡಾಗಳ ಕೈಗೆ ದೇಶವನ್ನು ನೀಡಲಾಗಿದೆ. ದೇಶ ಹೊತ್ತಿ ಉರಿಯುತ್ತಿದೆ. ಕಾಂಗ್ರೆಸ್ ಸತ್ತು ಹೋಗಿದೆ. ಜನರಿಗೆ ಆಲಸ್ಯ ಬಂದು ಮಲಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‌ರಾಹುಲ್‌ಗಾಂಧಿ ಮನೆಯಿಂದ ಹೊರಗೆ ಬರುವುದೇ ಇಲ್ಲ. ನಿಮ್ಮ ತಾತ ನೆಹರೂ ಅವರ ಚರಿತ್ರೆ ಓದು, ಅವರಂತೆ ಕೆಲಸ ಮಾಡು. ಇಲ್ಲದಿದ್ದರೆ ನಿಮ್ಮ ಕುಟುಂಬ ಬಿಟ್ಟು ಬೇರೆಯವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಿರಿ ಎಂದು ರಾಹುಲ್‌ಗಾಂಧಿಗೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.

ಎಚ್.ಡಿ.ದೇವೇಗೌಡ ಅವರು ಆರು ಕೊಟ್ಟರೆ ಅತ್ತೆ ಕಡೆಗೆ ಮೂರು ಕೊಟ್ಟರೆ ಸೊಸೆ ಕಡೆಗೆ ಎಂಬಂತೆ ಆಡುತ್ತಿದ್ದಾರೆ. ಇವರನ್ನು ನಂಬಿದರೆ ಯಾವುದೇ ಹೋರಾಟ ಸಾಧ್ಯವಿಲ್ಲ ಎಂದರು.

ಹೋರಾಡಲು ಕೈಎತ್ತಿದವರು ಬೆರಳೆಣಿಕೆಯಷ್ಟು ಮಂದಿ!
‘ದೇಶವನ್ನು ಉಳಿಸಿಕೊಳ್ಳಲು ಜೈಲಿಗೆ ಹೋಗಲು ಸಿದ್ಧರಿರುವರು ಎಷ್ಟು ಮಂದಿ ಇದ್ದೀರಿ’ ಎಂದು ದೊರೆಸ್ವಾಮಿ ಪ್ರಶ್ನಿಸಿದಾಗ ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕೈ ಎತ್ತಿದರು. ಇದಕ್ಕೆ ಪ್ರತಿಕ್ರಿಯಿಸಿದ ದೊರೆಸ್ವಾಮಿ, ‘ಸಾಹಿತ್ಯ, ಸಂಸ್ಕೃತಿ, ಸಂಗೀತ ಎಂದುಕೊಂಡು ಮಲಗಿರಬೇಡಿ. ದೇಶವನ್ನು ಕುರಿತು ಕೊಂಚವಾದರೂ ಚಿಂತಿಸಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT