ಶುಕ್ರವಾರ, ಅಕ್ಟೋಬರ್ 30, 2020
27 °C
ಕಾರ್ಮಿಕರಿಗೆ ಮಾರಕವಾಗುವ ಅಂಶಗಳನ್ನು ವಿವರಿಸಿದ ಕಾರ್ಯಕರ್ತರು

ಮೈಸೂರು: ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ಜೆಸಿಟಿಯುನಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಾರ್ಮಿಕ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ನೂತನ ಕಾರ್ಮಿಕ ಕಾನೂನುಗಳು ಕಾರ್ಮಿಕ ಸ್ನೇಹಿ ಆಗಿಲ್ಲ. ಬದಲಿಗೆ, ಬಂಡವಾಳಷಾಹಿಗಳನ್ನು ಓಲೈಸುವಂತಿದೆ ಎಂದು ಕಿಡಿಕಾರಿದರು.

ಇದುವರೆಗೂ 100ಕ್ಕಿಂತ ಹೆಚ್ಚು ಇರುವ ಕಾರ್ಖಾನೆಯನ್ನು ಮುಚ್ಚಲು, ಲೇ ಆಫ್ ಮಾಡಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಆದರೆ, ಇದರ ಮಿತಿಯನ್ನು ಈಗ 300ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಕಾರ್ಮಿಕರ ಕೆಲಸದ ಭದ್ರತೆಗೆ ಧಕ್ಕೆಯಾಗುವಂತಾಗಿದೆ ಎಂದು ಅವರು ಅಳಲು ತೋಡಿಕೊಂಡರು.

ಈ ಮೊದಲು ಮುಷ್ಕರ ನಡೆಸಲು 14 ದಿನಗಳ ಮುಂಚಿತವಾಗಿ ನೋಟಿಸ್ ನೀಡಬಹುದಿತ್ತು. ಈಗ 60 ದಿನಗಳಿಗೆ ಮುಂಚೆ ನೀಡಬೇಕಿದೆ. ಜತೆಗೆ, ಸಂಧಾನ ಅಧಿಕಾರಿಯ ಮುಂದೆ, ಕೈಗಾರಿಕಾ ರಾಜ್ಯ ಪರಿಹಾರ ಮಂಡಳಿ, ರಾಷ್ಟ್ರೀಯ ಕೈಗಾರಿಕಾ ವ್ಯಾಜ್ಯ ಪರಿಹಾರ ಮಂಡಳಿಗಳಲ್ಲಿ ವಿಚಾರಣೆ ನಡೆಸುವ ವೇಳೆ ಮುಷ್ಕರ ನಡೆಸುವಂತಿಲ್ಲ ಎಂದು ಮಾರ್ಪಾಡಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ನ್ಯಾಯ ಸಿಗುವ ಸಾಧ್ಯತೆ ತೀರ ಕಡಿಮೆಯಾಗಿದೆ ಮತ್ತು ವಿಳಂಬವಾಗಿದೆ ಎಂದು ಹೇಳಿದರು.

ಕಾನೂನುಬಾಹಿರ ಮುಷ್ಕರ, ನಿಯಮ ಉಲ್ಲಂಘನೆ ಮೊದಲಾದ ಕ್ರಮಗಳ ಮೂಲಕ ಕಾರ್ಮಿಕರಿಗೆ, ಕಾರ್ಮಿಕರ ನಾಯಕರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಅವಕಾಶ ನೀಡಲಾಗಿದೆ. ಈ ನಿಯಮವನ್ನು ಮಾಲೀಕರು ಮತ್ತು ಸರ್ಕಾರ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದು ಪ್ರಜಾತಾಂತ್ರಿಕವಾಗಿ ನಡೆಸುವ ಹೋರಾಟಗಳನ್ನು ಹತ್ತಿಕ್ಕುವ ಒಂದು ಹುನ್ನಾರ ಎಂದು ಕಿಡಿಕಾರಿದರು.

ನಿಗದಿತ ಅವಧಿಯ ಉದ್ಯೋಗ ಎಂಬ ಪರಿಕಲ್ಪನೆಯನ್ನು ಪರಿಚಯಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ಕಾಯಂ ಕೆಲಸ ಎನ್ನುವುದು ಹಗಲುಗನಸಾಗಲಿದೆ ಎಂದು ಹರಿಹಾಯ್ದರು.

ಗುತ್ತಿಗೆ ಕಾರ್ಮಿಕರ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಗುತ್ತಿಗೆ ಕಾರ್ಮಿಕರ ಬದುಕು ಅತಂತ್ರವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಐಟಿಯುಸಿಯ ಎಚ್.ಆರ್.ಶೇಷಾದ್ರಿ, ಸಿಐಟಿಯುನ ಬಾಲಾಜಿರಾವ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು