ಗುರುವಾರ , ಮೇ 26, 2022
29 °C

ವಿಧಾನ ಪರಿಷತ್‌ ಗೋಮುಖ ವ್ಯಾಘ್ರರ ತಾಣ: ಕುರುಬೂರು ಶಾಂತಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಚಿಂತಕರ ಚಾವಡಿಯಾದ ವಿಧಾನಪರಿಷತ್ ಗೋಮುಖ ವ್ಯಾಘ್ರಗಳ ತಾಣವಾಗಿ ಪರಿವರ್ತನೆಯಾಗುತ್ತಿದೆ. ಅದನ್ನು ರದ್ದು ಮಾಡಬೇಕು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಇಲ್ಲಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಈ ಸಂಬಂಧ ರಾಜ್ಯಪಾಲರು, ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಮನವಿ ಸಲ್ಲಿಸಲಾಗುವುದು. ವಿಧಾನಪರಿಷತ್ ಎಂಬುದು ರಾಜಕೀಯ ಪಕ್ಷಗಳ ಮುಖಂಡರ, ಕುಟುಂಬ ರಾಜಕಾರಣದ ಆಸ್ತಿ ಆಗುತ್ತಿದೆ. ಭೂ ಮಾಫಿಯಾದವರು, ಕ್ರಿಮಿನಲ್ ಹಿನ್ನೆಲೆ ಇರುವವರ ರಕ್ಷಣಾ ಕೇಂದ್ರವಾಗುತ್ತಿದೆ. ಈಚೆಗೆ ನಡೆದ ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ವ್ಯಯಿಸಿ ಚುನಾವಣೆ ಎದುರಿಸಿದವರು ಜನ ಹಿತ ಕಾಪಾಡಲು ಅಸಾಧ್ಯ’ ಎಂದು ಅವರು ಹೇಳಿದರು.

‘ಆರು ರಾಜ್ಯಗಳಲ್ಲಿ ಮಾತ್ರ ವಿಧಾನಪರಿಷತ್ ಕಾರ್ಯನಿರ್ವಹಿಸುತ್ತಿದೆ. ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ರಾಜ್ಯದ ತೆರಿಗೆ ಹಣ ವ್ಯರ್ಥವಾಗಿ ಖರ್ಚಾಗುತ್ತಿದೆ ಎಂದು ಅವರು ಹೇಳಿದರು.

‘ಕೇಂದ್ರ ಸರ್ಕಾರದ ನಿಯಮ ಪಾಲಿಸದ ಟ್ರಾಕ್ಟರ್‌ ಕಂಪೆನಿಗಳು ದುಬಾರಿ ಬೆಲೆಗೆ ಟ್ರಾಕ್ಟರ್‌ಗಳನ್ನು ಮಾರಾಟ ಮಾಡುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಭತ್ತ ಖರೀದಿ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಬೇಕು. ಸರ್ಕಾರ ನಿಗದಿ ಮಾಡಿರುವ ನಿಯಮಗಳನ್ನು ಕೈಬಿಡಬೇಕು’ ಎಂದು ಅವರು ಆಗ್ರಹಿಸಿದರು.

26ರಂದು ರೈತ ದಿನಾಚರಣೆ: ಅನ್ನದಾತನ ಸ್ಮರಣೆಯ ದಿನವನ್ನು ಆಚರಿಸುವ ಸಲುವಾಗಿ ಡಿ.26ರಂದು ಮೈಸೂರಿನಲ್ಲಿ ರೈತರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ರೈತ ದಿನಾಚರಣೆ ಸಮಿತಿ ಅಧ್ಯಕ್ಷ ಡಾ.ಎಸ್‌.ಶಿವರಾಜಪ್ಪ ತಿಳಿಸಿದರು.

ಕಲಾಮಂದಿರದಲ್ಲಿ ಅಂದು ಬೆಳಿಗ್ಗೆ 10ರಿಂದ ಕಾರ್ಯಕ್ರಮ ಆರಂಭವಾಗಲಿದೆ. 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಭಾಗವಹಿಸುವರು. ಮಧ್ಯಾಹ್ನ 2.30ರಿಂದ 4.30ರವರೆಗೆ ಸಂವಾದ, ಚರ್ಚೆ ನಡೆಯಲಿದೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪದಲ್ಲಿ ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸುವರು. ವಿವಿಧ ರಾಜ್ಯಗಳಿಂದ ಸಂಪನ್ಮೂಲ ವ್ಯಕ್ತಿಗಳೂ ಭಾಗವಹಿಸುವರು ಎಂದು ಅವರು ಮಾಹಿತಿ ನೀಡಿದರು.

ನಿವೃತ್ತ ಪ್ರಾಂಶುಪಾಲರಾದ ಪ್ರೊ.ಮಹಾದೇವಯ್ಯ, ಪ್ರೊ.ಎಂ.ಎನ್.ನಾಯಕ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರು ಶಂಕರ, ನಗರ ಕಾರ್ಯದರ್ಶಿ ಶಿವರುದ್ರಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು