ಮಂಗಳವಾರ, ಅಕ್ಟೋಬರ್ 26, 2021
21 °C

ಜಯಪುರ: ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ; ರೋಗಿಗಳ ಪರದಾಟ

ಬಿಳಿಗಿರಿ ಆರ್. Updated:

ಅಕ್ಷರ ಗಾತ್ರ : | |

Prajavani

ಜಯಪುರ: ಮೈಸೂರು ತಾಲ್ಲೂಕಿನ ಜಯಪುರ ಹೋಬಳಿ ವ್ಯಾಪ್ತಿಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗದೆ ಪರದಾಡುವಂತಾಗಿದೆ.

ಹೋಬಳಿಯ 73 ಹಳ್ಳಿಗಳಿಗೆ ಇರುವುದು ನಾಲ್ಕು ಸರ್ಕಾರಿ ಆಸ್ಪತ್ರೆಗಳು ಮಾತ್ರ. ಜಯಪುರ ಸಮುದಾಯ ಆರೋಗ್ಯ ಕೇಂದ್ರ, ಬೀರಿಹುಂಡಿ, ಎಸ್.ಕಲ್ಲಹಳ್ಳಿ ಮತ್ತು ದೂರ, ಕೆ.ಸಾಲುಂಡಿ ಸರ್ಕಾರಿ ಆಸ್ಪತ್ರೆಗಳಿವೆ.

ಜಯಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ಹೆಲ್ತ್ ಇನ್‌ಸ್ಪೆಕ್ಟರ್, ಆರೋಗ್ಯ ಸಹಾಯಕರು, ಲ್ಯಾಬ್ ಟೆಕ್ನಿಷಿಯನ್, ಫಾರ್ಮಾಸಿಸ್ಟ್, ಸ್ಟಾಫ್‌ ನರ್ಸ್, ಎ.ಎನ್.ಎಂ, ಗ್ರೂಪ್ ಡಿ ಸೇರಿದಂತೆ 15 ಹುದ್ದೆಗಳು ಖಾಲಿ ಇವೆ. ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಿಬ್ಬಂದಿ ಕೊರತೆಯಿಂದ ಆರೋಗ್ಯ ಸೇವೆ ಸಿಗದೆ ಜನರಿಗೆ ತೊಂದರೆಯಾಗಿದೆ.

‘ಕಿರಿಯ ಪ್ರಾಥಮಿಕ ಕೇಂದ್ರಗಳು ಬಾಗಿಲು ಮುಚ್ಚಿವೆ. ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸೂಕ್ತ ವೈದ್ಯಕೀಯ ಸೇವೆ ಸಿಗುತ್ತಿಲ್ಲ. ಜನರು ಖಾಸಗಿ ಕ್ಲಿನಿಕ್‌ಗಳನ್ನು ಅವಲಂಬಿಸುವಂತಾಗಿದೆ’ ಎಂದು ಜಯಪುರದ ಮಹದೇವು ತಿಳಿಸಿದರು.

‘ಉದ್ಬೂರು ಮತ್ತು ಗೋಪಾಲಪುರ ಗ್ರಾಮಗಳಲ್ಲಿ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ವೈದ್ಯರು ಮತ್ತು ನರ್ಸ್‌ಗಳನ್ನು ನೇಮಿಸಿಲ್ಲ. ಜನರು ಸಣ್ಣಪುಟ್ಟ ಕಾಯಿಲೆಗಳಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯನ್ನೇ ಅವಲಂಬಿಸ ಬೇಕಾಗಿದೆ’ ಎಂದು ಗೋಪಾಲಪುರ ಗ್ರಾಮದ ವೆಂಕಟೇಶ್ ದೂರಿದರು.

‘ಉದ್ಬೂರು ಗ್ರಾಮದಲ್ಲಿ 16 ಸಾವಿರ ಜನರಿದ್ದಾರೆ. ಇಲ್ಲಿರುವ ಕಿರಿಯ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ಮೂಲಸೌಕರ್ಯ ಕಲ್ಪಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಸಿಬ್ಬಂದಿ ನೇಮಿಸಿ, 24X7 ಸೇವೆ ನೀಡಬೇಕು’ ಎಂದು ಉದ್ಬೂರು ಮಹದೇವಸ್ವಾಮಿ ಆಗ್ರಹಿಸಿದರು.

ಆರೋಗ್ಯ ಸಿಬ್ಬಂದಿ ನೇಮಕಕ್ಕೆ ಕ್ರಮ

‘ಕೋವಿಡ್ ಕರ್ತವ್ಯಕ್ಕಾಗಿ ವೈದ್ಯರು, ಆರೋಗ್ಯ ಸಿಬ್ಬಂದಿಯನ್ನು ಬೇರೆಡೆ ನಿಯೋಜಿಸಲಾಗಿತ್ತು. ಮೈಸೂರು ತಾಲ್ಲೂಕಿನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಎನ್.ಎಚ್.ಎಂ.ನಡಿ ಅನುಮತಿ ಸಿಕ್ಕಿದೆ. ತ್ವರಿತವಾಗಿ ವೈದ್ಯಕೀಯ ಸಿಬ್ಬಂದಿಯನ್ನು ಸರ್ಕಾರಿ ಆಸ್ಪತ್ರೆಗಳಿಗೆ ನೇಮಿಸಲಾಗುವುದು. ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಹದೇವಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.