ಸೋಮವಾರ, ಆಗಸ್ಟ್ 15, 2022
26 °C
ಸ್ಥಳೀಯ ಹೋರಾಟದಿಂದ ‘ಗಣಿ’ ಹಿಮ್ಮೆಟ್ಟಿಸಲು ಸಾಧ್ಯ

ಅಕ್ರಮ ಗಣಿಗಾರಿಕೆ: ಅಂಬರೀಷ್ ಆದಿಯಾಗಿ ಯಾರೂ ಸಾಚಾ ಅಲ್ಲ- ಎಸ್.ಆರ್ ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮಂಡ್ಯ ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ ವಿಚಾರವಾಗಿ ಅಂಬರೀಷ್‌ ಆದಿಯಾಗಿ ಯಾರೂ ಸಾಚಾ ಅಲ್ಲ. ಸ್ಥಳೀಯವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುವುದರಿಂದ ಗಣಿಗಾರಿಕೆ ಹಿಮ್ಮೆಟ್ಟಿಸಲು ಸಾಧ್ಯ’ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್‌.ಆರ್‌.ಹಿರೇಮಠ ತಿಳಿಸಿದರು.

‘ಅಂಗೈ ಹುಣ್ಣಿಗೆ ಕನ್ನಡ ಬೇಕೇ? ಸ್ಥಳೀಯ ಜನಪ್ರತಿನಿಧಿಗಳು ನಾಚಿಕೆಬಿಟ್ಟು, ಕೀಳುಮಟ್ಟಕ್ಕಿಳಿದು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಸರ್ಕಾರಕ್ಕೆ ರಾಜಧನ ಪಾವತಿಸುತ್ತಿಲ್ಲ. ಸ್ಥಾನಿಕ ಜನರೇ ಹೋರಾಟಕ್ಕಿಳಿದು ತಾರ್ಕಿಕ ಅಂತ್ಯ ಕಾಣಿಸಬೇಕು. ಬಳ್ಳಾರಿಯ ಗಣಿಗಾರಿಕೆ ವಿರುದ್ಧದ ಹೋರಾಟದ ಮಾದರಿಯಲ್ಲಿ ನಡೆದರೆ ಬಿಸಿ ಮುಟ್ಟಿಸಬಹುದು. ಸರ್ಕಾರಕ್ಕೆ ಸ್ವಲ್ಪವಾದರೂ ಕಾಳಜಿಯಿದ್ದರೆ ಎಲ್ಲಾ ರೀತಿಯ ಗಣಿಗಾರಿಕೆ ನಿಷೇಧಿಸಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‌ಸ್ಮಾರಕಕ್ಕೆ ವಿರೋಧ: ‘ಸ್ವಾಮಿ ವಿವೇಕಾನಂದರು ಬದುಕಿದ್ದರೆ ಎನ್‌ಟಿಎಂ ಶಾಲಾ ಆವರಣದಲ್ಲಿ ಸ್ಮಾರಕ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಇಂಥ ತಪ್ಪು ಕೆಲಸ ಮಾಡಬೇಡಿ ಎಂದು ಅವರೇ ಸಲಹೆ ನೀಡುತ್ತಿದ್ದರು. ಐತಿಹಾಸಿಕ ಜಾಗವನ್ನು ಯಾವುದೇ ಕಾರಣಕ್ಕೂ ಬೇರೆ ಸಂಸ್ಥೆಗಳಿಗೆ ಪರಭಾರೆ ಮಾಡಬಾರದು. ಈ ವಿಚಾರವಾಗಿ ನ್ಯಾಯಾಂಗ ಹೋರಾಟಕ್ಕೂ ಸಿದ್ಧ’ ಎಂದು ಹೇಳಿದರು.

ರಾಷ್ಟ್ರೀಯ ಸರ್ಕಾರ ರಚನೆಗೆ ಆಗ್ರಹ

‘ದೇಶದಲ್ಲಿನ ರೈತರ ಸಮಸ್ಯೆ ಬಗೆಹರಿಸುವಲ್ಲಿ ಹಾಗೂ ಆರೋಗ್ಯ ಸಮಸ್ಯೆ ಸುಧಾರಿಸುವಲ್ಲಿ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಿ, ರಾಷ್ಟ್ರೀಯ ಸರ್ಕಾರ ರಚನೆಗೆ ಅನುವು ಮಾಡಿಕೊಡಬೇಕು’ ಎಂದು ಸಿಟಿಜನ್‌ ಫಾರ್‌ ಡೆಮಾಕ್ರಸಿಯ ಅಧ್ಯಕ್ಷರೂ ಆಗಿರುವ ಹಿರೇಮಠ ಆಗ್ರಹಿಸಿದರು.

‘ಪ್ರಜಾತಂತ್ರದ ಮೌಲ್ಯಗಳನ್ನು ಬಲಪಡಿಸಲು ಮತ್ತು ನೈತಿಕ ಮೌಲ್ಯಗಳನ್ನು ಪುನರ್‌ ಪ್ರತಿಷ್ಠಾಪಿಸಲು ರಾಷ್ಟ್ರೀಯ ಸರ್ಕಾರಕ್ಕೆ ಸಾಧ್ಯವಾಗಲಿದೆ. ವಿಸ್ತೃತ ರಾಜಕೀಯ ದೃಷ್ಟಿಕೋನ ಇರುವ ಸಮಾಜದ ಎಲ್ಲ ವರ್ಗಗಳ ಹಾಗೂ ಎಲ್ಲ ರಾಜಕೀಯ ಪಕ್ಷಗಳ ಸಹಕಾರ ಪಡೆದರೆ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಮೋದಿ ಸರ್ಕಾರ ಕೋವಿಡ್‌–19 ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಮೊದಲ ಅಲೆಯಿಂದಲೂ ಪಾಠ ಕಲಿತಿಲ್ಲ. ತಜ್ಞರು ಮುಂಚಿತವಾಗಿಯೇ ನೀಡಿದ್ದ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ಲಕ್ಷಾಂತರ ಜನರು ಸೇರುವ ಕುಂಭಮೇಳದಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಿತು. ಚುನಾವಣೆಯಲ್ಲಿ ಬೃಹತ್‌ ರಾಜಕೀಯ ರ‍್ಯಾಲಿ ಆಯೋಜಿಸಲಾಯಿತು. ಇವುಗಳಲ್ಲಿ ಪ್ರಧಾನಿ, ಗೃಹ ಸಚಿವರೇ ಭಾಗಿಯಾಗಿದ್ದರು. ಇದರಿಂದ ಕೋವಿಡ್‌ ತೀವ್ರವಾಗಲು ಕಾರಣವಾಯಿತು’ ಎಂದು ದೂರಿದರು.

‘ಕೇಂದ್ರ ಸರ್ಕಾರವು ತಂದಿರುವ ಮೂರು ಕರಾಳ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿವೆ. ತಿದ್ದುಪಡಿ ಕಾಯ್ದೆಗಳನ್ನು ರದ್ದು ಮಾಡುವವರಿಗೆ ಹೋರಾಟ ನಡೆಯಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು