ಶನಿವಾರ, ಸೆಪ್ಟೆಂಬರ್ 18, 2021
24 °C

ದಸರಾ ಅದ್ದೂರಿಯೋ, ಸರಳವೋ? ಆನೆ ಆಯ್ಕೆ ಬಗ್ಗೆ ಜಿಲ್ಲಾಡಳಿತಕ್ಕೆ ಅರಣ್ಯ ಇಲಾಖೆ ಪತ್ರ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಎರಡು ತಿಂಗಳಷ್ಟೇ ಬಾಕಿ ಉಳಿದಿದ್ದು, ಗಜಪಡೆ ಸಿದ್ಧಗೊಳಿಸುವ ವಿಚಾರವಾಗಿ ಅರಣ್ಯ ಇಲಾಖೆಯು ಜಿಲ್ಲಾಡಳಿತಕ್ಕೆ ಪತ್ರ ಬರೆದಿದೆ.

ಈ ಬಾರಿ ದಸರೆಯು ಅ.7ರಿಂದ 15ವರೆಗೆ ನಡೆಯಲಿದ್ದು, ಇದುವರೆಗೆ ಸಿದ್ಧತೆಗಳ ಬಗ್ಗೆ ಯಾವುದೇ ಸಭೆ ನಡೆದಿಲ್ಲ. ಇಷ್ಟರಲ್ಲಿ ಆನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಪರಿಶೀಲಿಸಬೇಕಿತ್ತು. ಆ ಕೆಲಸವೂ ನಡೆದಿಲ್ಲ.

ಹೊಸ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡಿದ ಬಳಿಕವಷ್ಟೇ ಸಭೆ ನಡೆಯಬೇಕಿದೆ. ಕೋವಿಡ್‌ ಮೂರನೇ ಅಲೆಯ ಸುಳಿವು ಇರುವುದರಿಂದ ಈ ಬಾರಿಯೂ ಸರಳವಾಗಿ ಆಚರಿಸುವ ಸಾಧ್ಯತೆಯೇ ಹೆಚ್ಚಿದೆ.

ಹೀಗಾಗಿ, ‘ನಾಡಹಬ್ಬ ಸರಳವಾಗಿ ನಡೆಯಲಿದೆಯೋ? ಅದ್ದೂರಿ ಆಗಿರಲಿದೆಯೋ? ಈ ಬಾರಿ ಎಷ್ಟು ಆನೆಗಳ ಅಗತ್ಯವಿದೆ?‌‌’ ಎಂಬ ಮಾಹಿತಿ ಕೋರಿ ನಿರ್ಗಮಿತ ಡಿಸಿಎಫ್‌ ಕೆ.ಸಿ.ಪ್ರಶಾಂತ್‌ ಕುಮಾರ್‌ ಪತ್ರ ಬರೆದಿದ್ದಾರೆ.

‘ಪೂರ್ಣ ‍ಪ್ರಮಾಣದ ಗಜಪಡೆ ಬೇಕೆಂದಾದರೆ ಈಗಲೇ ಆನೆಗಳನ್ನು ಆಯ್ಕೆ ಮಾಡಿ ಸಜ್ಜುಗೊಳಿಸಬೇಕಾಗುತ್ತದೆ. ಹೀಗಾಗಿ, ಮುಂಚಿತವಾಗಿ ಮಾಹಿತಿ ನೀಡುವಂತೆ ಜಿಲ್ಲಾಡಳಿತವನ್ನು ಕೋರಲಾಗಿದೆ. ಅನುಮತಿ ಲಭಿಸಿದರೆ ವಾರದಲ್ಲಿ ಆನೆಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಪ್ರಶಾಂತ್‌ ಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಶಾಂತ್‌ ಕುಮಾರ್‌ ಎರಡು ದಿನಗಳ ಹಿಂದೆ ಕೊಪ್ಪಳಕ್ಕೆ ವರ್ಗಾವಣೆ ಗೊಂಡಿದ್ದು, ಅವರ ಸ್ಥಾನಕ್ಕೆ ಬಂದಿರುವ ಡಾ.ವಿ.ಕರಿಕಾಳನ್‌ ಬುಧವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ.

ಕೋವಿಡ್‌ ಕಾರಣ ಕಳೆದ ವರ್ಷ ಚಾಮುಂಡಿಬೆಟ್ಟ ಮತ್ತು ಅರಮನೆ ಆವರಣಕ್ಕೆ ಸೀಮಿತವಾಗಿ ಸರಳ ಹಾಗೂ ಸಾಂಪ್ರದಾಯಿಕವಾಗಿ ದಸರೆ ಆಚರಿಸಲಾಗಿತ್ತು. ಐದು ಆನೆಗಳಿಗೆ ಸೀಮಿತಗೊಳಿಸಲಾಗಿತ್ತು. ಮತ್ತಿಗೋಡು ಶಿಬಿರದ ಅಭಿಮನ್ಯು (55), ಆನೆಕಾಡು ಶಿಬಿರದ ವಿಕ್ರಮ (48), ವಿಜಯಾ (64) ಹಾಗೂ ದುಬಾರೆ ಶಿಬಿರದ ಗೋಪಿ (39), ಕಾವೇರಿ (43) ಆನೆಗಳನ್ನು ದಸರೆ ಆರಂಭಕ್ಕೆ 15 ದಿನಗಳ ಮುನ್ನ ಕರೆತರಲಾಗಿತ್ತು.

‘ಅರಣ್ಯ ಇಲಾಖೆಯಿಂದ ಪತ್ರ ಬಂದಿದ್ದು, ಗಜಪಡೆ ವಿಚಾರವಾಗಿ ಜಿಲ್ಲಾಧಿಕಾರಿ ಜೊತೆ ಚರ್ಚಿಸಲಾಗಿದೆ. ಶೀಘ್ರವೇ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎಸ್‌.ಮಂಜುನಾಥಸ್ವಾಮಿ ಪ್ರತಿಕ್ರಿಯಿಸಿದರು.

ಸಾಮಾನ್ಯವಾಗಿ ಪ್ರತಿವರ್ಷ 12 ಆನೆ ಬಳಸಲಾಗುತ್ತದೆ. ನಗರದ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅಗತ್ಯವಿರುವುದರಿಂದ ನಾಡಹಬ್ಬಕ್ಕೆ ಎರಡು ತಿಂಗಳು ಇದ್ದಾಗಲೇ ಕರೆ ತಂದು ತಾಲೀಮು ನೀಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು