ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಆನೆಗಳಿಗೆ ತೂಕ ಪರೀಕ್ಷೆ: ಐದು ಟನ್‌ ತೂಗಿದ ಕ್ಯಾಪ್ಟನ್ 'ಅಭಿಮನ್ಯು'

Last Updated 9 ಸೆಪ್ಟೆಂಬರ್ 2022, 5:32 IST
ಅಕ್ಷರ ಗಾತ್ರ

ಮೈಸೂರು: ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ ಕ್ಯಾಪ್ಟನ್‌ ‘ಅಭಿಮನ್ಯು’ ನೇತೃತ್ವದ 14 ಆನೆಗಳ ತೂಕ ಪರೀಕ್ಷೆ ನಗರದ ಧನ್ವಂತರಿ ರಸ್ತೆಯಲ್ಲಿರುವ ‘ಎಲೆಕ್ಟ್ರಾನಿಕ್‌ ವೇಬ್ರಿಡ್ಜ್‌’ನಲ್ಲಿ ಶುಕ್ರವಾರ ನಡೆಯಿತು.

‘ಅಭಿಮನ್ಯು’ 5000 ಕೆ.ಜಿ ಭಾರವಿದ್ದು, ದಸರಾ ಆನೆಗಳಲ್ಲೇ ನಾಲ್ಕನೇ ಹೆಚ್ಚು ತೂಕದ ಆನೆಯಾಗಿದೆ. ಕಳೆದ ತಿಂಗಳು ನಡೆದಿದ್ದ ತೂಕ ಪರೀಕ್ಷೆಯಲ್ಲಿ 4,770 ಕೆ.ಜಿ ಭಾರವಿದ್ದ 'ಕ್ಯಾಪ್ಟನ್' 230 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.

ಅರ್ಜುನನೇ ಭಾರ: ಎಂಟು ಬಾರಿ ಅಂಬಾರಿ ಹೊತ್ತು ಇದೀಗ ಉಳಿದ ಆನೆಗಳಿಗೆ ದಸರಾ ಅನುಭವವನ್ನು ಧಾರೆ ಎರೆಯುತ್ತಿರುವ ತಂಡದ ಹಿರಿಯ ಸದಸ್ಯನಾದ 63 ವರ್ಷ ವಯಸ್ಸಿನ ‘ಅರ್ಜುನ’, ಬರೋಬ್ಬರಿ 5950 ಕೆ.ಜಿ ತೂಗಿದನು. ನಂತರದ ಸ್ಥಾನದಲ್ಲಿ ಗೋಪಾಲಸ್ವಾಮಿ 5,460 ಕೆ.ಜಿ, ‘ಧನಂಜಯ’ 4890 ಕೆ.ಜಿ ಭಾರವಿದ್ದವು. ಈ ಎರಡೂ ಆನೆಗಳು ಕ್ರಮವಾಗಿ 320, 80 ಕೆ.ಜಿ ಹೆಚ್ಚಿಸಿಕೊಂಡಿವೆ.

425 ಕೆ.ಜಿ ಹೆಚ್ಚಿಸಿಕೊಂಡ ಬಲ 'ಭೀಮ': 2017ರ ನಂತರ ದಸರೆಗೆ ಬಂದಿರುವ 'ಭೀಮ' ಎಲ್ಲ ಆನೆಗಳಿಗಿಂತ ಬರೋಬ್ಬರಿ 425 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ತಿಂಗಳ ತೂಕ ಪರೀಕ್ಷೆಯಲ್ಲಿ 3,950 ಕೆ.ಜಿ ಭಾರವಿದ್ದ ಭೀಮ 4,345 ಕೆ.ಜಿ ತೂಗಿದನು. ‘ಮಹೇಂದ್ರ’ 4,450 ಕೆ.ಜಿ ತೂಗಿದ್ದು, 200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.

ಹೆಣ್ಣಾನೆಗಳಲ್ಲಿ ‘ಕಾವೇರಿ’ 3,245, ‘ಚೈತ್ರಾ’ 3,235 ಹಾಗೂ ‘ಲಕ್ಷ್ಮಿ’ 3,150 ಕೆ.ಜಿ ತೂಕವಿದ್ದರು.

ಎರಡನೇ ತಂಡ ಆನೆಗಳಾದ ಶ್ರೀರಾಮ 4475, ಸುಗ್ರೀವ 4,785, ಗೋಪಿ 4,460 , ಪಾರ್ಥಸಾರಥಿ 3,445 ಹಾಗೂ ಹೆಣ್ಣಾನೆ ವಿಜಯಾ 2,760 ಕೆ.ಜಿ ತೂಗಿದರು.

‘ವಿಶೇಷ ಆಹಾರ ನೀಡಿದ ನಂತರ ಆನೆಗಳ ತೂಕ ಹೆಚ್ಚಾಗಿದೆ. ಕಾಡಾನೆಯಿಂದ ದಾಳಿಗೊಳಗಾಗಿದ್ದ ಭೀಮ ಆನೆ 425 ಕೆ.ಜಿ ಹೆಚ್ಚಿಸಿಕೊಂಡಿರುವುದು ಸಂತಸ ತಂದಿದೆ. ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿಯೇ ತಾಲೀಮು ನೀಡಲಾಗುತ್ತಿದ್ದು, ಸೆ.12ರ ಕುಶಾಲ ತೋಪಿನ ನಂತರ ಅರಮನೆಯಿಂದ ಬನ್ನಿಮಂಟಪದವರೆಗೂ ಎಲ್ಲ 14 ಆನೆಗಳು ನಡಿಗೆ ತಾಲೀಮಿನಲ್ಲಿ ಭಾಗಿಯಾಗಲಿವೆ ಎಂದು ಡಿಸಿಎಫ್‌ ಡಾ.ವಿ.ಕರಿಕಾಳನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT