ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಸಿಸಿ ನೆರೆ ಅಧ್ಯಯನ ಕೊಡಗಿನಿಂದ ಆರಂಭ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ
Last Updated 9 ಆಗಸ್ಟ್ 2020, 2:34 IST
ಅಕ್ಷರ ಗಾತ್ರ

ಹುಣಸೂರು: ‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಪ್ರಕೃತಿ ವಿಕೋಪ ಅಧ್ಯಯನವನ್ನು ಕೊಡಗಿನಿಂದ ಆರಂಭಿಸಿ ರಾಜ್ಯದ ಎಲ್ಲಾ ಭಾಗಕ್ಕೆ ಭೇಟಿ ನೀಡಲಿದ್ದೇನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿ ದೇವರಾಜ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಸಂಭವಿಸಿದ ನೆರೆಹಾವಳಿಗೆ ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ 34 ಸಾವಿರ ಕೋಟಿ ಪರಿಹಾರ ಧನ ‍ಪಡೆದು ಸರ್ಕಾರ ಮೌನವಹಿಸಿದ್ದು, ಪರಿಹಾರ ಸಮರೋಪಾದಿಯಲ್ಲಿ ನಡೆಯಲಿಲ್ಲ’ ಎಂದು ಆರೋಪಿಸಿದರು.

‘ನೆರೆಹಾವಳಿ ಪ್ರದೇಶಗಳಲ್ಲಿ ಆಡಳಿತ ಪಕ್ಷದ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ. ಸರ್ಕಾರದ ಲೋಪ ಹಾಗೂ ಪರಿಹಾರ ವೈಖರಿ ಕುರಿತು ಅಧ್ಯಯನ ನಡೆಸಲು ಪಕ್ಷ 5 ತಂಡ ರಚಿಸಿದ್ದು ರಾಜ್ಯ ಪ್ರವಾಸ ನಡೆಸಲಿದೆ. ಅಧ್ಯಯನದ ಸಮಗ್ರ ವರದಿಯೊಂದಿಗೆ ಸರ್ಕಾರವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಪ್ರಯತ್ನ ವಿರೋಧ ಪಕ್ಷ ಮಾಡಲಿದೆ’ ಎಂದರು.

‘ಕಳೆದ ಸಾಲಿನಲ್ಲಿ ಪ್ರಧಾನ ಮಂತ್ರಿಗಳು ನೀಡಿದ ಅನುದಾನವನ್ನು ‘ಪ್ರಸಾದ’ ಎಂದು ಸ್ವೀಕರಿಸಿದ ಮುಖ್ಯಮಂತ್ರಿಗಳು ಎರಡನೇ ಕಂತಿನ ಪರಿಹಾರಕ್ಕೆ ದೆಹಲಿಗೆ ಮಾತನಾಡಲಿಲ್ಲ. ದೇಶದಲ್ಲೇ ಅತಿ ಹೆಚ್ಚು ನೆರೆಹಾವಳಿಗೆ ಸಿಲುಕಿದ ರಾಜ್ಯ ಕರ್ನಾಟಕವಾಗಿದ್ದರೂ ಪ್ರಧಾನಿಗಳು ರಾಜ್ಯಕ್ಕೆ ಭೇಟಿ ನೀಡಲಿಲ್ಲ ಬದಲಿಗೆ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು’ ಎಂದು ಲೇವಡಿ ಮಾಡಿದರು.

‘ರಾಜ್ಯದಾದ್ಯಂತ ನೆರೆಹಾವಳಿ ಸಂಭವಿಸಿದ್ದರೂ ಕಾವೇರಿ ನಾಡಿಗೆ ಮೊದಲು ಭೇಟಿ ನೀಡಿ ನಂತರದಲ್ಲಿ ಸಮಗ್ರ ಪ್ರವಾಸ ನಡೆಸಲಿದ್ದೇನೆ. ಉತ್ತರ ಕರ್ನಾಟಕದಲ್ಲಿ ಮುಂಚಿತವಾಗಿ ನೆರೆಹಾವಳಿ ಆಗಿದ್ದು, ಈ ಪ್ರದೇಶಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಯನ ತಂಡ ಭೇಟಿ ನೀಡಿ ವೀಕ್ಷಿಸಿ ವರದಿ ಸಿದ್ಧಗೊಳಿಸುತ್ತಿದೆ’ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅಸಡ್ಡೆ: ‘ರೈತರ ಬೆಳೆಗೆ ಪರಿಹಾರ ನೀಡುವ ವಿಷಯದಲ್ಲಿ ‌‌ಸರ್ಕಾರ ಅಸಡ್ಡೆ ತೋರಿಸಿದೆ. ಬಿ.ಎಸ್.ಯಡಿಯೂರಪ್ಪ ರೈತರ ಪರ ಎಂದರಾದರೂ ನೆರೆಹಾವಳಿಯಲ್ಲಿ ನೊಂದ ರೈತನಿಗೆ ಹೆಕ್ಟೇರ್‌ಗೆ ₹ 12 ಸಾವಿರ ಪರಿಹಾರ ನಿಗದಿಗೊಳಿಸಿದೆ. ವಾಣಿಜ್ಯ ಬೆಳೆ ಶುಂಠಿ, ತಂಬಾಕು ಮತ್ತು ಮುಸುಕಿನ ಜೋಳಕ್ಕೆ ಪರಿಹಾರ ನೀಡಬೇಕು ಹಾಗೂ ಪರಿಹಾರ ಮೊತ್ತ ಹೆಚ್ಚಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಕೆ.ಪಿಸಿಸಿ ಅಧ್ಯಕ್ಷರೊಂದಿಗೆ ಶಾಸಕ ಮಂಜುನಾಥ್, ಮುಖಂಡ ಆರ್.ಧ್ರುವನಾರಾಯಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಭಾಗ್ಯಮ್ಮ ಸೋಮಶೇಖರ್, ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT