ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಜೋಡೊ ಯಾತ್ರೆ, 30 ಸಾವಿರ ಕಾರ್ಯಕರ್ತರು ಭಾಗಿ: ಎಚ್.ಸಿ.ಮಹದೇವಪ್ಪ

Last Updated 22 ಸೆಪ್ಟೆಂಬರ್ 2022, 14:40 IST
ಅಕ್ಷರ ಗಾತ್ರ

ಮೈಸೂರು: ‘ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ಭಾರತ್ ಜೋಡೊ’ ಪಾದಯಾತ್ರೆಯು ಸೆ.30ರಂದು ಕರ್ನಾಟಕ ಪ್ರವೇಶಿಸಲಿದ್ದು, ಯಶಸ್ಸಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಯಾತ್ರೆಯ ಮೈಸೂರು ಲೋಕಸಭಾ ಕ್ಷೇತ್ರದ ಉಸ್ತುವಾರಿ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅ.1, 2 ಮತ್ತು 3ರಂದು ಜಿಲ್ಲೆಯಲ್ಲಿ ಯಾತ್ರೆ ಸಂಚರಿಸಲಿದೆ. 30ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗಲಿದ್ದಾರೆ’ ಎಂದು ಹೇಳಿದರು.

‘ಸೆ.30ರಂದು ಗುಂಡ್ಲುಪೇಟೆ ಮೂಲಕ ರಾಜ್ಯವನ್ನು ಪ್ರವೇಶಿಸಲಿದೆ. ಅ.1ರಂದು ತಾಂಡವಪುರಕ್ಕೆ ಬರಲಿದೆ. ಅ.2ರಂದು ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಿಸಲಾಗುವುದು. ಸಂಜೆ, ತಾಂಡವಪುರದಲ್ಲಿ ಪಾದಯಾತ್ರೆ ನಡೆಯಲಿದ್ದು, ಅಲ್ಲಿ ವಾಸ್ತವ್ಯ ಹೂಡಲಾಗತ್ತದೆ. ಅ.3ರಂದು ಮೈಸೂರಿಗೆ ಆಗಮಿಸಲಿದ್ದು, 14 ಕಿ.ಮೀ. ಪಾದಯಾತ್ರೆ ಇರಲಿದೆ. ಬಳಿಕ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕ್ಕೆ ತೆರಳಲಿದೆ’ ಎಂದರು.

‘ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಈ ಯಾತ್ರೆ ನಡೆಸುತ್ತಿಲ್ಲ. ಕೋಮುವಾದಿ ಬಿಜೆಪಿಯಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಅಪಾಯದ ಕುರಿತು ಜನರಿಗೆ ಜಾಗೃತಿ ಮೂಡಿಸಲು ನಡೆಸುತ್ತಿದ್ದೇವೆ’ಎಂದುಹೇಳಿದರು.

‘ದಲಿತರಲ್ಲಿ ಸಬಲರಾದವರಿಗೆ ಮೀಸಲಾತಿ ಅಗತ್ಯವಿಲ್ಲ ಎಂದಿರುವ ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಅನೇಕರ ಹೇಳಿಕೆಗಳಿಂದ ಬಿಜೆಪಿಯು ದಲಿತರ ವಿರೋಧಿ ಎಂಬುದು ಸಾಬೀತಾಗಿದೆ. ಮೀಸಲಾತಿ ಬೇಡ ಎನ್ನುವುದಾದರೆ ಬಿಜೆಪಿಯಲ್ಲಿ ಗೋವಿಂದ ಕಾರಜೋಳ ಮತ್ತು ರಮೇಶ್ ಜಿಗಜಿಣಗಿ ಅವರನ್ನೇಕೆ ಇಟ್ಟುಕೊಂಡಿದ್ದೀರಿ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಮಾಲೂರಿನಲ್ಲಿ ದೇವರ ಕೋಲು ಮುಟ್ಟಿದ ಎಂಬ ಕಾರಣಕ್ಕೆ ದಲಿತ ಬಾಲಕನಿಗೆ ದಂಡ ವಿಧಿಸಿರುವುದು ಖಂಡನೀಯ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಅಸ್ಪೃಸ್ಯತೆ ಆಚರಣೆಯು ಇಂದಿಗೂ ಇರುವುದನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದರು.

ಇದಕ್ಕೂ ಮುನ್ನ ನಡೆದ ಮುಖಂಡರ ಸಭೆಯಲ್ಲಿ ಮಹದೇವಪ್ಪ ಮಾತನಾಡಿದರು. ಮುಖಂಡರಾದ ವಾಸು, ಎಂ.ಕೆ.ಸೋಮಶೇಖರ್, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ನಗರಪಾಲಿಕೆ ಸದಸ್ಯೆ ಎಚ್.ಎಂ.ಶಾಂತಕುಮಾರಿ, ನಟಿ ಉಮಾಶ್ರೀ, ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್, ಮುಖಂಡರಾದ ಮಂಜುಳಾ ಮಾನಸ, ಮೋದಾಮಣಿ, ಬಿ.ಕೆ.ಪ್ರಕಾಶ್, ಅನಂತು, ಆರೀಫ್ ಹುಸೇನ್, ನಾರಾಯಣ, ಪುಷ್ಪಲತಾ ಚಿಕ್ಕಣ್ಣ, ಬಿ.ಎಂ.ರಾಮು, ಎಂ.ಶಿವಣ್ಣ ಪಾಲ್ಗೊಂಡಿದ್ದರು.

ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ
ಬಿಜೆಪಿಗೆ ಸಾಮಾಜಿಕ ಬದ್ಧತೆ, ಸಂವಿಧಾನದ ಬಗ್ಗೆ ಗೌರವ ಇಲ್ಲ. ಈ ದೇಶದಲ್ಲಿ ಒಂದು ಧರ್ಮದ ಆಡಳಿತ ತರುವುದು ಸಾಧ್ಯವಾಗುವುದಿಲ್ಲ.
–ಡಾ.ಎಚ್‌.ಸಿ.ಮಹದೇವಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT